ಕ್ರೀಡೆ

ಇಂದು ಐಪಿಎಲ್ ಸಭೆ; ಲೀಗ್ ರೂಪುರೇಷೆಗಳು ಅಂತಿಮಗೊಳ್ಳುವ ನಿರೀಕ್ಷೆ

rameshmysuru

ನವದೆಹಲಿ: ಯುಎಇಯಲ್ಲಿ ಟೂರ್ನಿ ನಡೆಸುವುದಕ್ಕೆ ಯೋಜನೆಗಳನ್ನು ರೂಪಿಸುವ, ವೇಳಾಪಟ್ಟಿ ಅಂತಿಮಗೊಳಿಸುವ ಮತ್ತು ಇತರ ವ್ಯವಸ್ಥೆಗಳ ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆ ಭಾನುವಾರ ನಡೆಯಲಿದೆ. ಸಭೆ ಒಟ್ಟಾರೆ 10 ಅಂಶಗಳ ಅಜೆಂಡಾವನ್ನು ಹೊಂದಿದೆ.

ಕರೊನಾ ವೈರಸ್ ಹಾವಳಿಯಿಂದಾಗಿ ಟೂರ್ನಿ ವಿದೇಶಕ್ಕೆ ಸ್ಥಳಾಂತರಗೊಳ್ಳುವುದು ಖಚಿತವಾಗಿದ್ದು, ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಟೂರ್ನಿ ನಡೆಯಲಿದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಈ ಸಭೆಯ ವೇಳೆ, ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲ 8 ಫ್ರಾಂಚೈಸಿಗಳಿಗೂ ಟೂರ್ನಿಯ ಬಗ್ಗೆ ಸಂಪೂರ್ಣವಾದ ಚಿತ್ರಣ ಸಿಗಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಕೂಡ ಸಭೆಯ ಪ್ರಮುಖ ಚರ್ಚಾ ವಿಷಯವಾಗಿದೆ.

ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಷಾ ಸಹಿತ ಬಿಸಿಸಿಐನ ಪ್ರಮುಖ ಪದಾಧಿಕಾರಿಗಳು ಮತ್ತು ಐಪಿಎಲ್ ಆಡಳಿತ ಮಂಡಳಿಯ ಸದಸ್ಯರು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಟೂರ್ನಿಯ ಸಿದ್ಧತೆಗಾಗಿ ಎಲ್ಲ ತಂಡಗಳು ಬೇಗನೆ ಯುಎಇಗೆ ಪ್ರಯಾಣ ಬೆಳೆಸಲು ಬಯಸಿವೆ. ಹೀಗಾಗಿ ವಿಮಾನ ಪ್ರಯಾಣ, ಹೋಟೆಲ್, ಆಹಾರ ವ್ಯವಸ್ಥೆ ಮತ್ತು ಜೈವಿಕ-ಸುರಕ್ಷಾ ವಾತಾವರಣದ ಮಾರ್ಗಸೂಚಿಗಳ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಬೇಗನೆ ನಿರ್ಧಾರ ಕೈಗೊಳ್ಳಬೇಕೆಂದು ಫ್ರಾಂಚೈಸಿಗಳು ಬಯಸಿವೆ.

ಟೂರ್ನಿಯ ವೇಳಾಪಟ್ಟಿಯಲ್ಲಿ ಡಬಲ್ ಹೆಡರ್​ಗಳ ಸಂಖ್ಯೆ ಕಡಿಮೆ ಮಾಡುವ ನಿರೀಕ್ಷೆ ಇದೆ.ಟೂರ್ನಿಯ ವೇಳೆ ಆಟಗಾರರನ್ನು ಕೂಡಿಕೊಳ್ಳಲು ಅವರ ಕುಟುಂಬ ಸದಸ್ಯರಿಗೆ ಅಥವಾ ಗೆಳತಿಯರಿಗೆ ಅವಕಾಶ ಮಾಡಿಕೊಡಬೇಕೇ ಎಂಬ ಬಗ್ಗೆಯೂ ಫ್ರಾಂಚೈಸಿಗಳಲ್ಲಿ ದೊಡ್ಡ ಗೊಂದಲವಿದೆ. ಐಪಿಎಲ್ ಆಡಳಿತ ಮಂಡಳಿ ಈ ಪ್ರಶ್ನೆಗೂ ಸೂಕ್ತ ಉತ್ತರವನ್ನು ನೀಡಬೇಕಾಗಿದೆ.

ಮಾರ್ಗಸೂಚಿ ಅಂತಿಮ ನಿರೀಕ್ಷೆ: ಐಪಿಎಲ್ ಸಭೆಯಲ್ಲಿ ಮಾರ್ಗಸೂಚಿಗಳನ್ನು ಒಳಗೊಂಡ ಗುಣಮಟ್ಟದ ಕಾರ್ಯವಿಧಾನ (ಎಸ್​ಒಪಿ) ಅಂತಿಮಗೊಳ್ಳುವ ನಿರೀಕ್ಷೆ ಇದೆ. ಫ್ರಾಂಚೈಸಿಗಳೂ ಎಸ್​ಒಪಿಯ ನಿರೀಕ್ಷೆಯಲ್ಲಿದ್ದು, ಅದು ಸಿಕ್ಕ ಕೂಡಲೆ ತರಬೇತಿ ಶಿಬಿರಗಳನ್ನು ಆರಂಭಿಸುವ ಸಿದ್ಧತೆಯಲ್ಲಿವೆ. ಎಸ್​ಒಪಿಯಲ್ಲಿ ಎಲ್ಲ ವೈದ್ಯಕೀಯ ವ್ಯವಸ್ಥೆಗಳ ವಿವರಗಳೂ ಇರಲಿವೆ. ಆಟಗಾರರ ಮಾನಸಿಕ ಆರೋಗ್ಯದ ಕಾಳಜಿಯಿಂದ ಹೆಲ್ಪ್​ಲೈನ್ ಅನ್ನು ಬಿಸಿಸಿಐ ಆರಂಭಿಸಲಿದೆ ಎನ್ನಲಾಗಿದೆ. ಯುಎಇಗೆ ಪ್ರಯಾಣಿಸುವುದಕ್ಕೆ ಮುನ್ನ ಎಲ್ಲ ಆಟಗಾರರು ಕರೊನಾ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿರಲಿದೆ ಎನ್ನಲಾಗಿದೆ.

ಐಪಿಎಲ್ ಸಭೆಯ ಅಜೆಂಡಾಗಳು

  1. ಹಿಂದಿನ 3 ಸಭೆಯ ನಿರ್ಣಯಗಳಿಗೆ ಅಂಗೀಕಾರ.
  2. ಕೇಂದ್ರ ಸರ್ಕಾರದ ಅನುಮತಿಯ ಪ್ರಕ್ರಿಯೆ.
  3. ಟೂರ್ನಿ ವೇಳಾಪಟ್ಟಿ ಮತ್ತು ಅವಧಿ.
  4. ಚೀನಾ ಕಂಪನಿಗಳ ಪ್ರಾಯೋಜಕತ್ವದ ಭವಿಷ್ಯ.
  5. ಗುಣಮಟ್ಟದ ಕಾರ್ಯವಿಧಾನ (ಎಸ್​ಒಪಿ) ಅಂತಿಮ.
  6. ಐಪಿಎಲ್ ಆಡಳಿತ ಮಂಡಳಿ ಸದಸ್ಯರ ಯುಎಇ ಪ್ರಯಾಣ.
  7. ಭಾರತೀಯ, ವಿದೇಶಿ ಬದಲಿ ಆಟಗಾರರ ವ್ಯವಸ್ಥೆ.
  8. ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಚಟುವಟಿಕೆ.
  9. ಬಿಸಿಸಿಐ ಸ್ವಂತ ವೈದ್ಯಕೀಯ ಘಟಕ.
  10. ಇಂಗ್ಲೆಂಡ್​ನಲ್ಲಿ ಜೈವಿಕ-ಸುರಕ್ಷಾ ವಾತಾವರಣ ನಿರ್ವಿುಸಿದ ತಜ್ಞರ ಜತೆ ಸಭೆ.
ಭಾನುವಾರ ಐಪಿಎಲ್ ಆಡಳಿತ ಮಂಡಳಿ ಸಭೆ ನಡೆಯಲಿದೆ. ಆದರೆ ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯದಿಂದ ಇನ್ನೂ ಅನುಮತಿಗಾಗಿ ಕಾಯುತ್ತಿದ್ದೇವೆ. ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡಬೇಕಾಗಿರುವುದರಿಂದ ಇದು ಅಗತ್ಯವಾಗಿದೆ. | ಬಿಸಿಸಿಐ ಅಧಿಕಾರಿ https://www.vijayavani.net/russia-preparing-mass-vaccination-against-coronavirus-for-october/