ನವದೆಹಲಿ: ಮುಂಬರುವ ಐಪಿಎಲ್‌ಗೆ ಆಟಗಾರರನ್ನು ಕೊಂಡುಕೊಳ್ಳಲು 10 ತಂಡಗಳಿಗೆ ತಲಾ 90 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಜತೆಗೆ ಹಿಂದಿನ 8 ತಂಡಗಳಿಗೆ ತಲಾ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದ್ದು, ಗರಿಷ್ಠ 42 ಕೋಟಿ ರೂಪಾಯಿ ನಿಗದಿ ಪಡಿಸಲಾಗಿದೆ. ನೂತನ ತಂಡಗಳಾದ ಲಖನೌ ಹಾಗೂ ಅಹಮದಾಬಾದ್ ತಂಡಗಳಿಗೆ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದೆ. ‘ಈ ಕುರಿತು ಎಲ್ಲ ಫ್ರಾಂಚೈಸಿಗಳಿಗೆ ಪತ್ರ ಬರೆದಿರುವ ಬಿಸಿಸಿಐ, ನೂತನ ನಿಯಮಗಳ ಬಗ್ಗೆ ಮಾಹಿತಿ ನೀಡಿದೆ. 4 ಆಟಗಾರರ ರಿಟೇನ್‌ಗೆ ಗರಿಷ್ಠ 42 ಕೋಟಿ ರೂ, 3 ಆಟಗಾರರ ರಿಟೇನ್‌ಗೆ ಗರಿಷ್ಠ 33 ಕೋಟಿ ರೂಪಾಯಿ ಹಾಗೂ ಇಬ್ಬರು ಆಟಗಾರರಿಗೆ ಗರಿಷ್ಠ 24 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ’ ಎಂದು ಐಪಿಎಲ್ ಫ್ರಾಂಚೈಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
* ರಿಟೇನ್ ಆಟಗಾರರ ನಿಯಮ
ನಾಲ್ಕು ಆಟಗಾರರನ್ನು ಉಳಿಸಿಕೊಂಡರೆ ಮೂವರು ಭಾರತೀಯರ ಜತೆಗೆ ಓರ್ವ ವಿದೇಶಿ ಆಟಗಾರನ್ನು ಉಳಿಸಿಕೊಳ್ಳಬಹುದು. ಇಲ್ಲವಾದರೆ ತಲಾ ಇಬ್ಬರು ಭಾರತ ಹಾಗೂ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ನವೆಂಬರ್ ತಿಂಗಳೊಳಗೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಕಳುಹಿಸಿಕೊಡುವಂತೆ ಬಿಸಿಸಿಐ ಫ್ರಾಂಚೈಸಿಗಳಿಗೆ ಸೂಚಿಸಿದೆ. ಜನವರಿ ಮೊದಲ ವಾರದಲ್ಲಿ ಆಟಗಾರರ ಮೆಗಾ ಹರಾಜು ನಡೆಯಲಿದೆ. ಈ ಮೊದಲು ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿತ್ತು. ಆದರೆ ರೈಟ್ ಟು ಮ್ಯಾಚ್ ಕೋಟಾ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳ ಒತ್ತಡಕ್ಕೆ ಮಣಿದ ಬಿಸಿಸಿಐ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ.
* ಆರ್‌ಸಿಬಿಯಿಂದ ಎಬಿಡಿ ಔಟ್?
ಮಿ.360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. 8 ಫ್ರಾಂಚೈಸಿಗಳು ಈಗಾಗಲೇ 4 ರಿಟೇಲ್ ಆಟಗಾರರ ಹೆಸರನ್ನು ಪಟ್ಟಿಕೊಂಡಿದ್ದು, 2 ಹೊಸ ಫ್ರಾಂಚೈಸಿಗಳು ಕೂಡ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ ಎನ್ನಲಾಗಿದೆ. ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ, ದೇವದತ್ ಪಡಿಕಲ್, ಯಜುವೇಂದ್ರ ಚಾಹಲ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (ವಿದೇಶಿ) ಅವರನ್ನು ಉಳಿಸಿಕೊಳ್ಳಲಿದೆ ಎನ್ನಲಾಗಿದೆ.
ಸಂಭಾವ್ಯ ರಿಟೇನ್ ಆಟಗಾರರ ಪಟ್ಟಿ
* ಸಿಎಸ್‌ಕೆ: ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಎಂಎಸ್ ಧೋನಿ, ಡು ಪ್ಲೆಸಿಸ್/ಮೊಯಿನ್ ಅಲಿ/ ಡ್ವೇನ್ ಬ್ರಾವೊ.
* ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕೈರಾನ್ ಪೊಲ್ಲಾರ್ಡ್.
*ಕೆಕೆಆರ್: ಶುಭಮಾನ್ ಗಿಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ಸುನೀಲ್ ನಾರಾಯಣ್.
* ಆರ್‌ಸಿಬಿ: ವಿರಾಟ್ ಕೊಹ್ಲಿ, ದೇವದತ್ ಪಡಿಕಲ್, ಚಾಹಲ್, ಮ್ಯಾಕ್ಸ್‌ವೆಲ್.
* ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್, ಪೃಥ್ವಿ ಷಾ, ಕಗಿಸೊ ರಬಾಡ, ಅನ್ರಿಚ್ ನೋಕಿಯ
* ಪಂಜಾಬ್: ಸದ್ಯಕ್ಕೆ ಮಾಹಿತಿ ಇಲ್ಲ, ಕೆಎಲ್ ರಾಹುಲ್ ಹೊಸ ತಂಡ ಸೇರ್ಪಡೆ ಸಾಧ್ಯತೆ
* ರಾಜಸ್ಥಾನ : ಸಂಜು ಸ್ಯಾಮ್ಸನ್ (ಒಪ್ಪಿದರೆ), ಬೆನ್ ಸ್ಟೋಕ್ಸ್ (ಲಭ್ಯವಾದರೆ).
* ಸನ್‌ರೈಸರ್ಸ್: ರಶೀದ್ ಖಾನ್ (ಒಪ್ಪಿದರೆ).
* ಹೊಸ ತಂಡಗಳ ಆಯ್ಕೆ
ಲಖನೌ:ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್
ಅಹಮದಾಬಾದ್: ಪಾಂಡ್ಯ ಸಹೋದರರಾದ ಕೃನಾಲ್-ಹಾರ್ದಿಕ್.
ತಂಡವೊಂದು ರಿಟೇನ್ ಆಟಗಾರರಿಗೆ ಪಾವತಿಸಬೇಕಾದ ಮೊತ್ತ ಅನುಕ್ರಮ: ಒಬ್ಬ ಆಟಗಾರನನ್ನು ರಿಟೇನ್ ಮಾಡಿದರೆ : 14, 10 ಕೋಟಿ, ಇಬ್ಬರು ಆಟಗಾರರನ್ನು ರಿಟೇನ್ ಮಾಡಿದರೆ 14, 10 ಕೋಟಿ ರೂ, ಮೂವರನ್ನು ರಿಟೇನ್ ಮಾಡಿದರೆ : 15, 11, 7 ಕೋಟಿ ರೂ, ನಾಲ್ವರನ್ನು ರಿಟೇನ್ ಮಾಡಿದರೆ: 16, 12, 8, 6 ಕೋಟಿ ರೂ.