ಬೆಂಗಳೂರು: ಐಪಿಎಲ್ 18ನೇ ಆವೃತ್ತಿಯ ಆಟಗಾರರ ಹರಾಜಿಗೆ ಮುನ್ನ ಎಲ್ಲ 10 ತಂಡಗಳು ರಿಟೇನ್ ಪಟ್ಟಿ ಸಲ್ಲಿಸಲು ಇನ್ನು ಒಂದು ವಾರವಷ್ಟೇ ಬಾಕಿ ಇದ್ದು, ಕ್ರಿಕೆಟ್ ಪ್ರೇಮಿಗಳ ಕುತೂಹಲ ಗರಿಗೆದರಿದೆ. ಅಕ್ಟೋಬರ್ 31ರ ಸಂಜೆ 5 ಗಂಟೆಯೊಳಗೆ ಎಲ್ಲ ತಂಡಗಳು ರಿಟೇನ್ ಆಟಗಾರರ ಪಟ್ಟಿ ಅಂತಿಮಗೊಳಿಸಬೇಕಾಗಿದೆ. ಆದರೆ ಈಗಾಗಲೆ ಎಲ್ಲ ತಂಡಗಳ ರಿಟೇನ್ ಲೆಕ್ಕಾಚಾರದ ಬಗ್ಗೆ ವಿವಿಧ ವರದಿಗಳು ಹರಿದಾಡುತ್ತಿವೆ. ಈ ಪೈಕಿ ಕೆಲವು ಅಧಿಕೃತ ಮೂಲಗಳ ವರದಿಯಾಗಿದ್ದರೆ, ಇನ್ನು ಕೆಲವು ಬರೀ ಊಹಾಪೋಹಗಳೂ ಆಗಿರಬಹುದು. ಅಂಥ ವರದಿಗಳ ಆಧಾರದಲ್ಲಿ ಎಲ್ಲ 10 ತಂಡಗಳ ರಿಟೇನ್ ಲೆಕ್ಕಾಚಾರದ ಸಂಪ್ತ ವಿವರ ಇಲ್ಲಿದೆ...
ಚೆನ್ನೈ ಸೂಪರ್ಕಿಂಗ್ಸ್
ಮಾಜಿ ನಾಯಕ ರವೀಂದ್ರ ಜಡೇಜಾ (18 ಕೋಟಿ ರೂ.), ನಾಯಕ ಋತುರಾಜ್ ಗಾಯಕ್ವಾಡ್ (18 ಕೋಟಿ ರೂ.), ಶ್ರೀಲಂಕಾ ವೇಗಿ ಮಥೀಶ ಪಥಿರಣ (14 ಕೋಟಿ ರೂ.), ಆಲ್ರೌಂಡರ್ ಶಿವಂ ದುಬೆ (11 ಕೋಟಿ ರೂ.) ಅವರನ್ನು ಸಿಎಸ್ಕೆ ರಿಟೇನ್ ಮಾಡಿಕೊಳ್ಳುವುದು ಬಹುತೇಕ ಖಚಿತವೆನಿಸಿದೆ. ಕಳೆದ 5 ವರ್ಷಗಳಿಂದ ಭಾರತ ಪರ ಆಡದ ಆಟಗಾರರನ್ನು "ಅನ್ಕ್ಯಾಪ್ಡ್' ಆಗಿ 4 ಕೋಟಿ ರೂ.ಗೆ ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಿದ್ದು, ಇದು ಧೋನಿಗಾಗಿಯೇ ರೂಪಿಸಿರುವ ನಿಯಮದಂತಿದೆ. ಆದರೂ, ಧೋನಿ ಮುಂದಿನ ಐಪಿಎಲ್ನಲ್ಲಿ ಆಡುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ ಎಂದು ಸಿಎಸ್ಕೆ ಮ್ಯಾನೇಜ್ಮೆಂಟ್ ತಿಳಿಸಿದೆ.
ಕೋಲ್ಕತ ನೈಟ್ರೈಡರ್ಸ್
ಹಾಲಿ ಚಾಂಪಿಯನ್ ಕೆಕೆಆರ್ ತಂಡ ವಿಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ರನ್ನು (18 ಕೋಟಿ ರೂ.) ಮೊದಲ ಆದ್ಯತೆಯ ಆಟಗಾರರನ್ನಾಗಿ ರಿಟೇನ್ ಮಾಡಿಕೊಳ್ಳಲು ಬಯಸಿದೆ. ಸುನೀಲ್ ನಾರಾಯಣ್ (14 ಕೋಟಿ ರೂ.) ಮತ್ತು ರಿಂಕು ಸಿಂಗ್ (11 ಕೋಟಿ ರೂ.) ಮತ್ತಿಬ್ಬರು ರಿಟೇನ್ ಆಟಗಾರರು. ವೇಗಿ ಹರ್ಷಿತ್ ರಾಣಾ (4 ಕೋಟಿ ರೂ.) ದೇಶೀಯ ಆಟಗಾರರಾಗಿ (ಅನ್ಕ್ಯಾಪ್ಡ್) ರಿಟೇನ್ ಆಗಲಿದ್ದಾರೆ. ಹಾಲಿ ನಾಯಕ ಶ್ರೇಯಸ್ ಅಯ್ಯರ್ರನ್ನು 4ನೇ ಆಟಗಾರರನ್ನಾಗಿ ರಿಟೇನ್ ಮಾಡಿಕೊಂಡರೆ ಕೆಕೆಆರ್ ಮತ್ತೆ 18 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಇದಕ್ಕೆ ಕೆಕೆಆರ್ ಹಿಂದೇಟು ಹಾಕಿದೆ ಎನ್ನಲಾಗಿದೆ.
ಸನ್ರೈಸರ್ಸ್ ಹೈದರಾಬಾದ್
ಟಿ20 ಕ್ರಿಕೆಟ್ನ ಸ್ಫೋಟಕ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ರನ್ನು 23 ಕೋಟಿ ರೂ.ಗೆ ರಿಟೇನ್ ಮಾಡಿಕೊಳ್ಳಲು ಸನ್ರೈಸರ್ಸ್ ಮುಂದಾಗಿದೆ ಎಂದು ಈಗಾಗಲೆ ವರದಿಯಾಗಿದೆ. ಜತೆಗೆ ನಾಯಕ ಪ್ಯಾಟ್ ಕಮ್ಮಿನ್ಸ್ (18 ಕೋಟಿ ರೂ.), ಅಭಿಷೇಕ್ ಶರ್ಮ (14 ಕೋಟಿ ರೂ.) ಅವರನ್ನೂ ರಿಟೇನ್ ಮಾಡಿಕೊಳ್ಳಲಿದೆ. ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ ರೆಡ್ಡಿಯನ್ನೂ ರಿಟೇನ್ ಮಾಡಿಕೊಳ್ಳಲು ಬಯಸಿದ್ದರೂ ಇನ್ನೂ ಅಂತಿಮವಾಗಿಲ್ಲ.
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ (18 ಕೋಟಿ ರೂ.), ಜಸ್ಪ್ರೀತ್ ಬುಮ್ರಾ (18 ಕೋಟಿ ರೂ.), ಹಾರ್ದಿಕ್ ಪಾಂಡ್ಯ (14 ಕೋಟಿ ರೂ.), ಸೂರ್ಯಕುಮಾರ್ ಯಾದವ್ (14 ಕೋಟಿ ರೂ.), ತಿಲಕ್ ವರ್ಮ (11 ಕೋಟಿ ರೂ.) ಅವರನ್ನು ರಿಟೇನ್ ಮಾಡಿಕೊಳ್ಳಲು ಬಯಸಿದೆ ಎನ್ನಲಾಗಿದೆ. ಜತೆಗೆ ನೇಹಲ್ ವಧೇರ (4 ಕೋಟಿ) ಅವರನ್ನು ಅನ್ಕ್ಯಾಪ್ಡ್ ಆಗಿ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಇದೇ ವೇಳೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೇ ಮುಂಬೈ ನಾಯಕತ್ವವೂ ಒಲಿಯಲಿದೆ ಎನ್ನಲಾಗಿದೆ.
ಆರ್ಸಿಬಿ
ವಿರಾಟ್ ಕೊಹ್ಲಿ ಒಬ್ಬರೇ ಆರ್ಸಿಬಿ ರಿಟೇನ್ ಮಾಡಿಕೊಳ್ಳುವ ಆಟಗಾರರ ಪೈಕಿ ಇದುವರೆಗೆ ಖಚಿತಗೊಂಡಿರುವವರು. ಉಳಿದಂತೆ ಮೊಹಮದ್ ಸಿರಾಜ್ ಮತ್ತು ರಜತ್ ಪಾಟೀದಾರ್ ರಿಟೇನ್ ಬಯಸಿದ್ದರೂ, ಇನ್ನೂ ಅಂತಿಮಗೊಂಡಿಲ್ಲ. ಕ್ಯಾಮರಾನ್ ಗ್ರೀನ್ ಗಾಯದಿಂದಾಗಿ ಐಪಿಎಲ್ಗೆ ಅಲಭ್ಯರಾಗುವ ಸಾಧ್ಯತೆ ಇರುವುದರಿಂದ ಅವರ ರಿಟೇನ್ಗೆ ಆಸಕ್ತಿ ತೋರಿಲ್ಲ. ಈ ನಡುವೆ ಕೊಹ್ಲಿ ರಿಟೇನ್ಗಾಗಿ ಆರ್ಸಿಬಿ ಗರಿಷ್ಠ 18 ಕೋಟಿ ಬದಲಾಗಿ 25 ಕೋಟಿ ರೂ.ವರೆಗೂ ವ್ಯಯಿಸಲು ಸಿದ್ಧವಾಗಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಕೊಹ್ಲಿ ಮತ್ತೆ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದೂ ವರದಿಯಾಗಿದೆ.
ಲಖನೌ ಸೂಪರ್ಜೈಂಟ್ಸ್
ಕಳೆದೆರಡು ಆವೃತ್ತಿಗಳ ನಾಯಕ, ಕನ್ನಡಿಗ ಕೆಎಲ್ ರಾಹುಲ್ ಈ ಬಾರಿ ಲಖನೌ ತಂಡದಲ್ಲಿ ರಿಟೇನ್ ಆಗುವುದಿಲ್ಲ ಎನ್ನಲಾಗಿದೆ. ನಿಕೋಲಸ್ ಪೂರನ್ (18 ಕೋಟಿ ರೂ.), ಮಾರ್ಕಸ್ ಸ್ಟೋಯಿನಿಸ್ (14 ಕೋಟಿ ರೂ.) ಮತ್ತು ಮಯಾಂಕ್ ಯಾದವ್ (11 ಕೋಟಿ ರೂ.) ಲಖನೌ ರಿಟೇನ್ ಮಾಡಿಕೊಳ್ಳಲು ಬಯಸಿರುವ ಮೂವರು ಆಟಗಾರರು. ಈ ಪೈಕಿ ನಿಕೋಲಸ್ ಪೂರನ್ ಹೊಸ ನಾಯಕರಾಗಲಿದ್ದಾರೆ ಎನ್ನಲಾಗಿದೆ. ಅನ್ಕ್ಯಾಪ್ಡ್ ಕೋಟಾದಡಿ ಮೊಹ್ಸಿನ್ ಖಾನ್ ಮತ್ತು ಆಯುಷ್ ಬಡೋನಿ ರಿಟೇನ್ ಆಗಬಹುದು.
ಡೆಲ್ಲಿ ಕ್ಯಾಪಿಟಲ್ಸ್
ರಿಷಭ್ ಪಂತ್ ಅವರನ್ನು ರಿಟೇನ್ ಮಾಡಿಕೊಂಡರೂ ನಾಯಕತ್ವ ನೀಡದಿರಲು ಡೆಲ್ಲಿ ಫ್ರಾಂಚೈಸಿ ನಿರ್ಧರಿಸಿದೆ. ಇದರಿಂದಾಗಿ ಪಂತ್ ಡೆಲ್ಲಿ ತಂಡದಿಂದ ಹೊರನಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಪಂತ್ ಸಾಮಾಜಿಕ ಜಾಲತಾಣದಲ್ಲಿ ಡೆಲ್ಲಿ ತಂಡವನ್ನು ಅನ್ಫಾಲೋ ಮಾಡಿರುವುದು ಕೂಡ ಇದಕ್ಕೆ ಪುಷ್ಠಿ ತುಂಬಿದೆ. ಪಂತ್ಗೆ ಪ್ರಮುಖವಾಗಿ ಪಂಜಾಬ್ ಕಿಂಗ್ಸ್, ಆರ್ಸಿಬಿ ತಂಡಗಳಿಂದ ಆರ್ ಹೋಗಿದೆ ಎನ್ನಲಾಗುತ್ತಿದೆ. ಇನ್ನು ಅಕ್ಷರ್ ಪಟೇಲ್ ಜತೆಗೆ ಜೇಕ್ ಫ್ರೇಸರ್ ಮೆಕ್ಗುರ್ಕ್ ಅಥವಾ ಕುಲದೀಪ್ ಯಾದವ್ರನ್ನು ರಿಟೇನ್ ಮಾಡಿಕೊಳ್ಳಲು ಡೆಲ್ಲಿ ಬಯಸಿದೆ.
ಗುಜರಾತ್ ಟೈಟಾನ್ಸ್
ನಾಯಕ ಶುಭಮಾನ್ ಗಿಲ್ (18 ಕೋಟಿ ರೂ.), ರಶೀದ್ ಖಾನ್ (14 ಕೋಟಿ ರೂ.) ಮತ್ತು ಮೊಹಮದ್ ಶಮಿ (11 ಕೋಟಿ ರೂ.) ಅವರನ್ನು ರಿಟೇನ್ ಮಾಡಿಕೊಳ್ಳಲು ಗುಜರಾತ್ ಬಯಸಿದೆ. ರಾಹುಲ್ ತೆವಾಟಿಯಾರನ್ನು (4 ಕೋಟಿ ರೂ.) ಅನ್ಕ್ಯಾಪ್ಡ್ ಆಗಿ ರಿಟೇನ್ ಮಾಡಿಕೊಳ್ಳಲಿದೆ. ಈ ನಡುವೆ ರಶೀದ್ ಖಾನ್ ಗುಜರಾತ್ ತಂಡ ತೊರೆದು ಮುಂಬೈ ಸೇರಿಕೊಳ್ಳಲು ಬಯಸಿದ್ದಾರೆ. ರಶೀದ್ ಖಾನ್ ದಣ ಆಫ್ರಿಕಾದ ಎಸ್ಎ20 ಮತ್ತು ಯುಎಇ ಟಿ20 ಲೀಗ್ಗಳಲ್ಲಿ ಮುಂಬೈ ಫ್ರಾಂಚೈಸಿಯ ತಂಡಗಳ ಪರವೇ ಆಡುತ್ತಿರುವುದು ಇದಕ್ಕೆ ಕಾರಣ ಎಂದೂ ವರದಿಯಾಗಿದೆ.
ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ಇಬ್ಬರು ದೇಶೀಯ ಆಟಗಾರರಾದ ಶಶಾಂಕ್ ಸಿಂಗ್ ಮತ್ತು ಆಶುತೋಷ್ರನ್ನು ತಲಾ 4 ಕೋಟಿ ರೂ.ಗಳಿಗೆ ರಿಟೇನ್ ಮಾಡಿಕೊಳ್ಳಲು ಬಯಸಿದೆ. ಉಳಿದಂತೆ ವೇಗಿ ಅರ್ಷದೀಪ್ ಸಿಂಗ್ರನ್ನು ರಿಟೇನ್ ಮಾಡಿಕೊಳ್ಳಲು ಬಯಸಿದ್ದರೂ, ಅವರಿಗಾಗಿ 18 ಕೋಟಿ ರೂ. ವ್ಯಯಿಸಲು ಸಿದ್ಧವಿಲ್ಲ. ಹೀಗಾಗಿ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್ಟಿಎಂ) ಮೂಲಕ ಅರ್ಷದೀಪ್ರನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ ಎನ್ನಲಾಗಿದೆ.
ರಾಜಸ್ಥಾನ ರಾಯಲ್ಸ್
ಸಂಜು ಸ್ಯಾಮ್ಸನ್ (18 ಕೋಟಿ ರೂ.), ಯಶಸ್ವಿ ಜೈಸ್ವಾಲ್ (14 ಕೋಟಿ ರೂ.) ಮತ್ತು ರಿಯಾನ್ ಪರಾಗ್ (11 ಕೋಟಿ ರೂ.) ರಾಜಸ್ಥಾನ ರಿಟೇನ್ ಮಾಡಿಕೊಳ್ಳಲು ಬಯಸಿರುವ ಮೂವರು ಆಟಗಾರರು. ಇದರೊಂದಿಗೆ ಸಂದೀಪ್ ಶರ್ಮರನ್ನು (4 ಕೋಟಿ ರೂ.) ಅನ್ಕ್ಯಾಪ್ಡ್ ಆಗಿ ರಿಟೇನ್ ಮಾಡಿಕೊಳ್ಳಲಿದೆ. ಸಂದೀಪ್ ಭಾರತ ಪರ ಆಡಿದ್ದು, ನಿವೃತ್ತಿಯನ್ನೂ ಹೊಂದಿಲ್ಲ. ಆದರೆ ಅವರು ಭಾರತ ಪರ ಆಡಿ 9 ವರ್ಷಗಳೇ ಕಳೆದಿವೆ. ಹೀಗಾಗಿ ಅವರೀಗ ಅನ್ಕ್ಯಾಪ್ಡ್ ಎನಿಸಿದ್ದಾರೆ. ಇನ್ನು ಜೋಸ್ ಬಟ್ಲರ್ರನ್ನು ಆರ್ಟಿಎಂ ಮೂಲಕ ರಿಟೇನ್ ಮಾಡಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ.