ನವದೆಹಲಿ: ಐಪಿಎಲ್ 13ನೇ ಆವೃತ್ತಿಯನ್ನು ಈ ವರ್ಷವೇ ಆಯೋಜನೆ ಮಾಡದೆ ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ ನಷ್ಟವಾಗುವುದನ್ನು ತಪ್ಪಿಸುವ ಸಲುವಾಗಿ ಬಿಸಿಸಿಐ ವಿವಿಧ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ವಿದೇಶದಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸುವುದು ಕೂಡ ಇದರಲ್ಲೊಂದು ಆಯ್ಕೆಯಾಗಿ ಪರಿಶೀಲನೆಯಲ್ಲಿದೆ. ಆದರೆ ಇದು ಮಂಡಳಿ ಮುಂದಿರುವ ಕೊನೆಯ ಆಯ್ಕೆಯೂ ಆಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್ ಇಡುವ ತನಕ…
ಭಾರತದಲ್ಲಿ ಕರೊನಾ ಹಾವಳಿ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಈ ವರ್ಷವೇ ಐಪಿಎಲ್ ಆಯೋಜಿಸದಿದ್ದರೆ ಬಿಸಿಸಿಐ ಭಾರಿ ನಷ್ಟ ಎದುರಿಸಬೇಕಾಗುತ್ತದೆ. ‘ಎಲ್ಲ ಆಯ್ಕೆಗಳನ್ನು ಮಂಡಳಿ ಪರಿಶೀಲಿಸುತ್ತಿದೆ. ಐಪಿಎಲ್ ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸುವ ಅನಿವಾರ್ಯತೆ ಎದುರಾದರೆ ಅದಕ್ಕೂ ಸಿದ್ಧರಾಗಿದ್ದೇವೆ. ಆದರೆ ಅದು ಕೊನೆಯ ಆಯ್ಕೆಯಾಗಿರುತ್ತದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ‘ಐಪಿಎಲ್ ಟೂರ್ನಿಯನ್ನು ಈ ಹಿಂದೆಯೂ ವಿದೇಶದಲ್ಲಿ ಆಯೋಜಿಸಿದ್ದೇವೆ. ಮತ್ತೊಮ್ಮೆ ಅಂಥ ಕ್ರಮಕ್ಕೆ ಮುಂದಾಗಬಹುದು. ಆದರೆ ಭಾರತದಲ್ಲೇ ಟೂರ್ನಿ ಆಯೋಜಿಸುವುದು ಮೊದಲ ಆದ್ಯತೆಯಾಗಿರುತ್ತದೆ’ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಸಾರ್ವತ್ರಿಕ ಚುನಾವಣೆಯಿಂದಾಗಿ 2009ರಲ್ಲಿ ಸಂಪೂರ್ಣ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದರೆ, 2014ರಲ್ಲಿ ಟೂರ್ನಿಯ ಮೊದಲ ಹಂತ ಯುಎಇಯಲ್ಲಿ ನಡೆದಿತ್ತು. ಇತ್ತೀಚೆಗಷ್ಟೇ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಐಪಿಎಲ್ ಆಯೋಜನೆಗೆ ಸಿದ್ಧವಾಗಿರುವುದಾಗಿ ಹೇಳಿತ್ತು.
ಇದನ್ನೂ ಓದಿ: ಬಿಪಿಎಲ್ ಕಾರ್ಡುದಾರರ ಗಮನಕ್ಕೆ: ನಕಲಿ ಮತ್ತು ಅನರ್ಹರ ವಿರುದ್ಧ ಕ್ರಮ ತೆಗೆದುಕೊಳ್ತೇವೆ ಎಂದು ಎಚ್ಚರಿಕೆ ನೀಡಿದ ಸಿಎಂ
ಮೂಲವೇಳಾಪಟ್ಟಿಯ ಪ್ರಕಾರ ಐಪಿಎಲ್ ಟೂರ್ನಿ ಏಪ್ರಿಲ್-ಮೇನಲ್ಲಿ ನಡೆಯಬೇಕಾಗಿತ್ತು. ಆದರೆ ಇನ್ನು ಜೂನ್ನಿಂದ ಸೆಪ್ಟೆಂಬರ್ವರೆಗೆ ಭಾರತದ ಹೆಚ್ಚಿನ ಭಾಗದಲ್ಲಿ ಮಳೆಗಾಲ. ಹೀಗಾಗಿ ಈ ಸಮಯದಲ್ಲಿ ಭಾರತದಲ್ಲಿ ಟೂರ್ನಿ ಆಯೋಜಿಸುವುದು ಕಷ್ಟ. ಇದಲ್ಲದೆ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಮುಂದೂಡಿಕೆಯಾಗದಿದ್ದರೆ ಅಕ್ಟೋಬರ್-ನವೆಂಬರ್ ಸಮಯದಲ್ಲೂ ಐಪಿಎಲ್ ಆಯೋಜನೆ ಸಾಧ್ಯವಾಗದು. ಜೂನ್ 10ರವರೆಗೆ ಟಿ20 ವಿಶ್ವಕಪ್ ಭವಿಷ್ಯವನ್ನು ಐಸಿಸಿ ಕಾಯ್ದಿರಿಸಿದೆ. ಹೀಗಾಗಿ ಟಿ20 ವಿಶ್ವಕಪ್ ಭವಿಷ್ಯವನ್ನು ಐಸಿಸಿ ನಿರ್ಧರಿಸಿದ ಬಳಿಕವೇ ಬಿಸಿಸಿಐ, ಸ್ಪಷ್ಟವಾದ ನಿರ್ಣಯ ಕೈಗೊಳ್ಳಲಿದೆ. -ಪಿಟಿಐ/ಏಜೆನ್ಸೀಸ್