ನವದೆಹಲಿ: ಮುಂದಿನ ವರ್ಷದ ಐಪಿಎಲ್ 20ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 10 ತಂಡಗಳು ಆಟಗಾರರ ರಿಟೇನ್ ಪಟ್ಟಿಯನ್ನು ಪ್ರಕಟಿಸಲು ಮಂಗಳವಾರ ಅಂತಿಮ ಗಡುವು ಆಗಿದೆ. ತಂಡಗಳು ಯಾವ ಆಟಗಾರರನ್ನು ರಿಟೇನ್ ಮಾಡಿಕೊಳ್ಳಲಿವೆ ಮತ್ತು ಯಾರನ್ನು ಕೈಬಿಡಲಿವೆ ಎಂಬ ಬಗ್ಗೆ ತೀವ್ರ ಕುತೂಹಲಗಳು ಹರಡಿವೆ.
ಹರಾಜು ಪ್ರಕ್ರಿಯೆಗೆ ಮುನ್ನ ಈಗಾಗಲೆ ಕೆಲ ಪ್ರಮುಖ ಆಟಗಾರರ ವರ್ಗಾವಣೆ ಪ್ರಕ್ರಿಯೆಗಳು ನಡೆದಿವೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ನಿಂದ ಪಂಜಾಬ್ ಕಿಂಗ್ಸ್ಗೆ ವರ್ಗಾವಣೆ ಆಗಿದ್ದರೆ, ಎಡಗೈ ವೇಗಿ ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ಸೇರಿದ್ದಾರೆ. ರಿಷಭ್ ಪಂತ್ ಲಖನೌ ಸೂಪರ್ಜೈಂಟ್ಸ್ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ.
ಮುಂಬರುವ ಆವೃತ್ತಿಗೆ ಆಟಗಾರರ ವೇತನಕ್ಕೆ ಎಲ್ಲ ತಂಡಗಳಿಗೆ ತಲಾ 157 ಕೋಟಿ ರೂ. ವ್ಯಯಿಸಲು ಅವಕಾಶವಿದೆ. ತಂಡಗಳು ಯಾವ ಆಟಗಾರರನ್ನು ಕೈಬಿಡಲಿವೆ ಎಂಬ ಆಧಾರದಲ್ಲಿ ಹರಾಜಿಗೆ ಆಯಾ ತಂಡಗಳ ಉಳಿಕೆ ಮೊತ್ತ ನಿರ್ಧಾರವಾಗಲಿವೆ. ಹರಾಜು ಪ್ರಕ್ರಿಯೆ ಡಿಸೆಂಬರ್ 16ಕ್ಕೆ ಕೊಚ್ಚಿಯಲ್ಲಿ ನಿಗದಿಯಾಗಿದೆ.
ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಕಳೆದ 2 ಆವೃತ್ತಿಗಳ ಪ್ರಶಸ್ತಿ ಗೆಲುವಿಗೆ ನೆರವಾಗಿರುವ ತನ್ನ ಬಹುತೇಕ ಎಲ್ಲ ಪ್ರಮುಖ ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ನಿರೀಕ್ಷೆ ಇದೆ. ಸಿಎಸ್ಕೆ ತಂಡ ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ನಿರ್ವಹಣೆ ತೋರದ ತಲಾ 14.2 ಕೋಟಿ ರೂ. ಮೊತ್ತದ ಪ್ರಶಾಂತ್ ವೀರ್, ಕಾರ್ತಿಕ್ ಶರ್ಮರನ್ನು ರಿಟೇನ್ ಮಾಡಿಕೊಳ್ಳುವುದೇ ಎಂಬ ಕುತೂಹಲವಿದೆ. ಕೆಕೆಆರ್ ತಂಡ 25.20 ಕೋಟಿ ರೂ. ಮೊತ್ತದ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪಂಜಾಬ್ ಕಿಂಗ್ಸ್ ತಂಡ ಯಜುವೇಂದ್ರ ಚಾಹಲ್, ಮಾರ್ಕಸ್ ಸ್ಟೋಯಿನಿಸ್ರನ್ನು ಕೈಬಿಡುವ ಸಾಧ್ಯತೆಗಳಿವೆ. ಲಖನೌ ತಂಡ ನಿಕೋಲಸ್ ಪೂರನ್, ವಾನಿಂದು ಹಸರಂಗ ಭವಿಷ್ಯವನ್ನು ನಿರ್ಧರಿಸಬೇಕಿದೆ. ಮುಂಬೈ ತಂಡ ಟ್ರೆಂಟ್ ಬೌಲ್ಟ್, ಕ್ವಿಂಟನ್ ಡಿಕಾಕ್ ಕೈಬಿಡುವ ಸಾಧ್ಯತೆಗಳಿವೆ.
*ರಿಟೇನ್ ಪಟ್ಟಿ ಪ್ರಕಟ: ಸಂಜೆ 5.00 ನಂತರ
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಧೋನಿ ರಿಟೇನ್/ರಿಟೈರ್?
ಚೆನ್ನೈ ಸೂಪರ್ಕಿಂಗ್ಸ್ ತಂಡ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಮುಂದಿನ ವರ್ಷದ ಟೂರ್ನಿಗೂ ರಿಟೇನ್ ಮಾಡಿಕೊಳ್ಳುವುದೇ ಅಥವಾ ಅವರು ಐಪಿಎಲ್ನಿಂದಲೂ ನಿವೃತ್ತಿ ಹೊಂದುವರೇ ಎಂಬ ಕುತೂಹಲವಿದೆ. 45 ವರ್ಷದ ಧೋನಿ ಕಳೆದ ಆವೃತ್ತಿಗೆ ತಂಡದಲ್ಲಿದ್ದರೂ, ಫಿಟ್ನೆಸ್ ಸಮಸ್ಯೆಯಿಂದಾಗಿ ಒಂದೂ ಪಂದ್ಯ ಆಡಿರಲಿಲ್ಲ. ಹೀಗಾಗಿ ಅವರು ಮುಂದಿನ ಆವೃತ್ತಿಗೆ ಫಿಟ್ ಆಗುವ ಬಗ್ಗೆ ಅನುಮಾನವಿದೆ. ಅವರು ರಿಟೇನ್ ಆಗದಿದ್ದರೆ ನಿವೃತ್ತಿ ಖಚಿತವೆನಿಸಿದೆ.