ನವದೆಹಲಿ: ಕರೊನಾ ಹಾವಳಿಯ ನಡುವೆ ಕೊನೆಗೂ ಐಪಿಎಲ್ 13ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ ಮತ್ತು ಟೂರ್ನಿ ವಿದೇಶಕ್ಕೆ ಸ್ಥಳಾಂತರಗೊಳ್ಳುವುದು ಕೂಡ ದೃಢಪಟ್ಟಿದೆ. ಯುಎಇಯಲ್ಲಿ ಸೆಪ್ಟೆಂಬರ್ 19ರಂದು ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ ಮತ್ತು ನವೆಂಬರ್ 8 ಅಥವಾ 10ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಶುಕ್ರವಾರ ಖಚಿತಪಡಿಸಿದ್ದಾರೆ. ಆದರೆ ಟೂರ್ನಿಗೆ ಇನ್ನೂ ಕೇಂದ್ರ ಸರ್ಕಾರದ ಅನುಮತಿ ಸಿಗುವುದು ಬಾಕಿ ಇದೆ.
ಐಪಿಎಲ್ ಆಡಳಿತ ಮಂಡಳಿಯ ಸಭೆ ಮುಂದಿನ ವಾರ ನಿಗದಿಯಾಗಿದ್ದು, ಅದರಲ್ಲಿ ಟೂರ್ನಿಯ ರೂಪುರೇಷೆಗಳು ಅಂತಿಮಗೊಳ್ಳಲಿವೆ. ಅದಕ್ಕೆ ಮುನ್ನವೇ ಬಿಸಿಸಿಐ, ಫ್ರಾಂಚೈಸಿಗಳಿಗೆ ತನ್ನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದೆ.
‘ಆಡಳಿತ ಮಂಡಳಿ ಸಭೆ ಶೀಘ್ರದಲ್ಲೇ ನಡೆಯಲಿದೆ. ಆದರೆ ನಾವು ಅದಕ್ಕೆ ಮುನ್ನವೇ ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದೇವೆ. ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಟೂರ್ನಿ ನಡೆಯಲಿದೆ. ಸರ್ಕಾರದ ಅಂಗೀಕಾರವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಇದು 51 ದಿನಗಳ ಕಾಲ ನಡೆಯುವ ಪೂರ್ಣ ಪ್ರಮಾಣದ ಐಪಿಎಲ್ ಆಗಿರುತ್ತದೆ’ ಎಂದು ಬ್ರಿಜೇಶ್ ಪಟೇಲ್ ಬೆಳವಣಿಗೆಗಳ ಬಗ್ಗೆ ಸುದ್ದಿಸಂಸ್ಥೆಗೆ ಖಚಿತಪಡಿಸಿದ್ದಾರೆ.
ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿರುವುದರಿಂದ ಐಪಿಎಲ್ ಟೂರ್ನಿ ಆಯೋಜನೆಗೆ ಅನುಕೂಲವಾಗಿದೆ. ಮೂಲ ವೇಳಾಪಟ್ಟಿಯ ಪ್ರಕಾರ, ಐಪಿಎಲ್ 13ನೇ ಆವೃತ್ತಿ ಮಾರ್ಚ್ 29ರಿಂದ ಮೇ 17ರವರೆಗೆ ಭಾರತದಲ್ಲಿ ನಡೆಯಬೇಕಾಗಿತ್ತು. ಆದರೆ ಕರೊನಾ ಹಾವಳಿ ಮತ್ತು ಲಾಕ್‌ಡೌನ್‌ನಿಂದಾಗಿ ಟೂರ್ನಿಯನ್ನು ನಿಗದಿಯಂತೆ ನಡೆಸಲು ಬಿಸಿಸಿಐಗೆ ಸಾಧ್ಯವಾಗಿರಲ್ಲಿ.
ಕೋವಿಡ್-19 ಭೀತಿಯಿಂದಾಗಿ ಆಟಗಾರರಿಗೆ ಮಾರ್ಗಸೂಚಿಗಳನ್ನು ನೀಡುವ ಗುಣಮಟ್ಟದ ಕಾರ್ಯವಿಧಾನವನ್ನು (ಎಸ್‌ಒಪಿ) ಬಿಸಿಸಿಐ ಶ್ರೀದಲ್ಲಿಯೇ ಸಿದ್ದಪಡಿಸಲಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ಸಿದ್ಧವಾಗಲಿದೆ. ಪ್ರೇಕ್ಷಕರಿಗೆ ಅವಕಾಶ ನೀಡಬೇಕೇ, ಬೇಡವೇ ಎಂಬುದು ಯುಎಇ ಸರ್ಕಾರದ ನಿರ್ಧಾರವನ್ನು ಅವಲಂಬಿಸಿರುತ್ತದೆ. ಏನೇ ಆದರೂ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲೇಬೇಕಾಗುತ್ತದೆ. ಟೂರ್ನಿ ಆತಿಥ್ಯದ ಬಗ್ಗೆ ಯುಎಇ ಕ್ರಿಕೆಟ್ ಮಂಡಳಿಗೆ ಶ್ರೀದಲ್ಲೇ ಅಧಿಕೃತವಾಗಿ ಪತ್ರ ಬರೆಯಲಿದ್ದೇವೆ ಎಂದು ಬ್ರಿಜೇಶ್ ಪಟೇಲ್ ವಿವರಿಸಿದ್ದಾರೆ.
ಈ ಮುನ್ನ ಸೆಪ್ಟೆಂಬರ್ 26ರಂದು ಐಪಿಎಲ್ ಆರಂಭಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಡಬಲ್ ಹೆಡರ್‌ಗಳು (ಒಂದೇ ದಿನ 2 ಪಂದ್ಯ) ಹೆಚ್ಚಾದ ಬಗ್ಗೆ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್‌ನಿಂದ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಒಂದು ವಾರ ಬೇಗನೆ ಆರಂಭಿಸಿ ಡಬಲ್ ಹೆಡರ್‌ಗಳ ಸಂಖ್ಯೆ ಕಡಿತಗೊಳಿಸಲಾಗುತ್ತಿದೆ. ಇದಲ್ಲದೆ ಡಿ. 3ರಿಂದ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಆರಂಭಗೊಳ್ಳಲಿರುವ ಕಾರಣ ಟೂರ್ನಿಯನ್ನು ವಿಸ್ತರಿಸಲು ಅವಕಾಶವಿಲ್ಲದಾಗಿದೆ. ಆಸ್ಟ್ರೇಲಿಯಾ ಸರ್ಕಾರ ನಿಯಮದಂತೆ ಭಾರತ ತಂಡ ಪ್ರವಾಸದ ಆರಂಭದಲ್ಲಿ 14 ದಿನಗಳ ಕ್ವಾರಂಟನ್‌ಗೆ ಒಳಪಡುವುದು ಅಗತ್ಯವಾಗಿದೆ. ಹೀಗಾಗಿ ಆಸೀಸ್ ಪ್ರವಾಸಕ್ಕೆ ಬೇಗನೆ ತೆರಳುವುದು ಅನಿವಾರ್ಯವಾಗಿದೆ.
51 ದಿನ ಮತ್ತು 60 ಪಂದ್ಯಗಳ ಐಪಿಎಲ್ ಟೂರ್ನಿಯಲ್ಲಿ ಒಟ್ಟು 12 ಡಬಲ್ ಹೆಡರ್‌ಗಳು ಇರಲಿವೆ. ಈ ಹಿಂದಿನ ವೇಳಾಪಟ್ಟಿಯಲ್ಲಿ ಕೇವಲ 5 ಡಬಲ್ ಹೆಡರ್‌ಗಳಿದ್ದವು. 7 ವಾರಗಳ ಟೂರ್ನಿಯಲ್ಲಿ ಶನಿವಾರ ಮತ್ತು ಭಾನುವಾರ ಮಾತ್ರ ಡಬಲ್ ಹೆಡರ್‌ಗಳಿರಲಿವೆ. ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಬದಲಾಗಿ 7.30ಕ್ಕೆ ಆರಂಭಗೊಳ್ಳಲಿವೆ ಎಂದೂ ಹೇಳಲಾಗುತ್ತಿದೆ.
ಆಗಸ್ಟ್ 20ರೊಳಗೆ ಪ್ರಯಾಣ
ಐಪಿಎಲ್ ಟೂರ್ನಿಗೆ ಸಜ್ಜಾಗಲು ಎ್ಲ ತಂಡಗಳಿಗೆ 1 ತಿಂಗಳ ತರಬೇತಿ ಅಗತ್ಯವಾಗಿದೆ. ಹೀಗಾಗಿ ಆಗಸ್ಟ್ 20ರೊಳಗೆ ಎಲ್ಲ ಫ್ರಾಂಚೈಸಿಗಳೂ ಯುಎಇಗೆ ಪ್ರಯಾಣಿಸಲಿವೆ ಎನ್ನಲಾಗಿದೆ.
ಐಸಿಸಿ ಅಕಾಡೆಮಿ ಬಾಡಿಗೆಗೆ ಪಡೆಯಲಿದೆ ಬಿಸಿಸಿಐ
8 ಐಪಿಎಲ್ ತಂಡಗಳ ತರಬೇತಿಗಾಗಿ ದುಬೈನ ಐಸಿಸಿ ಕ್ರಿಕೆಟ್ ಅಕಾಡೆಮಿ ಮೈದಾನಗಳನ್ನೂ ಬಿಸಿಸಿಐ ಬಾಡಿಗೆಗೆ ಪಡೆದುಕೊಳ್ಳಲಿದೆ ಎನ್ನಲಾಗಿದೆ. ಐಸಿಸಿ ಅಕಾಡೆಮಿಯಲ್ಲಿ 2 ಪೂರ್ಣ ಅಳತೆಯ ಕ್ರಿಕೆಟ್ ಮೈದಾನಗಳಿವೆ. ಜತೆಗೆ 38 ಟರ್ ಪಿಚ್‌ಗಳು, 6 ಒಳಾಂಗಣ ಪಿಚ್‌ಗಳು ಮತ್ತು 5,700 ಚದರ ವಿಸ್ತೀರ್ಣದ ಹೊರಾಂಗಣ ಪ್ರದೇಶ, ಫಿಸಿಯೋ ಥೆರಪಿ ಮತ್ತು ವದ್ಯಕೀಯ ಕೇಂದ್ರಗಳಿವೆ.