ಕ್ರೀಡೆ

ಸನ್‌ರೈಸರ್ಸ್‌ಗೆ ಪ್ಲೇಆಫ್​ಗೇರುವ ತವಕ: ಸನ್ ಸೋತರೆ ಡೆಲ್ಲಿ, ಲಖನೌಗೆ ಲಾಭ!

ಹೈದರಾಬಾದ್: ಟೂರ್ನಿಯಲ್ಲಿ ರನ್‌ಹೊಳೆ ಹರಿಸಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಪ್ಲೇಆಫ್​ ಸನಿಹದಲ್ಲಿದ್ದು, ಗುರುವಾರ ಆರ್‌ಜಿಐ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್-17ರ ತನ್ನ 13ನೇ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಗುಜರಾತ್ ಈಗಾಗಲೆ ಪ್ಲೇಆ್ ರೇಸ್‌ನಿಂದ ಹೊರಗುಳಿದಿದ್ದರೆ, ಪ್ಯಾಟ್ ಕಮ್ಮಿನ್ಸ್‌ಗೆ ಪಡೆ ಈ ಪಂದ್ಯ ಗೆದ್ದು ಅಗ್ರ-4ರಲ್ಲಿ ಸ್ಥಾನ ಖಾತ್ರಿಪಡಿಸಿಕೊಳ್ಳುವ ತವಕದಲ್ಲಿದೆ.

ಸನ್‌ರೈಸರ್ಸ್‌ ತನ್ನ ಅಂತಿಮ 2 ಲೀಗ್ ಪಂದ್ಯಗಳನ್ನೂ ತವರಿನಲ್ಲಿ ಆಡುವ ಅನೂಕೂಲ ಹೊಂದಿದೆ. ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 7 ಗೆಲುವು, 5 ಸೋಲಿನೊಂದಿಗೆ 14 ಅಂಕ ಕಲೆಹಾಕಿದೆ. ಪಂದ್ಯ ಮಳೆಯಿಂದ ರದ್ದಾದರೂ ಒಂದು ಅಂಕ ಸಂಪಾದಿಸಲಿರುವ ಸನ್‌ರೈಸರ್ಸ್‌ ಪ್ಲೇಆ್ಗೇರಲಿದೆ. ಆದರೆ ಅಗ್ರ 2ರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಕಮ್ಮಿನ್ಸ್ ಪಡೆ ಹೋರಾಡಲಿದೆ. ಜತೆಗೆ ಟೂರ್ನಿಯ ಮೊದಲ ಮುಖಾಮುಖಿಯ ಸೋಲಿಗೆ ಸೇಡು ತೀರಿಸುವ ತವಕದಲ್ಲಿದೆ. ಇನ್ನು ಕಳೆದ 2 ವರ್ಷ ಫೈನಲ್‌ಗೇರಿದ್ದ ಗುಜರಾತ್ ಟೈಟಾನ್ಸ್ ಈ ಬಾರಿ ಲೀಗ್ ಹಂತದಲ್ಲಿ ಅಭಿಯಾನ ಮುಗಿಸಲಿದ್ದು, ಗೆಲುವಿನೊಂದಿಗೆ ಟೂರ್ನಿ ಮುಗಿಸುವ ನಿರೀಕ್ಷೆಯಲ್ಲಿದೆ. ಕೆಕೆಆರ್ ವಿರುದ್ಧ ಹಿಂದಿನ ಪಂದ್ಯ ಮಳೆಯಿಂದಾಗಿ ಟಾಸ್ ಸಹ ನಡೆಯದೆ ರದ್ದುಗೊಂಡಿತ್ತು. ಆಡಿರುವ 13 ಪಂದ್ಯಗಳಲ್ಲಿ 5 ಗೆಲುವು, 7 ಸೋಲು ಹಾಗೂ 1 ರದ್ದು ಸೇರಿ 11 ಅಂಕ ಹೊಂದಿದೆ.

ಅಗ್ರ 2ರತ್ತ ರೈಸರ್ಸ್‌ ಚಿತ್ತ: ಸನರೈಸರ್ಸ್‌ ತಂಡ ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಗರಿಷ್ಠ 18 ಅಂಕ ಕಲೆಹಾಕುವ ಅವಕಾಶ ಹೊಂದಿದೆ. ಜತೆಗೆ ರಾಜಸ್ಥಾನ ಒಂದರಲ್ಲಿ ಸೋತರೂ, ಕಮ್ಮಿನ್ಸ್ ಪಡೆಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆಯುವ ಅವಕಾಶವೂ ಇರಲಿದೆ. ಏಕೆಂದರೆ ರಾಯಲ್ಸ್‌ಗಿಂತ ಸನ್‌ರೈಸರ್ಸ್‌ ಉತ್ತಮ ರನ್‌ರೇಟ್ ಹೊಂದಿದೆ. ಒಂದು ವೇಳೆ ಸನ್‌ರೈಸರ್ಸ್‌ ಉಳಿದ 2 ಪಂದ್ಯಗಳಲ್ಲಿ ಸೋತು, ಸಿಎಸ್‌ಕೆ ತಂಡವನ್ನು ಆರ್‌ಸಿಬಿ ಮಣಿಸಿದರೆ ಸನ್‌ರೈಸರ್ಸ್‌ ಟೂರ್ನಿಯಿಂದ ಹೊರಬೀಳುವ ಅಪಾಯವೂ ಇದೆ. ಸಿಎಸ್‌ಕೆ ತಂಡ 42 ರನ್‌ಗಳಿಂದ ಸೋತರೆ ಮಾತ್ರ ಸನ್‌ರೈಸರ್ಸ್‌ ರನ್‌ರೇಟ್‌ನಲ್ಲಿ ಮೇಲುಗೈ ಸಾಧಿಸಲಿದೆ. ಇಲ್ಲವಾದರೆ ಆರ್‌ಸಿಬಿ-ಸಿಎಸ್‌ಕೆ ಎರಡೂ ತಂಡಗಳು ಪ್ಲೇಆ್ಗೇರಲಿವೆ.

ಸನ್ ಸೋತರೆ ಡೆಲ್ಲಿ,ಲಖನೌಗೆ ಲಾಭ!:

ಸನ್‌ರೈಸರ್ಸ್‌ ಈ ಪಂದ್ಯದಲ್ಲಿ ಹೀನಾಯವಾಗಿ ಸೋತರೆ ಆರ್‌ಸಿಬಿ ಜತೆಗೆ ಡೆಲ್ಲಿ ಮತ್ತು ಲಖನೌ ತಂಡಗಳಿಗೂ ಲಾಭವಿದೆ. ಸನ್‌ರೈಸರ್ಸ್‌ ಕೊನೇ 2 ಪಂದ್ಯಗಳಲ್ಲಿ ಒಟ್ಟಾರೆ 194 ರನ್ ಅಂತರದಿಂದ ಸೋತರೆ ಮತ್ತು ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಗೆದ್ದರೆ ಡೆಲ್ಲಿ ತಂಡ ಪವಾಡಸದೃಶವಾಗಿ ಪ್ಲೇಆ್ಗೇರಬಹುದಾಗಿದೆ. ಇನ್ನು ಲಖನೌ ತಂಡವೂ ತನ್ನ ಕೊನೇ ಪಂದ್ಯದಲ್ಲಿ ಮುಂಬೈ ವಿರುದ್ಧ 100 ರನ್ ಅಂತರದಿಂದ ಗೆದ್ದರೆ ರನ್‌ರೇಟ್ ಸುಧಾರಿಸಲಿದೆ. ಆರ್‌ಸಿಬಿ ಮತ್ತು ಸನ್‌ರೈಸರ್ಸ್‌ ಹೀನಾಯ ಸೋಲು ಲಖನೌಗೂ 14 ಅಂಕದೊಂದಿಗೆ ಪ್ಲೇಆ್ಗೇರುವ ಅವಕಾಶ ಕಲ್ಪಿಸಲಿದೆ.

ಮುಖಾಮುಖಿ: 4

ಸನ್‌ರೈಸರ್ಸ್‌: 1

ಗುಜರಾತ್: 3

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ