ಕ್ರೀಡೆ

ಈ ನಿಯಮ Dhoniಗಾಗಿಯೇ ಮಾಡಲಾಗಿದೆ; ರಿಟೇನ್​ ನಿಯಮದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ Team India ಮಾಜಿ ಆಟಗಾರ

ಚೆನ್ನೈ: 18ನೇ ಆವೃತ್ತಿಯ ಐಪಿಎಲ್ (IPL)​ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ಟೂರ್ನಿಗೆ ಸಿದ್ಧತೆಗಳು ಆರಂಭಗೊಂಡಿವೆ. ರಿಟೇನ್​ಗೆ ಸಂಬಂಧಿಸಿದ ನಿಯಮಗಳನ್ನು ಬಿಡುಗಡೆ ಮಾಡುವ ಮೂಲಕ ಮೆಗಾ ಹರಾಜಿಗೆ ಸಂಬಂಧಿಸಿದ ಕೆಲಸಗಳಿಗೆ ಚಾಲನೆ ನೀಡಲಾಗಿದ್ದು, 2025ರಲ್ಲಿ ನಡೆಯುವ ಟೂರ್ನಿ ಈಗಿನಿಂದಲೇ ಸದ್ದು ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಇದರಲ್ಲಿ ಪ್ರಮುಖವಾಗಿ ಸುದ್ದಿಯಾಗುತ್ತಿರುವುದು ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ (Mahendra Singh Dhoni) ಎಂದರೆ ತಪ್ಪಾಗಲಾರದು.

ಅನ್​ಕ್ಯಾಪ್ಡ್​ ಪ್ಲೇಯರ್​ ಅಡಿಯಲ್ಲಿ ಧೋನಿ (Dhoni) ಅವರನ್ನು ಸಿಎಸ್​ಕೆ ಅವರನ್ನು ರಿಟೇನ್​ ಮಾಡುತ್ತಾ ಇಲ್ಲವಾ ಎಂಬ ಸುದ್ದಿ ಅಭಿಮಾನಿಗಳು ಹಾಗೂ ಕ್ರೀಡಾ ಪಂಡಿತರ ತಲೆ ಕೆಡಿಸಿದ್ದು, ಈ ವಿಚಾರ ಸದ್ಯ ಕ್ರೀಡಾ ವಲಯದಲ್ಲಿ ಚರ್ಚಾ ವಿಷಯವಾಗಿದೆ. ಏಕೆಂದರೆ ಸಿಎಸ್​ಕೆ ಸಿಇಒ ಧೋನಿ ಅವರನ್ನು ರಿಟೇನ್​ ಮಾಡುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಹೇಳುವ ಮೂಲಕ ಹೊಸ ಟ್ವಿಸ್ಟ್​ ನೀಡಿದ್ದಾರೆ. ಇದೀಗ ಈ ಕುರಿತು ಟೀಮ್​ ಇಂಡಿಯಾ ಮಾಜಿ ಆಟಗಾರ, ಆರ್​ಸಿಬಿ ತಂಡದ ನೂತನ ಮೆಂಟರ್​ ದಿನೇಶ್​ ಕಾರ್ತಿಕ್​ ಮಾತನಾಡಿದ್ದು, ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಡಿಕೆ, ಎಲ್ಲರೂ ಅನ್​ಕ್ಯಾಪ್ಡ್​ ಪ್ಲೇಯರ್​ ನಿಯಮದ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಈ ನಿಯಮದ ಪರ ಇದ್ದು, ಧೋನಿಗಾಗಿ ಈ ನಿಯಮ ಮಾಡಿದ್ದಾರೆ. ಅವರು ಐಪಿಎಲ್​ನ ಪ್ರಮುಖ ಭಾಗವಾಗಿದ್ದು, ಯಾವುದೇ ತಂಡವಾಗಿರಲಿ ಅವರು ಆಟಗಾರರ ಜೊತೆ ಇರುವ ರೀತಿ ನೋಡಿದರೆ ಎಲ್ಲವೂ ತಿಳಿಸುತ್ತದೆ. ನೀವು ಯಾವುದೇ ಟಿವಿ ಪ್ರಸಾರಕರನ್ನು ಕೇಳಬಹುದು ಮತ್ತು ಈ ವ್ಯಕ್ತಿ ಮೈದಾನಕ್ಕೆ ಕಾಲಿಟ್ಟಾಗ ರೇಟಿಂಗ್‌ಗಳು ಹೆಚ್ಚಾಗುತ್ತವೆ ಎಂಬ ಉತ್ತರ ನಿಮಗೆ ಸಿಗುತ್ತದೆ. ಇದು ಸತ್ಯ ಎಂದು ದಿನೇಶ್​ ಕಾರ್ತಿಕ್​ ಹೇಳಿದ್ದಾರೆ.

ಐಪಿಎಲ್​ ನಿಯಮ ಹೇಳುವುದೇನು?

ಐಪಿಎಲ್ 2008ರ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದಾಗಿತ್ತು. ಆದರೆ ಈ ನಿಯಮವು ಬಳಕೆಗೆ ಬಾರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಈ ನಿಯಮವನ್ನು ಮತ್ತೆ ಜಾರಿಗೊಳಿಸುವಂತೆ ಸಿಎಸ್​ಕೆ ಫ್ರಾಂಚೈಸಿ ಧೋನಿ ಸಲುವಾಗಿ ಬಿಸಿಸಿಐಗೆ ಮನವಿ ಸಲ್ಲಿಸಿತ್ತು. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಐದು ವರ್ಷಗಳಾಗುತ್ತ ಬಂದಿದ್ದು, ಹೀಗಾಗಿ ಅವರನ್ನು ಅನ್​ಕ್ಯಾಪ್ಡ್​ ಪ್ಲೇಯರ್ಸ್​​ ಎಂದು ಪರಿಗಣಿಸಲಾಗುತ್ತದೆ.