ಕ್ರೀಡೆ

ಬೆಂಗಳೂರಿನಲ್ಲಿ ಇಂದು ಆರ್​ಸಿಬಿ-ಸಿಎಸ್​ಕೆ ನಾಕೌಟ್ ಫೈಟ್​; ​ಪ್ಲೇಆಫ್​​ ಕನಸಿನಲ್ಲಿ ಫಾಫ್​ ಡು ಪ್ಲೆಸಿಸ್​ ಪಡೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಐಪಿಎಲ್​ 17ನೇ ಆವೃತ್ತಿಗೆ 58 ದಿನಗಳ ಹಿಂದೆ ಚಾಲನೆ ದೊರೆತಾಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡಗಳು ಮುಖಾಮುಖಿ ಆಗಿದ್ದವು. ಆಗ ಟೂರ್ನಿಯಲ್ಲಿ ಶುಭಾರಂಭ ಕಾಣುವುದಷ್ಟೇ ಆರ್​ಸಿಬಿ&ಸಿಎಸ್​ಕೆ ಹಂಬಲವಾಗಿದ್ದರೆ ಇದೀಗ ಟೂರ್ನಿಯ 68ನೇ ಲೀಗ್​ ಪಂದ್ಯದಲ್ಲಿ ಶನಿವಾರ ಮರುಮುಖಾಮುಖಿ ಆಗುವ ಸಮಯದಲ್ಲಿ ಉಭಯ ತಂಡಗಳು ಮಾಡು ಇಲ್ಲವೆ ಮಡಿ ಸವಾಲು ಎದುರಿಸುತ್ತಿವೆ. ಪ್ಲೇಆಫ್​​ ರೇಸ್​ನಲ್ಲಿ ಬಾಕಿ ಉಳಿದಿರುವ ಕೊನೆಯ 4ನೇ ಸ್ಥಾನವನ್ನು ಒಲಿಸಿಕೊಳ್ಳಲು ಆರ್​ಸಿಬಿ-ಸಿಎಸ್​ಕೆ ಪಾಲಿಗೆ ಇದು ನಾಕೌಟ್​ ಸಮರವೆನಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈನಲ್ಲಿ ಅನುಭವಿಸಿದ ಸೋಲಿಗೆ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೇಡು ತೀರಿಸಿಕೊಳ್ಳುವ ಮೂಲಕ ಅಂಕಪಟ್ಟಿಯ ಅಗ್ರ 4 ತಂಡಗಳಲ್ಲಿ ಒಂದಾಗುವುದು ಫಾಫ್​ ಡು ಪ್ಲೆಸಿಸ್​ ಬಳಗದ ಕನಸಾಗಿದೆ. ಒಂದು ವೇಳೆ ಸಿಎಸ್​ಕೆ ತಂಡ ಪ್ಲೇಆಫ್​ ಹಂತಕ್ಕೇರದಿದ್ದರೆ, ಭಾರತೀಯ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕ, ವಿಕೆಟ್​ ಕೀಪರ್-ಬ್ಯಾಟರ್​ ಎಂಎಸ್​ ಧೋನಿ ಪಾಲಿಗೆ ಇದು ಐಪಿಎಲ್​ನಲ್ಲಿ ಕೊನೆಯ ಪಂದ್ಯವಾಗಲಿದೆ.

ಆರಂಭಿಕ 8 ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಗೆದ್ದಿದ್ದ ಆರ್​ಸಿಬಿ ನಂತರದಲ್ಲಿ ಸತತ 5 ಪಂದ್ಯ ಜಯಿಸುವ ಮೂಲಕ ಐಪಿಎಲ್​ನಲ್ಲಿ ಅಮೋವಾಗಿ ಪುಟಿದೆದ್ದಿದೆ. ಆಡಿದ 13 ಪಂದ್ಯಗಳಲ್ಲಿ ಈಗ 6 ಜಯ, 7 ಸೋಲಿನೊಂದಿಗೆ 12 ಅಂಕ ಗಳಿಸಿರುವ ಆರ್​ಸಿಬಿಗೆ ರನ್​ರೇಟ್​ ಸುಧಾರಣೆಯೂ ಪ್ಲೇಆಫ್​ ರೇಸ್​ನಲ್ಲಿ ಉಳಿದುಕೊಳ್ಳಲು ನೆರವಾಗಿದೆ. "ಹೊಸ ಅಧ್ಯಾಯ' ಎಂಬ ಜೋಶ್​ನಲ್ಲಿ ಅಭಿಯಾನ ಆರಂಭಿಸಿದ್ದ ಆರ್​ಸಿಬಿ ಈಗ ಸತತ 4 ಪಂದ್ಯ ಗೆದ್ದರೆ ಕಪ್​ ಕನಸು ನನಸಾಗಿಸುವ ಅವಕಾಶ ಹೊಂದಿದೆ.

ಮತ್ತೊಂದೆಡೆ ಸಿಎಸ್​ಕೆ ಆರಂಭಿಕ 2 ಪಂದ್ಯಗಳಲ್ಲಿ ಗೆದ್ದಿದ್ದರೂ, ನಂತರದಲ್ಲಿ ಅಸ್ಥಿರ ನಿರ್ವಹಣೆಯಿಂದಾಗಿ ಏಳು-ಬೀಳುಗಳನ್ನು ಕಂಡಿದೆ. ಆಡಿದ 13 ಪಂದ್ಯಗಳಲ್ಲಿ 7 ಜಯ, 6 ಸೋಲಿನೊಂದಿಗೆ 14 ಅಂಕ ಗಳಿಸಿ ಸದ್ಯಕ್ಕೆ 4ನೇ ಸ್ಥಾನದಲ್ಲಿರುವ ಸಿಎಸ್​ಕೆ, ತಾನಾಡಿದ ಕೊನೇ 7 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದು, 4ರಲ್ಲಿ ಸೋತಿದೆ.

ಹಾಲಿ ಟೂರ್ನಿಯ ಉದ್ಘಾಟನಾ ಪಂದ್ಯ ಸೇರಿದಂತೆ ಒಟ್ಟಾರೆ ಐಪಿಎಲ್​ ದಾಖಲೆ ಸಿಎಸ್​ಕೆ ಪರವಾಗಿದ್ದರೂ, ಸತತ 5 ಜಯದೊಂದಿಗೆ ಬೀಗುತ್ತಿರುವ ಆರ್​ಸಿಬಿ ಹಾಲಿ ಬಲಿಷ್ಠ ಫಾರ್ಮ್​ನಲ್ಲಿದೆ. ಜತೆಗೆ ಆರ್​ಸಿಬಿ ತವರಿನಲ್ಲಿ ಆಡುವ ಲಾಭವನ್ನೂ ಹೊಂದಿದೆ. ಹೀಗಾಗಿ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಭರ್ಜರಿ ಫಾರ್ಮ್​ನಲ್ಲಿದೆ ಆರ್​ಸಿಬಿ

ಆರಂಭಿಕ 8 ಪಂದ್ಯಗಳಲ್ಲಿ 7ರಲ್ಲಿ ಸೋತಾಗ, ಅದರಲ್ಲೂ ಸತತವಾಗಿ 6 ಪಂದ್ಯಗಳಲ್ಲಿ ಸೋತಾಗ ಆರ್​ಸಿಬಿ ಪಾಲಿಗೆ ಐಪಿಎಲ್​-17 ಬಹುತೇಕ ಮುಗಿದ ಅಧ್ಯಾಯ ಎನಿಸಿತ್ತು. ಜತೆಗೆ ತಂಡದ ಬೌಲಿಂಗ್​ ವಿಭಾಗ ಅತ್ಯಂತ ದುರ್ಬಲವಾಗಿ ಕಂಡಿತ್ತು. ಆದರೆ ನಂತರದಲ್ಲಿ ಆರ್​ಸಿಬಿ ಪುಟಿದೆದ್ದ ರೀತಿ ತನ್ನ ನೆಚ್ಚಿನ ಅಭಿಮಾನಿಗಳ ನಿರೀಕ್ಷೆಯನ್ನೂ ಮೀರಿಸುವಂತಿತ್ತು. ಬ್ಯಾಟಿಂಗ್​ನಲ್ಲಿ ವಿರಾಟ್​ ಕೊಹ್ಲಿಗೆ (661) ನಾಯಕ ಪ್ಲೆಸಿಸ್​ (367) ಮತ್ತು 5 ಅರ್ಧಶತಕ ಬಾರಿಸಿರುವ ರಜತ್​ ಪಾಟೀದಾರ್​ (320) ಉತ್ತಮ ಬೆಂಬಲ ಒದಗಿಸಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ ಮೊಹಮದ್​ ಸಿರಾಜ್​ (12) ಬೌಲಿಂಗ್​ ಸುಧಾರಣೆ ಬಲ ತುಂಬಿದ್ದರೆ, ಯಶ್​ ದಯಾಳ್​ (13) ಗರಿಷ್ಠ ವಿಕೆಟ್​ ಟೇಕರ್​ ಆಗಿದ್ದಾರೆ. ಸ್ಪಿನ್​ ಬೌಲಿಂಗ್​ನಲ್ಲಿ ಕರ್ಣ್​ ಶರ್ಮ (6) ಮಿಂಚಿದ್ದರೆ, ಸ್ವಪ್ನಿಲ್​ ಸಿಂಗ್​ (6) ಉತ್ತಮ ಸಾಥ್​ ನೀಡಿದ್ದಾರೆ. ಕ್ಯಾಮರಾನ್​ ಗ್ರೀನ್​ (8 ವಿಕೆಟ್​, 190 ರನ್​) ಆಲ್ರೌಂಡ್​ ನಿರ್ವಹಣೆ ತೋರಲಾರಂಭಿಸಿದ್ದಾರೆ. ಇಂಗ್ಲೆಂಡ್​ನ ವಿಲ್​ ಜಾಕ್ಸ್​ ತವರಿಗೆ ನಿರ್ಗಮಿಸಿರುವ ನಡುವೆ ಗ್ಲೆನ್​ ಮ್ಯಾಕ್ಸ್​ವೆಲ್​ ಮರಳಿ ಕಣಕ್ಕಿಳಿಯಲಿದ್ದು, ಈ ಬಾರಿಯಾದರೂ ಆರ್​ಸಿಬಿ ಅಭಿಮಾನಿಗಳ ನಿರೀೆಗೆ ತಕ್ಕ ಆಟವಾಡಿ ಗೆಲುವಿನ ರೂವಾರಿಯಾಗುವರೇ ಎಂಬ ಕೌತುಕವಿದೆ.

ಆರ್​ಸಿಬಿ-ಸಿಎಸ್​ಕೆ ಪ್ಲೇಆಫ್​​ ಲೆಕ್ಕಾಚಾರ

ಆರ್​ಸಿಬಿ-ಸಿಎಸ್​ಕೆ ಪಾಲಿಗೆ ಇದು ನಿರ್ಣಾಯಕ ಸಮರ. ಆದರೆ ಸಿಎಸ್​ಕೆ ತಂಡಕ್ಕೆ 18ಕ್ಕಿಂತ ಕಡಿಮೆ ರನ್​ಗಳಿಂದ ಸೋತರೂ ಪ್ಲೇಆಫ್​​ಗೇರುವ ಅವಕಾಶವಿದ್ದರೆ, ಆರ್​ಸಿಬಿ ಗೆಲುವಿನೊಂದಿಗೆ ರನ್​ರೇಟ್​ನಲ್ಲೂ ಸಿಎಸ್​ಕೆ ತಂಡವನ್ನು ಹಿಂದಿಕ್ಕಲು ಕನಿಷ್ಠ 18 ರನ್​ಗಳಿಂದ ಅಥವಾ 11 ಎಸೆತ ಬಾಕಿ ಇರುವಂತೆಯೇ ಗೆಲ್ಲುವುದು ಅಗತ್ಯವಾಗಿದೆ. ಇನ್ನು ಪಂದ್ಯಕ್ಕೆ ಮಳೆ ಭೀತಿಯೂ ಕಾಡುತ್ತಿದ್ದು, ಒಂದು ವೇಳೆ ಪಂದ್ಯ ರದ್ದುಗೊಂಡರೆ ಆರ್​ಸಿಬಿ ಟೂರ್ನಿಯಿಂದ ಹೊರಬೀಳಲಿದೆ ಮತ್ತು ಸಿಎಸ್​ಕೆ 4ನೇ ತಂಡವಾಗಿ ಪ್ಲೇಆಫ್​​ಗೇರಲಿದೆ.

18ರ ಅದೃಷ್ಟದ ನಿರೀಕ್ಷೆ

ಆರ್​ಸಿಬಿ ತಂಡ ಬರೀ ಗೆಲ್ಲುವುದಕ್ಕಿಂತ 18 ಅಥವಾ ಅದಕ್ಕಿಂತ ಹೆಚ್ಚು ರನ್​ ಅಂತರದಿಂದ ಗೆಲ್ಲುವುದೇ ಪ್ರಮುಖವೆನಿಸಿದೆ. ಇಲ್ಲದಿದ್ದರೆ ಆರ್​ಸಿಬಿ ಗೆದ್ದರೂ, ರನ್​ರೇಟ್​ನಲ್ಲಿ ಸಿಎಸ್​ಕೆ ತಂಡವನ್ನು ಹಿಂದಿಕ್ಕಲಾಗದೆ ಹೊರಬೀಳಬೇಕಾಗುತ್ತದೆ. ಹೀಗಾಗಿ ಸಂಪೂರ್ಣ 20 ಓವರ್​ ಆಟ ನಡೆದರೆ ಆರ್​ಸಿಬಿಗೆ ಲೆಕ್ಕಾಚಾರ ಸುಲಭವಾಗಿರಲಿದೆ. 20 ಓವರ್​ಗಳಲ್ಲಿ ಆರ್​ಸಿಬಿ 200 ರನ್​ ಗಳಿಸಿದರೆ ಸಿಎಸ್​ಕೆಯನ್ನು ಗರಿಷ್ಠ 182 ರನ್​ಗಳಿಗೆ ನಿಯಂತ್ರಿಸಬಹುದು ಅಥವಾ ಸಿಎಸ್​ಕೆ 200 ರನ್​ ಗಳಿಸಿದರೆ 18.1 ಓವರ್​ಗಳಲ್ಲಿ ಚೇಸಿಂಗ್​ ಮಾಡಬಹುದು. ಮಳೆಯಿಂದಾಗಿ ಪಂದ್ಯ 15 ಓವರ್​ಗಳಿಗೆ ಕಡಿತಗೊಂಡರೆ ಆರ್​ಸಿಬಿ 170 ರನ್​ ಗಳಿಸಿದರೂ, ಸಿಎಸ್​ಕೆಯನ್ನು 152 ರನ್​ಗಳಿಗೆ ನಿಯಂತ್ರಿಸಬೇಕು ಅಥವಾ ಸಿಎಸ್​ಕೆ 170 ರನ್​ ಗಳಿಸಿದರೆ 13.1 ಓವರ್​ಗಳಲ್ಲಿ ಚೇಸಿಂಗ್​ ಮಾಡಬೇಕು. ಪಂದ್ಯ 10 ಓವರ್​ಗಳಿಗೆ ಕಡಿತಗೊಂಡರೆ ಆರ್​ಸಿಬಿ 130 ರನ್​ ಗಳಿಸಿದರೂ, ಸಿಎಸ್​ಕೆಯನ್ನು 112ಕ್ಕೆ ನಿಯಂತ್ರಿಸಬೇಕು ಅಥವಾ ಸಿಎಸ್​ಕೆ 130 ರನ್​ ಗಳಿಸಿದರೆ 8.1 ಓವರ್​ಗಳಲ್ಲೇ ಚೇಸಿಂಗ್​ ಮಾಡಬೇಕು. ಪಂದ್ಯ ಕನಿಷ್ಠ 5 ಓವರ್​ಗಳಿಗೆ ಕಡಿತಗೊಂಡರೆ ಆರ್​ಸಿಬಿ 80 ರನ್​ ಗಳಿಸಿದರೂ, ಸಿಎಸ್​ಕೆಯನ್ನು 62ರೊಳಗೆ ನಿಯಂತ್ರಿಸಬೇಕು ಅಥವಾ ಸಿಎಸ್​ಕೆ 80 ರನ್​ ಗಳಿಸಿದರೆ 3.1 ಓವರ್​ಗಳಲ್ಲೇ ಚೇಸಿಂಗ್​ ಮಾಡಬೇಕಾಗುತ್ತದೆ. ಸಿಎಸ್​ಕೆ 206 ರನ್​ ಗಳಿಸಿದರೆ ಆರ್​ಸಿಬಿ 18.4 ಓವರ್​ಗಳಲ್ಲಿ ಚೇಸಿಂಗ್​ ಮಾಡಬೇಕಾಗುತ್ತದೆ.

ಕಾಡುತ್ತಿದೆ ಮಳೆ ಭೀತಿ...

ಪಂದ್ಯಕ್ಕೆ ಮಳೆ ಕಾಡುವ ಭೀತಿ ಇದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಶನಿವಾರ ಸಂಜೆಯ ವೇಳೆಗೆ ಬೆಂಗಳೂರಿನಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 75ರಷ್ಟಿದೆ. ಆದರೆ ಚಿನ್ನಸ್ವಾಮಿ ಸ್ಟೇಡಿಯಂ ಸುಸಜ್ಜಿತವಾದ ಸಬ್​ಏರ್​ ಒಳಚರಂಡಿ ವ್ಯವಸ್ಥೆ ಹೊಂದಿದ್ದು, ಇದರಿಂದ ಮಳೆ ನೀರನ್ನು ಸುಲಭವಾಗಿ ಮತ್ತು ಬೇಗನೆ ಇಂಗಿಸಿ ಮೈದಾನ ಒಣಗಿಸಬಹುದಾಗಿದೆ. ಹೀಗಾಗಿ ಯಾವುದೇ ಕ್ಷಣ ಮಳೆ ನಿಂತರೂ 10 ನಿಮಿಷಗಳಲ್ಲೇ ಆಟವನ್ನು ಆರಂಭಿಸಬಹುದಾಗಿದೆ. ಫಲಿತಾಂಶ ನಿರ್ಧಾರಕ್ಕಾಗಿ ಕನಿಷ್ಠ 5 ಓವರ್​ಗಳ ಪಂದ್ಯವಾದರೂ ನಡೆಯುವ ನಿರೀಕ್ಷೆ ಹುಟ್ಟಿಸಿದೆ.

ಧೋನಿ ಕೊನೇ ಪಂದ್ಯ?

ಮೊಣಕಾಲು ಗಾಯದ ನಡುವೆ ಹೆಚ್ಚು ರನ್​ ಓಡದೆ, ಸ್ಲಾಗ್​ ಓವರ್​ಗಳಲ್ಲಿ ಮಾತ್ರ ಬ್ಯಾಟಿಂಗ್​ಗೆ ಬರುತ್ತಿರುವ 42 ವರ್ಷದ ಧೋನಿ ಮುಂದಿನ ವರ್ಷ ಐಪಿಎಲ್​ನಲ್ಲಿ ಮತ್ತೆ ಆಡುವುದು ಅನುಮಾನ. ಹೀಗಾಗಿ ಸಿಎಸ್​ಕೆ ತಂಡ ಪ್ಲೇಆಫ್​​ ಹಂತಕ್ಕೇರದಿದ್ದರೆ ಧೋನಿ ಪಾಲಿಗೆ ಇದುವೇ ಕಟ್ಟಕಡೆಯ ಐಪಿಎಲ್​ ಪಂದ್ಯವಾಗಲಿದೆ. ಹೀಗಾಗಿ ಆರ್​ಸಿಬಿ ಗೆಲುವಿನ ನಿರೀಕ್ಷೆಯ ಜತೆಗೆ ಧೋನಿ ಕೊನೇ ಇನಿಂಗ್ಸ್​ ನೋಡಲು ಬೆಂಗಳೂರಿನ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಐಪಿಎಲ್​ನಲ್ಲಿ ಇದುವರೆಗೆ 263 ಪಂದ್ಯ ಆಡಿರುವ ಧೋನಿ, ಈ ಪೈಕಿ 233 ಪಂದ್ಯಗಳನ್ನು ಸಿಎಸ್​ಕೆ ಪರವೇ ಆಡಿದ್ದಾರೆ ಮತ್ತು ಸಿಎಸ್​ಕೆ ನಾಯಕರಾಗಿ 5 ಬಾರಿ ಐಪಿಎಲ್​ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

ಒತ್ತಡದಲ್ಲಿ ಸೂಪರ್​ಕಿಂಗ್ಸ್​

ಟೂರ್ನಿಯ ಕಳೆದ 5 ಪಂದ್ಯಗಳ ಫಲಿತಾಂಶಗಳು ಸಿಎಸ್​ಕೆಗೆ ಅನುಕೂಲಕರವಾಗಿಯೇ ಬಂದಿದ್ದು ಅದರ ಪ್ಲೇಆ್​ ಆಸೆ ಜೀವಂತ ಉಳಿಸಿದೆ. ಆದರೆ ಆರ್​ಸಿಬಿ ವಿರುದ್ಧ ಕೆಲ ಹಿನ್ನಡೆಗಳೊಂದಿಗೆ ಸಿಎಸ್​ಕೆ ಕಣಕ್ಕಿಳಿಯಲಿದೆ. ನಾಯಕ ಋತುರಾಜ್​ ಗಾಯಕ್ವಾಡ್​ಗೆ (583) ಅಗ್ರ ಕ್ರಮಾಂಕದಲ್ಲಿ ಉತ್ತಮ ಬೆಂಬಲ ಲಭಿಸುತ್ತಿಲ್ಲ. ಶಿವಂ ದುಬೆ (389) ಕೂಡ ಕಳೆದ ಕೆಲ ಪಂದ್ಯಗಳಿಂದ ಪರದಾಡುತ್ತಿದ್ದಾರೆ. ಆರಂಭಿಕರಾಗಿ ರಚಿನ್​ ರವೀಂದ್ರ ನಿರೀಕ್ಷಿತ ನಿರ್ವಹಣೆ ತೋರಿಲ್ಲ. ಅಜಿಂಕ್ಯ ರಹಾನೆ ಕೂಡ ವೈಫಲ್ಯ ಕಂಡಿದ್ದಾರೆ. ಡೆರಿಲ್​ ಮಿಚೆಲ್​ (314) ಲಯ ಕಂಡುಕೊಂಡಿದ್ದಾರೆ. ಬೌಲಿಂಗ್​ನಲ್ಲಿ ಮುಸ್ತಾಫಿಜುರ್​, ಮಥೀಶ ಪಥಿರಣ ಮತ್ತು ದೀಪಕ್​ ಹೂಡಾ ಅಲಭ್ಯತೆ ದೊಡ್ಡ ಹೊಡೆತ ನೀಡಿದೆ. ಇದರಿಂದಾಗಿ ದೇಶೀಯ ವೇಗಿಗಳಾದ ಸಿಮ್ರಾನ್​ಜೀತ್​ ಸಿಂಗ್​ ಮತ್ತು ತುಷಾರ್​ ದೇಶಪಾಂಡೆ (16) ಅವರೇ ಪ್ರಮುಖ ಅಸ್ತ್ರವೆನಿಸಿದ್ದಾರೆ. ಸ್ಪಿನ್​ ಬೌಲಿಂಗ್​ನಲ್ಲಿ ಜಡೇಜಾ ವಿಕೆಟ್​ ಬೇಟೆಯಲ್ಲಿ ಎಡವುತ್ತಿದ್ದರೆ, ಮೊಯಿನ್​ ಅಲಿ ಅಲಭ್ಯರಾಗಿದ್ದಾರೆ.

ಮೇ 18ಕ್ಕೆ ಆರ್​ಸಿಬಿ ಸೋತಿಲ್ಲ!

ಆರ್​ಸಿಬಿ ತಂಡ ಐಪಿಎಲ್​ನಲ್ಲಿ ಮೇ 18ರಂದು ಇದುವರೆಗೆ 4 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಎಲ್ಲವನ್ನೂ ಗೆದ್ದುಕೊಂಡಿದೆ. ಇದರಲ್ಲಿ 2013 ಮತ್ತು 2014ರಲ್ಲಿ 2 ಗೆಲುವು ಸಿಎಸ್​ಕೆ ವಿರುದ್ಧವೇ ಬಂದಿದ್ದರೆ, 2016ರಲ್ಲಿ ಪಂಜಾಬ್​ ಮತ್ತು 2023ರಲ್ಲಿ ಸನ್​ರೈಸರ್ಸ್​ ವಿರುದ್ಧ ಗೆದ್ದಿತ್ತು. ಇನ್ನು ವಿರಾಟ್​ ಕೊಹ್ಲಿ ಕೂಡ ಮೇ 18ರಂದೇ 2 ಶತಕ ಸಿಡಿಸಿದ ಬಲಿಷ್ಠ ದಾಖಲೆ ಹೊಂದಿದ್ದಾರೆ ಎಂಬುದು ಗಮನಾರ್ಹ.

ಲಕ್​ ತಂದ ಸ್ವಪ್ನಿಲ್​!

ಆರ್​ಸಿಬಿ ಪಾಲಿಗೆ ಸ್ವಪ್ನಿಲ್​ ಸಿಂಗ್​ ಲಕ್ಕಿ ಚಾರ್ಮ್​ ಎನಿಸಿದ್ದಾರೆ. ಏಪ್ರಿಲ್​ 25ರಂದು ಸನ್​ರೈಸರ್ಸ್​ ವಿರುದ್ಧ ಸ್ವಪ್ನಿಲ್​ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಟೂರ್ನಿಯಲ್ಲಿ ಮೊದಲ ಬಾರಿ ಕಣಕ್ಕಿಳಿದ ಬಳಿಕ ಆರ್​ಸಿಬಿ ಆಡಿದ ಎಲ್ಲ 5 ಪಂದ್ಯಗಳಲ್ಲೂ ಗೆದ್ದಿದೆ. ಉಪಯುಕ್ತ 28 ರನ್​ ಮತ್ತು 6 ವಿಕೆಟ್​ನೊಂದಿಗೆ ಉತ್ತಮ ಇಂಪ್ಯಾಕ್ಟ್​ ಕೂಡ ಮಾಡಿದ್ದಾರೆ.

ಮುಖಾಮುಖಿ: 32

ಆರ್​ಸಿಬಿ: 10

ಸಿಎಸ್​ಕೆ: 21

ರದ್ದು: 1

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.