ನವದೆಹಲಿ: ಐಪಿಎಲ್ 18ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಆಸ್ಟ್ರೆಲಿಯಾ ಪ್ರವಾಸದಲ್ಲಿ ಭಾರತ ತಂಡ ಪರ್ತ್ನಲ್ಲಿ ನವೆಂಬರ್ 22ರಿಂದ 26ರವರೆಗೆ ಮೊದಲ ಟೆಸ್ಟ್ ಪಂದ್ಯ ಆಡಲಿರುವ ಸಮಯದಲ್ಲೇ ಹರಾಜು ಪ್ರಕ್ರಿಯೆ ನಿಗದಿಯಾಗಿದೆ. ಎರಡೂ ಡಿಸ್ನಿ ಸ್ಟಾರ್ನಲ್ಲೇ ನೇರಪ್ರಸಾರ ಕಾಣಬೇಕಿದೆ. ಆದರೆ ಇದರ ನಡುವಿನ ಸಂರ್ಷವನ್ನು ತಪ್ಪಿಸಲು ಭಾರತೀಯ ಕಾಲಮಾನ ಪ್ರಕಾರ, ಮಧ್ಯಾಹ್ನದ ನಂತರವೇ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎನ್ನಲಾಗಿದೆ. ಆಸ್ಟ್ರೆಲಿಯಾದಲ್ಲಿ ನಡೆಯುವ ಟೆಸ್ಟ್ ಭಾರತೀಯ ಕಾಲಮಾನ ಪ್ರಕಾರ, ಮುಂಜಾನೆ ಆರಂಭಗೊಂಡು ಮಧ್ಯಾಹ್ನದ ವೇಳೆಗೆ ಮುಕ್ತಾಯವಾಗುತ್ತದೆ.
ಸೌದಿ ಅರೇಬಿಯಾಗೆ ಬಿಸಿಸಿಐ ಅಧಿಕಾರಿಗಳು ಈಗಾಗಲೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ರಾಜಧಾನಿ ರಿಯಾದ್ನಲ್ಲೇ ಹರಾಜು ಪ್ರಕ್ರಿಯೆ ಆಯೋಜಿಸುವ ನಿರೀಕ್ಷೆ ಇದೆ. ಬಿಸಿಸಿಐ ಈ ಮುನ್ನ ದುಬೈ, ಸಿಂಗಾಪುರ ಮತ್ತು ಲಂಡನ್ನಲ್ಲೂ ಹರಾಜು ಪ್ರಕ್ರಿಯೆ ನಡೆಸುವ ಬಗ್ಗೆ ಪರಿಶೀಲನೆ ನಡೆಸಿತ್ತು.
ಎಲ್ಲ 10 ತಂಡಗಳು ಆಟಗಾರರ ರಿಟೇನ್ ಪಟ್ಟಿ ಸಲ್ಲಿಸಲು ಬಿಸಿಸಿಐ ಈಗಾಗಲೆ ಅಕ್ಟೋಬರ್ 31ರ ಸಂಜೆ 5 ಗಂಟೆಯವರೆಗೆ ಗಡುವು ನಿಗದಿಪಡಿಸಿದೆ. ಈ ಬಾರಿ ತಂಡಗಳ ಬಜೆಟ್ ಮಿತಿ 120 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.