ಕ್ರೀಡೆ

ಐಪಿಎಲ್ ತಂಡಕ್ಕೆ ಸೇರ್ತಾರಾ ಲಿಯೋನೆಲ್ ಮೆಸ್ಸಿ!

ಬೆಂಗಳೂರು: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಬರೋಬ್ಬರಿ 16 ವರ್ಷಗಳ ಕಾಲ ಬಾರ್ಸಿಲೋನಾ ಕ್ಲಬ್ ಪರ ಆಡಿದ ಬಳಿಕ, ಆ ತಂಡವನ್ನು ತ್ಯಜಿಸಿ ಹೊಸ ತಂಡದ ಹುಡುಕಾಟದಲ್ಲಿದ್ದಾರೆ. ಮೆಸ್ಸಿ ಬಾರ್ಸಿಲೋನಾವನ್ನು ತ್ಯಜಿಸಲು ನಿರ್ಧರಿಸಿರುವ ಸುದ್ದಿ ಕ್ರೀಡಾ ಜಗತ್ತಿನಲ್ಲಿ ಭಾರಿ ಚರ್ಚೆಗೆ ಒಳಗಾಗಿರುವ ನಡುವೆ, ಐಪಿಎಲ್ ತಂಡಗಳು ಕೂಡ ಇದೇ ವಿಚಾರದ ಚರ್ಚೆಗೆ ಬಂದಿವೆ. ಕೋಲ್ಕತ ನೈಟ್‌ರೈಡರ್ಸ್‌ ಅಂತೂ ಮೆಸ್ಸಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಿದ್ಧವಿರುವುದಾಗಿಯೂ ಹೇಳಿದೆ!

ಲಿಯೋನೆಲ್ ಮೆಸ್ಸಿಗೆ ಕೆಕೆಆರ್ ತಂಡದ ಜೆರ್ಸಿಯನ್ನೇ ತೊಡಿಸಿದ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕೋಲ್ಕತ ನೈಟ್‌ರೈಡರ್ಸ್‌ ಫ್ರಾಂಚೈಸಿ, ‘ಮಿಸ್ಟರ್ ಮೆಸ್ಸಿ, ನೇರಳೆ ಮತ್ತು ಚಿನ್ನದ ಬಣ್ಣದ ನಮ್ಮ ಸಮವಸ ಧರಿಸುವ ಬಗ್ಗೆ ಏನಂತೀರಿ’ ಎಂದು ಟ್ವೀಟಿಸಿದೆ.

ಮತ್ತೊಂದು ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಮೆಸ್ಸಿ ವಿಚಾರದಲ್ಲಿ ಟ್ವೀಟ್ ಮಾಡಿದ್ದು, ‘ಲಿಯೋನೆಲ್ ಮೆಸ್ಸಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನಾವು ಕೂಡ ಬಿಡ್ ಸಲ್ಲಿಸುತ್ತಿದ್ದೇವೆ ಎಂದು ಗಾಳಿಸುದ್ದಿಗಳು ಹರಿದಾಡುತ್ತಿದೆ. ಆದರೆ ಇದನ್ನು ನಾವು ನಿರಾಕರಿಸಲು ಬಯಸುತ್ತೇವೆ’ ಎಂದು ತಮಾಷೆಯಾಗಿ ಬರೆದುಕೊಂಡಿದೆ.