ಚೆನ್ನೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿ 12 ದಿನಗಳೇ ಕಳೆದಿವೆ. ಆದರೆ, ಭಾರತೀಯ ಕ್ರಿಕೆಟ್ ಸಮೂಹ ಮಾತ್ರ ಇನ್ನು ಲೀಗ್ ಗುಂಗಿನಲ್ಲೇ ಬಾಕಿ ಉಳಿದಿದೆ. ಲೀಗ್ ಆರಂಭಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಫ್ರಾಂಚೈಸಿಗಳು ಲಸಿಕೆ ನೀಡಲು ಮುಂದಾಗಿದ್ದರೂ ಆಟಗಾರರು ಹಿಂದೇಟು ಹಾಕಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲಸಿಕೆ ಕುರಿತು ಆಟಗಾರರಿಗೆ ಸೂಕ್ತವಾಗಿ ಜಾಗೃತಿ ನೀಡಬೇಕಿತ್ತು. ಏಕಾಏಕಿ ಲಸಿಕೆ ನೀಡಲು ಮುಂದಾಗಿದ್ದೆ ಆಟಗಾರರು ನಿರಾಕರಿಸಲು ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ. ಕೆಲ ಫ್ರಾಂಚೈಸಿಗಳು ಮನವೊಲಿಸಲು ಮುಂದಾದರೂ ಆಟಗಾರರು ಲಸಿಕೆ ಪಡೆಯಲು ಹಿಂದೇಟು ಹಾಕಿದರು ಎನ್ನಲಾಗಿದೆ.
* ಲಸಿಕೆಗೆ ಪಡೆಯಲು ಹಿಂದೇಟಿಗೆ ಕಾರಣ?
ಬಯೋಬಬಲ್ ವಲಯದಲ್ಲಿ ಐಪಿಎಲ್ ನಡೆಯುವ ಕಾರಣ ಆಟಗಾರರಲ್ಲಿ ಸುರಕ್ಷತೆಯ ಭಾವ ಮೂಡಿತ್ತು. ಇದರಿಂದ ಬಯೋ ಬಬಲ್‌ನಲ್ಲಿದ್ದರೆ ಲಸಿಕೆ ಅಗತ್ಯವಿಲ್ಲ ಎಂಬುದು ಆಟಗಾರರ ಮನಸ್ಥಿತಿಯಾಗಿತ್ತು. ಕೆಲ ಫ್ರಾಂಚೈಸಿಗಳು ಸ್ವತಃ ಖರ್ಚಿನಲ್ಲಿ ಆಟಗಾರರಿಗೆ ಲಸಿಕೆ ಕೊಡಿಸಲು ಮುಂದಾದರೂ ಆಟಗಾರರು ಬಯೋಬಬಲ್ ಹೆಸರು ಮುಂದಿಟ್ಟುಕೊಂಡು ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ. ಆದರೆ, ಬಯೋಬಬಲ್ ವ್ಯಾಪ್ತಿಯಲ್ಲೇ ಸತತ ಎರಡು ದಿನ ಕೋವಿಡ್-19 ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮೇ 4 ರಂದು ಅನಿರ್ದಿಷ್ಟಾವಧಿವರೆಗೆ ಲೀಗ್ ಮುಂದೂಡಲಾಯಿತು.
* ಆಸಕ್ತಿ ತೋರಿದ್ದ ವಿದೇಶಿಗರು
ಲಸಿಕೆ ಪಡೆಯಲು ಫ್ರಾಂಚೈಸಿಗಳು ನೀಡಿದ್ದ ಆಹ್ವಾನವನ್ನು ಕೆಲ ವಿದೇಶಿ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಆಸಕ್ತಿ ತೋರಿದ್ದರು ಎನ್ನಲಾಗಿದೆ. ಆದರೆ, ವಿದೇಶಿ ಆಟಗಾರರಿಗೆ ಲಸಿಕೆ ನೀಡಲು ಕಾನೂನು ಸಮಸ್ಯೆ ಅಡ್ಡಿಯಾಗಿದ್ದರಿಂದ ಈ ಪ್ರಸ್ತಾವನೆಯಿಂದ ಫ್ರಾಂಚೈಸಿಗಳು ಹಿಂದೆ ಸರಿದವು ಎಂದು ಹೇಳಲಾಗಿದೆ. ಆಟಗಾರರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದು ಒಂದೆಡೆಯಾದರೆ, ನವದೆಹಲಿಗೆ ಪ್ರಯಾಣಿಸಿದರ ಬಗ್ಗೆಯೂ ಕೆಲ ಫ್ರಾಂಚೈಸಿಗಳು ಆಕ್ಷೇಪ ವ್ಯಕ್ತಪಡಿಸಿವೆ. ಖಾಸಗಿ ಟರ್ಮಿನಲ್‌ನಲ್ಲಿ ಕೇವಲ ಸಿಐಎಸ್‌ಎ್ ಹಾಗೂ ಏರ್‌ಲೈನ್ ಸಿಬ್ಬಂದಿ ವರ್ಗದವರಷ್ಟೇ ಇದ್ದರು. ಜತೆಗೆ ಕೋವಿಡ್ ಅಬ್ಬರದ ಬಗ್ಗೆಯೂ ಸೂಕ್ತ ಮಾಹಿತಿ ಇರಲಿಲ್ಲ ಎಂದು ಹೇಳಲಾಗಿದೆ.
* ಕಗ್ಗಂಟಾದ ಸಾಹ, ಪ್ರಸಿದ್ಧ ಪ್ರಕರಣ
ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಾಹ ಹಾಗೂ ಕೆಕೆಆರ್ ತಂಡದ ವೇಗಿ ಕರ್ನಾಟಕದ ಪ್ರಸಿದ್ಧ ಕೃಷ್ಣ ಪೂರ್ಣ ಪ್ರಮಾಣದಲ್ಲಿ ಸುಧಾರಣೆ ಕಾಣದಿರುವುದು ಆತಂಕಕ್ಕೆ ಕಾರಣವಾಗಿದೆ. ಲೀಗ್ ಮುಂದೂಡಿಕೆಗೂ ಮುನ್ನ ಕೋವಿಡ್ ಕಾಣಿಸಿಕೊಂಡಿದ್ದ ಕೆಲ ಆಟಗಾರರು ಸಂಪೂರ್ಣ ಗುಣಮುಖರಾಗಿದ್ದಾರೆ. ಸಾಹ ಹಾಗೂ ಪ್ರಸಿದ್ಧ ಕೃಷ್ಣ ಮಾತ್ರ ಇನ್ನು ಚೇತರಿಕೆ ಕಂಡಿಲ್ಲ. ಗುರುವಾರ ನಡೆದ ಪರೀಕ್ಷೆಯಲ್ಲಿ ಸಾಹಗೆ ಮತ್ತೊಮ್ಮೆ ಪಾಸಿಟಿವ್ ಅಂಶ ಕಂಡುಬಂದರೆ, ಪ್ರಸಿದ್ಧ ಕೃಷ್ಣ ಬೆಂಗಳೂರಿನ ನಿವಾಸದಲ್ಲೇ ಕ್ವಾರಂಟೈನ್‌ನಲ್ಲಿದ್ದಾರೆ. ಮುಂಬೈನಲ್ಲಿ ತಂಡ ಕೂಡಿಕೊಳ್ಳುವುದಕ್ಕೂ ಮುನ್ನ ಸಾಹ ಹಾಗೂ ಪ್ರಸಿದ್ಧ ಕೃಷ್ಣಗೆ ನೆಗೆಟಿವ್ ವರದಿ ಕಡ್ಡಾಯವಾಗಿದೆ.
* ಮೈಕೆಲ್ ಹಸ್ಸೆ ಇಂದು ತವರಿಗೆ ?
ಕೋವಿಡ್‌ನಿಂದ ಪೂರ್ಣಪ್ರಮಾಣದಲ್ಲಿ ಚೇತರಿಕೆ ಕಂಡಿರುವ ಸಿಎಸ್‌ಕೆ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸೆ ಭಾನುವಾರ ಮಾಲ್ಡೀವ್ಸ್ ಮಾರ್ಗವಾಗಿ ತವರು ಆಸ್ಟ್ರೇಲಿಯಾಗೆ ಮರಳುವ ಸಾಧ್ಯತೆಗಳಿವೆ. ಮಾಲ್ಡೀವ್ಸ್‌ನಲ್ಲಿ ಕ್ವಾರಂಟೈನ್ ಅವಧಿ ಇಲ್ಲದೇ ನೇರವಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುವಂತೆ ಸಿಎಸ್‌ಕೆ ಆಡಳಿತ ಮಂಡಳಿ ವ್ಯವಸ್ಥೆ ಮಾಡುತ್ತಿದೆ. ಭಾರತೀಯ ವಿಮಾನಗಳಿಗೆ ಆಸ್ಟ್ರೇಲಿಯಾದಲ್ಲಿ ವಿಧಿಸಿದ್ದ ನಿರ್ಬಂಧ ಮೇ 15ಕ್ಕೆ (ಶನಿವಾರ) ಕೊನೆಗೊಂಡಿದ್ದು, ಇದರಿಂದ ಕೊಂಚ ನೆಮ್ಮದಿ ತಂದಿದೆ ಎಂದು ಸಿಎಸ್‌ಕೆ ತಂಡ ತಿಳಿಸಿದೆ.
* ಪ್ರಯಾಣಕ್ಕೂ ಮುನ್ನ 3 ಟೆಸ್ಟ್ ಕಡ್ಡಾಯ
ನವದೆಹಲಿ: ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ. ಆಟಗಾರರಿಗೆ ಮನೆಯಲ್ಲೇ ಮೂರು ಬಾರಿ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ನೆಗೆಟಿವ್ ವರದಿ ಬಂದರಷ್ಟೇ ಮುಂಬೈಗೆ ಆಗಮಿಸಬೇಕಿದೆ. ಮೇ 19 ರಂದು ತಂಡದ ಎಲ್ಲ ಆಟಗಾರರು ಮುಂಬೈಗೆ ಆಗಮಿಸಬೇಕಿದ್ದು, 14 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಆ ಬಳಿಕ ಜೂನ್ 2 ರಂದು ತಂಡ ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಲಿದೆ. ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿರುವ ತಂಡದ ಬಹುತೇಕ ಆಟಗಾರರು ಈಗಾಗಲೇ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ಇಂಗ್ಲೆಂಡ್‌ನಲ್ಲೇ ಎರಡನೇ ಡೋಸ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ.