ಕ್ರೀಡೆ

IPL Record : ವಿರಾಟ್​ ಕೊಹ್ಲಿ, ರೋಹಿತ್ ಶರ್ಮ​ ಅಲ್ಲವೇ ಅಲ್ಲ ಇವರೇ ನೋಡಿ ದುಬಾರಿ ಆಟಗಾರ!

IPL Record : ಐಪಿಎಲ್​ 2025ರ ಮೆಗಾ ಹರಾಜಿಗೂ ಮುನ್ನ ಆಟಗಾರರ ರಿಟೇನ್​ ಮತ್ತು ರಿಲೀಸ್​ ಪಟ್ಟಿಯನ್ನು ನಿನ್ನೆ (ಅ.31) ಬಿಡುಗಡೆ ಮಾಡಲಾಗಿದೆ. ಎಲ್ಲ 10 ಫ್ರಾಂಚೈಸಿಗಳು ಐಪಿಎಲ್ 2025 ಗಾಗಿ ಉಳಿಸಿಕೊಳ್ಳಲು ಬಯಸುವ ಆಟಗಾರರ ಹೆಸರುಗಳನ್ನು ಗುರುವಾರ ಪ್ರಕಟಿಸಿದವು. ಅದೇ ಸಮಯದಲ್ಲಿ, ಅನೇಕ ಸ್ಟಾರ್ ಆಟಗಾರರನ್ನು ಫ್ರಾಂಚೈಸಿಗಳು ಕೈಬಿಟ್ಟಿವೆ. ಅವರೆಲ್ಲ ಮುಂದಿನ ತಿಂಗಳು ನಡೆಯುವ ಮೆಗಾ ಹರಾಜನ್ನು ಪ್ರವೇಶ ಮಾಡುತ್ತಾರೆ.

ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮಾತ್ರ ಆರು ಆಟಗಾರರನ್ನು ಉಳಿಸಿಕೊಂಡಿವೆ. ಪಂಜಾಬ್ ಕಿಂಗ್ಸ್ ತಂಡ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದು ಉಳಿದ ಎಲ್ಲ ಆಟಗಾರರನ್ನು ಬಿಡುಗಡೆ ಮಾಡಿದ್ದು ಬರೋಬ್ಬರಿ 110.5 ಕೋಟಿ ರೂಪಾಯಿಯನ್ನು ಪರ್ಸ್‌ನಲ್ಲಿ ಉಳಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ಮೆಗಾ ಹರಾಜಿಗಾಗಿ 41 ಕೋಟಿ ರೂಪಾಯಿ ಮೊತ್ತವನ್ನು ಪರ್ಸ್​ನಲ್ಲಿ ಉಳಿಸಿಕೊಂಡಿದ್ದು, ಕಡಿಮೆ ಮೊತ್ತದೊಂದಿಗೆ ಐಪಿಎಲ್​ನ (IPL 2025) ಮೆಗಾ ಹರಾಜಿಗೆ ಬರಲಿದೆ.

ಐಪಿಎಲ್ 2025ರ ರಿಟೇನ್ ಪಟ್ಟಿಯಲ್ಲಿ​ ನಿರೀಕ್ಷೆ ಮಾಡಿದಂತೆಯೇ ವಿರಾಟ್ ಮತ್ತು ರೋಹಿತ್‌ಗೆ ಹೆಚ್ಚಿನ ಬೆಲೆ ಸಿಕ್ಕಿಲ್ಲ. ಇವರಿಬ್ಬರಿಗೂ ಹೋಲಿಸಿದರೆ ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಹೆನ್ರಿಚ್ ಕ್ಲಾಸೆನ್ ಅತ್ಯಧಿಕ ಬೆಲೆ ಪಡೆದಿದ್ದಾರೆ. ಕ್ಲಾಸೆನ್​ಗಾಗಿ ಸನ್​ ರೈಸರ್ಸ್​ ಹೈದರಾಬಾದ್​ ತಂಡ ಬರೋಬ್ಬರಿ 23 ಕೋಟಿ ರೂ. ಖರ್ಚು ಮಾಡಿದೆ. ಇದು ಈ ಬಾರಿಯ ಅತ್ಯಂತ ದುಬಾರಿ ಮೊತ್ತವಾಗಿದೆ. ಮುಂಬರುವ ಹರಾಜಿನಲ್ಲಿ ಯಾರಾದರೂ ಇದನ್ನು ಮೀರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ವಿರಾಟ್ ಕೊಹ್ಲಿ ಅವರು 21 ಕೋಟಿ ರೂ. ಪಡೆಯುವ ಮೂಲಕ ಎರಡನೇ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಗೆ 16.30 ಕೋಟಿ ಸಿಕ್ಕಿದೆ. ವಿರಾಟ್ ಅವರಂತೆಯೇ ಲಖನೌ ಆಟಗಾರ ನಿಕೋಲಸ್ ಪೂರನ್ ಕೂಡ 21 ಕೋಟಿ ರೂ. ಸಿಕ್ಕಿದೆ.

ಪ್ಯಾಟ್ ಕಮಿನ್ಸ್ (ಎಸ್​ಆರ್​ಎಚ್​), ರುತುರಾಜ್ ಗಾಯಕ್ವಾಡ್​ (ಸಿಎಸ್‌ಕೆ), ಜಸ್ಪ್ರೀತ್​ ಬುಮ್ರಾ (ಮುಂಬೈ), ರಶೀದ್ ಖಾನ್ (ಗುಜರಾತ್ ಟೈಟಾನ್ಸ್), ಸಂಜು ಸ್ಯಾಮ್ಸನ್ (ರಾಜಸ್ಥಾನ ರಾಯಲ್ಸ್​), ಯಶಸ್ವಿ ಜೈಸ್ವಾಲ್ (ರಾಜಸ್ಥಾನ ರಾಯಲ್ಸ್) ಹಾಗೂ ರವೀಂದ್ರ ಜಡೇಜಾ (ಸಿಎಸ್‌ಕೆ) ತಲಾ 18 ಕೋಟಿ ರೂ. ಪಡೆದಿದ್ದಾರೆ. ಅನ್‌ಕ್ಯಾಪ್ಡ್ ಪ್ಲೇಯರ್ ಕೋಟಾದ ಅಡಿಯಲ್ಲಿ ಎಂಎಸ್ ಧೋನಿ 4 ಕೋಟಿ ರೂ. ಕಡಿಮೆ ಮೊತ್ತ ಗಳಿಸಿದ್ದಾರೆ. ಕೆಕೆಆರ್ ಆಟಗಾರ ರಿಂಕು ಸಿಂಗ್ ಜಾಕ್ ಪಾಟ್ ಹೊಡೆದಿದ್ದಾರೆ. ಅವರ ಸಂಭಾವನೆ 55 ಲಕ್ಷ ರೂ.ನಿಂದ 13 ಕೋಟಿ ರೂ.ಗೆ ಏರಿಕೆಯಾಗಿದೆ. (ಏಜೆನ್ಸೀಸ್​)