ಐಪಿಎಲ್ 19ನೇ ಆವೃತ್ತಿ ಮುಗಿಯುತ್ತಿದ್ದಂತೆ ಈ ಮೂರು ತಂಡದ ನಾಯಕರಿಗೆ ಕಾದಿದೆ ಸಂಕಷ್ಟ: ಗೇಟ್ಪಾಸ್ ಗ್ಯಾರಂಟಿ! IPL
- ಸತತ ವೈಫಲ್ಯದ ಹಿನ್ನೆಲೆಯಲ್ಲಿ ಅಕ್ಷರ್ ಪಟೇಲ್, ರಿಷಭ್ ಪಂತ್ ಮತ್ತು ಅಜಿಂಕ್ಯ ರಹಾನೆ ಅವರ ನಾಯಕತ್ವಕ್ಕೆ ಕುತ್ತು
- ಬ್ಯಾಟಿಂಗ್-ಬೌಲಿಂಗ್ ವೈಫಲ್ಯ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಆಡಳಿತ ಬದಲಾವಣೆಯಿಂದ ನಾಯಕತ್ವ ಕಳೆದುಕೊಳ್ಳಲಿದ್ದಾರೆ ಅಕ್ಷರ್
- 25 ಕೋಟಿಗೆ ಹರಾಜಾದರೂ ಲಖನೌ ತಂಡಕ್ಕೆ ಆಸರೆಯಾಗದ ಪಂತ್ ಮೇಲೆ ಮಾಲೀಕ ಸಂಜೀವ್ ಗೋಯೆಂಕಾ ಅಸಮಾಧಾನ
- ವಯಸ್ಸು ಮತ್ತು ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ಕೆಕೆಆರ್ ತಂಡದಿಂದ ಅಜಿಂಕ್ಯ ರಹಾನೆ ಹೊರಬೀಳುವ ಸಾಧ್ಯತೆ ದಟ್ಟ
IPL : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂತ್ಯಗೊಳ್ಳುತ್ತಿರುವ ಬೆನ್ನಲ್ಲೇ, ಸತತ ಎರಡು ಸೀಸನ್‌ಗಳಲ್ಲಿ ತಮ್ಮ ತಂಡಗಳನ್ನು ಪ್ಲೇ-ಆಫ್‌ಗೆ ತಲುಪಿಸುವಲ್ಲಿ ವಿಫಲರಾದ ಅಜಿಂಕ್ಯ ರಹಾನೆ, ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ ಅವರ ನಾಯಕತ್ವಕ್ಕೆ ಕುತ್ತು ಬಂದಿದೆ. ಲಖನೌ ಸೂಪರ್ ಜೈಂಟ್ಸ್ ಈಗಾಗಲೇ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿರುವುದರಿಂದ ರಿಷಭ್ ಪಂತ್ ತೀವ್ರ ಟೀಕೆಗೆ ಗುರಿಯಾಗಿದ್ದರೆ, ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಅಕ್ಷರ್ ಪಟೇಲ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕೂಡ ಲೀಗ್‌ನ ಅಂತಿಮ ಹಂತ ತಲುಪುವ ಸಾಧ್ಯತೆಗಳು ಕ್ಷೀಣಿಸಿವೆ. ಈ ಹೀನಾಯ ಪ್ರದರ್ಶನಗಳ ಹಿನ್ನೆಲೆಯಲ್ಲಿ, ಈ ಮೂವರು ಆಟಗಾರರು ಮುಂಬರುವ ದಿನಗಳಲ್ಲಿ ತಮ್ಮ ನಾಯಕತ್ವದ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಸೂಚಿಸಿವೆ.
ನಾಯಕ ಹಾಗೂ ಆಟಗಾರನಾಗಿ ಅಕ್ಷರ್ ಪಟೇಲ್ ಅವರ ಕಳಪೆ ಪ್ರದರ್ಶನವು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅವರ ನಾಯಕತ್ವದ ಭವಿಷ್ಯದ ಮೇಲೆ ಕರಿನೆರಳು ಬೀರಿದೆ. ಒಂಬತ್ತು ಇನಿಂಗ್ಸ್‌ಗಳಲ್ಲಿ ಕೇವಲ 112.50 ರ ಸ್ಟ್ರೈಕ್ ರೇಟ್‌ನಲ್ಲಿ 100 ರನ್ ಗಳಿಸಿರುವುದು ಮತ್ತು ಬೌಲಿಂಗ್‌ನಲ್ಲಿಯೂ ತಮ್ಮ ಪೂರ್ಣ ಕೋಟಾವನ್ನು ಬಳಸಿಕೊಳ್ಳದೆ ಎದುರಾಳಿಗಳ ಮೇಲೆ ಒತ್ತಡ ಹೇರಲು ವಿಫಲವಾಗಿರುವುದು ಅವರ ಹಿನ್ನಡೆಗೆ ಕಾರಣವಾಗಿದೆ. ಅಲ್ಲದೆ, ಮೈದಾನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ತರಬೇತುದಾರರ ಮೇಲೆ ಅತಿಯಾಗಿ ಅವಲಂಬಿತರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಮುಂದಿನ ಸೀಸನ್‌ನಲ್ಲಿ ಜೆಎಸ್‌ಡಬ್ಲ್ಯೂ (JSW) ವ್ಯವಸ್ಥಾಪನಾ ಜವಾಬ್ದಾರಿ ವಹಿಸಿಕೊಳ್ಳಲಿರುವುದರಿಂದ ಅಕ್ಷರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ ದಟ್ಟವಾಗಿದೆ.
ತಂಡದ ಆಟಗಾರರ ಆಯ್ಕೆ ಮತ್ತು ಕಾರ್ಯತಂತ್ರದ ವಿಷಯದಲ್ಲೂ ಅಕ್ಷರ್ ಮತ್ತು ಮ್ಯಾನೇಜ್‌ಮೆಂಟ್ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿರುವುದು ಟೀಕೆಗೆ ಗುರಿಯಾಗಿದೆ. ಅಭಿಷೇಕ್ ಪೋರೆಲ್ ಅವರಂತಹ ಆಕ್ರಮಣಕಾರಿ ಬ್ಯಾಟರ್‌ಗಳನ್ನು ಕಡೆಗಣಿಸಿದ್ದು ಮತ್ತು ಅನುಭವದ ಕೊರತೆಯಿರುವ ಯುವ ಆಟಗಾರರನ್ನು ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿಸಿದ್ದು ತಂಡಕ್ಕೆ ಮುಳುವಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮುಂಬರುವ ಮೆಗಾ ಹರಾಜಿನ ವೇಳೆಗೆ ಅಕ್ಷರ್ ಒಬ್ಬ ಆಟಗಾರನಾಗಿ ತಂಡದಲ್ಲಿ ಉಳಿದುಕೊಂಡರೂ, ತಂಡದ ನಾಯಕನಾಗಿ ಮುಂದುವರಿಯುವುದು ಮಾತ್ರ ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.
ಪಂತ್ ಪರಿಸ್ಥಿತಿ ಏನು?
ಇನ್ನೂ ರಿಷಭ್ ಪಂತ್ ವಿಚಾರಕ್ಕೆ ಬರುವುದಾದರೆ, ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಫಾರ್ಮ್ ಲಖನೌ ಸೂಪರ್ ಜೈಂಟ್ಸ್ (LSG) ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸುಮಾರು 25 ಕೋಟಿ ರೂಪಾಯಿಗಳ ಭಾರಿ ಮೊತ್ತಕ್ಕೆ ಹರಾಜಾದ ಪಂತ್, 11 ಪಂದ್ಯಗಳಲ್ಲಿ ಕೇವಲ 251 ರನ್ ಗಳಿಸುವ ಮೂಲಕ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಅವರ 138ರ ಸ್ಟ್ರೈಕ್ ರೇಟ್ ಆಧುನಿಕ ಟಿ20 ಕ್ರಿಕೆಟ್ ಗುಣಮಟ್ಟಕ್ಕೆ ತಕ್ಕಂತಿಲ್ಲ ಹಾಗೂ ಕೇವಲ ಒಂಬತ್ತು ಸಿಕ್ಸರ್‌ಗಳನ್ನು ಬಾರಿಸಿರುವುದು ಅವರು ಅನುಭವಿಸುತ್ತಿರುವ ಒತ್ತಡಕ್ಕೆ ಸಾಕ್ಷಿಯಾಗಿದೆ. ಮಾಲೀಕ ಸಂಜೀವ್ ಗೋಯೆಂಕಾ ಅವರು ತಂಡದ ಸತತ ವೈಫಲ್ಯಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ದುಬಾರಿ ಸಂಭಾವನೆಗೆ ತಕ್ಕಂತೆ ಪಂತ್ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ ಅವರ ನಾಯಕತ್ವದ ಭವಿಷ್ಯ ಅನಿಶ್ಚಿತವಾಗಿದೆ.
ಬ್ಯಾಟಿಂಗ್ ಮಾತ್ರವಲ್ಲದೆ, ಪಂತ್ ಅವರ ತಾಂತ್ರಿಕ ನಿರ್ಧಾರಗಳು ಮತ್ತು ತಂಡದ ಸಂಯೋಜನೆಯೂ ಕೂಡ ಟೀಕೆಗೆ ಗುರಿಯಾಗಿದೆ. ಅರ್ಶಿನ್ ಕುಲಕರ್ಣಿ ಅವರನ್ನು ಆರಂಭಿಕರಾಗಿ ಕಳುಹಿಸಿದ್ದು ಮತ್ತು ಹಿಮ್ಮತ್ ಸಿಂಗ್ ಹಾಗೂ ಆಯುಷ್ ಬದೋನಿ ಅವರಿಗೆ ಪದೇ ಪದೇ ಅವಕಾಶ ನೀಡಿದ ನಿರ್ಧಾರಗಳು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿವೆ. ಐಡೆನ್ ಮಾರ್ಕ್ರಾಮ್ ಮತ್ತು ನಿಕೋಲಸ್ ಪೂರನ್ ಅವರ ಕಳಪೆ ಫಾರ್ಮ್ ತಂಡಕ್ಕೆ ಹಿನ್ನಡೆಯುಂಟು ಮಾಡಿದರೂ, ಪಂತ್ ಅವರಲ್ಲಿ ಚುಟುಕು ಕ್ರಿಕೆಟ್‌ಗೆ ಅಗತ್ಯವಿರುವ ಚಾಣಾಕ್ಷ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಸತತ ಎರಡು ಸೀಸನ್‌ಗಳಲ್ಲಿ ಪ್ಲೇ-ಆಫ್ ತಲುಪಲು ವಿಫಲವಾಗಿರುವುದು ಫ್ರಾಂಚೈಸಿ ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ಹೀಗಾಗಿ, ಪಂತ್ ಕೂಡ ತಮ್ಮ ನಾಯಕತ್ವ ಕಳೆದುಕೊಂಡರೆ ಅಚ್ಚರಿಪಡಬೇಕಿಲ್ಲ.
ರಹಾನೆ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ
ಕೋಲ್ಕತ್ತ ನೈಟ್ ರೈಡರ್ಸ್ (KKR) ತಂಡದಲ್ಲಿ ಅಜಿಂಕ್ಯ ರಹಾನೆ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಪ್ರದರ್ಶನವು ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿದೆ. ತಂಡದಲ್ಲಿ ನಾಯಕತ್ವಕ್ಕೆ ಪರ್ಯಾಯ ಆಯ್ಕೆಗಳಿಲ್ಲದ ಕಾರಣ ರಹಾನೆ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ, ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಹಾನೆ ಮತ್ತು ಯುವ ಆಟಗಾರ ಅಂಗ್‌ಕ್ರಿಶ್ ರಘುವಂಶಿ ಆಧುನಿಕ ಟಿ20 ಕ್ರಿಕೆಟ್‌ಗೆ ಅಗತ್ಯವಿರುವ ವೇಗದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ರಹಾನೆ 133ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 237 ರನ್ ಗಳಿಸಿದ್ದು, ಇವರಿಬ್ಬರ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ತಂಡವು ಬಹುತೇಕ ಪಂದ್ಯಗಳಲ್ಲಿ ಆರಂಭಿಕ ವೇಗವನ್ನು ಕಳೆದುಕೊಂಡಿತು.
ತಾಂತ್ರಿಕವಾಗಿ ರಹಾನೆ ಮತ್ತು ರಘುವಂಶಿ ಇಬ್ಬರನ್ನೂ ಒಂದೇ ತಂಡದಲ್ಲಿ ಆಡಿಸಿದ ಮ್ಯಾನೇಜ್‌ಮೆಂಟ್‌ನ ಹಠಮಾರಿ ನಿರ್ಧಾರ ತಂಡಕ್ಕೆ ಭಾರಿ ಹೊಡೆತ ನೀಡಿದೆ. 37 ವರ್ಷದ ರಹಾನೆ ಬದಲಾಗುತ್ತಿರುವ ಟಿ20 ಕ್ರಿಕೆಟ್‌ಗೆ ಹೊಂದಿಕೊಳ್ಳಲು ಪರದಾಡುತ್ತಿದ್ದು, ಅವರ ಸ್ಟ್ರೈಕ್ ರೇಟ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಅವರು ನೀಡಿದ ಸಮರ್ಥನೆಗಳು ಮೈದಾನದಲ್ಲಿ ಫಲ ನೀಡಿಲ್ಲ. ಅಕ್ಷರ್ ಪಟೇಲ್ ಅಥವಾ ರಿಷಭ್ ಪಂತ್ ಅವರಂತೆ ರಹಾನೆ ಅವರಿಗೆ ಆಟಗಾರನಾಗಿ ಬೇಡಿಕೆ ಉಳಿಯುವುದು ಅನುಮಾನವಾಗಿದ್ದು, ಮುಂದಿನ ಹರಾಜಿನಲ್ಲಿ ಕೆಕೆಆರ್ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅವರನ್ನು ತಂಡದಲ್ಲಿ ಉಳಿಸಿಕೊಂಡರೂ ಅದು ತಂಡದ ಪ್ರಗತಿಗೆ ಹಿನ್ನಡೆಯಾಗಬಹುದು ಎಂದು ವಿಶ್ಲೇಷಿಸಲಾಗಿದೆ, (ಏಜೆನ್ಸೀಸ್).