ಕ್ರೀಡೆ

ಚಿನ್ನಸ್ವಾಮಿಯಲ್ಲಿ ಐಪಿಎಲ್​ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಬಳಕೆ ಆರೋಪ; ಹಸಿರು ನ್ಯಾಯಪೀಠದ ಕೆಂಗಣ್ಣಿಗೆ ಗುರಿಯಾದ ಕೆಎಸ್​ಸಿಎ

ಬೆಂಗಳೂರು: ಉದ್ಯಾನನಗರಿಯಲ್ಲಿ ನೀರಿನ ತಾಪತ್ರಯ ಹೆಚ್ಚಾಗಿರುವ ನಡುವೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಐಪಿಎಲ್​ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಬಳಸಿರುವ ಆರೋಪ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್​ಸಿಎ) ವಿರುದ್ಧ ಕೇಳಿಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್​ಜಿಟಿ) ಸ್ವಯಂ ಪ್ರಕರಣದ ದಾಖಲಿಸಿಕೊಂಡಿದ್ದು, ಕೆಎಸ್​ಸಿಎ ಜತೆಗೆ ಸಂಬಂಧಿಸಿದ ಇತರ ಎಲ್ಲರಿಗೂ ನೋಟಿಸ್​ ಜಾರಿಗೊಳಿಸಿದೆ. ಕ್ರೀಡಾಂಗಣದಲ್ಲಿನ ನೀರಿನ ಬಳಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆಯೂ ತಾಕೀತು ಮಾಡಿದೆ.

ಐಪಿಎಲ್​ ಪಂದ್ಯಗಳಿಗೆ ಬಳಸಲಾದ ನೀರಿನ ಮೂಲ, ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಸೂಕ್ತ ವಿವರವನ್ನು ಮೇ 2ರೊಳಗೆ ಒದಗಿಸುವಂತೆ ಕೆಎಸ್​ಸಿಎ ಜತೆಗೆ ಬೆಂಗಳೂರು ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಎನ್​ಜಿಟಿ ಸೂಚಿಸಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದುವರೆಗೆ ಐಪಿಎಲ್​ 17ನೇ ಆವೃತ್ತಿಯ 3 ಪಂದ್ಯಗಳು ನಡೆದಿದ್ದು, ಪ್ರತಿ ಪಂದ್ಯಕ್ಕೆ 75 ಸಾವಿರ ಲೀಟರ್​ ಸಂಸ್ಕರಿಸಿದ ನೀರು ಬಳಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡದ ಇನ್ನೂ 4 ಲೀಗ್​ ಪಂದ್ಯಗಳು ನಡೆಯಬೇಕಿದೆ. ಏಪ್ರಿಲ್​ 15ರಂದು ಸನ್​ರೈಸರ್ಸ್​, ಮೇ 4ಕ್ಕೆ ಗುಜರಾತ್​, ಮೇ 12ಕ್ಕೆ ಡೆಲ್ಲಿ ಮತ್ತು ಮೇ 18ಕ್ಕೆ ಸಿಎಸ್​ಕೆ ವಿರುದ್ಧದ ಪಂದ್ಯಗಳು ನಿಗದಿಯಾಗಿವೆ.

ಕೆಎಸ್​ಸಿಎ ಮನವಿಯ ಮೇರೆಗೆ ಬೆಂಗಳೂರು ಜಲಮಂಡಳಿ, ಕಬ್ಬನ್​ ಪಾರ್ಕ್​ ಸಮೀಪದಲ್ಲಿರುವ ಸ್ಟೇಡಿಯಂಗೆ ನೀರು ಪೂರೈಸಲು ಸಮ್ಮತಿಸಿದೆ ಎಂಬ ವರದಿಯನ್ನು ಆಧರಿಸಿ ಎನ್​ಜಿಟಿ ಚೇರ್ಮನ್​ ನ್ಯಾಯಮೂರ್ತಿ ಪ್ರಕಾಶ್​ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ. ಎ ಸೆಂಥಿಲ್​ ವೆಲ್​ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಕೆಎಸ್​ಸಿಎ ಅಧಿಕಾರಿಗಳು, ಪಿಚ್​ ಅಥವಾ ಮೈದಾನಕ್ಕೆ ನೀರುಣಿಸುವ ಉದ್ದೇಶಗಳಿಗಾಗಿ ಅಂತರ್ಜಲ ಅಥವಾ ಕುಡಿಯುವ ನೀರನ್ನು ಬಳಸಿಕೊಳ್ಳುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಆರೋಪ ತಳ್ಳಿಹಾಕಿದ ಕೆಎಸ್​ಸಿಎ

ಐಪಿಎಲ್​ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಬಳಸಿರುವ ಆರೋಪವನ್ನು ಕೆಎಸ್​ಸಿಎ ತಳ್ಳಿಹಾಕಿದೆ. "ಪ್ರತಿ ಪಂದ್ಯ ನಡೆಸಲು ನಮಗೆ ಅಂದಾಜು 15 ಸಾವಿರ ಲೀಟರ್​ ನೀರು ಬೇಕಾಗುತ್ತದೆ. ಆದರೆ ಅದಕ್ಕೆ ನಾವು ಸಂಸ್ಕರಿಸಿದ ನೀರು ಬಳಸುವುದಿಲ್ಲ. ನಮ್ಮದೇ ಒಳಚರಂಡಿ ಸಂಸ್ಕರಣಾ ಟಕದ (ಎಸ್​ಟಿಪಿ) ನೀರನ್ನು ಬಳಸಿಕೊಳ್ಳುತ್ತೇವೆ. ಎನ್​ಜಿಟಿ ನೋಟಿಸ್​ ಅಧ್ಯಾಯನ ಮಾಡುತ್ತಿದ್ದೇವೆ. ನಮ್ಮ ಸ್ಟೇಡಿಯಂ ಎನ್​ಜಿಟಿ ನಿಬಂಧನೆಗಳಿಗೆ ಒಳಪಟ್ಟಿದೆ. ಹೀಗಾಗಿ ನಾವು ಮುಂದೆಯೂ ಪಂದ್ಯ ಆಯೋಜನೆಗೆ ಅನುಮತಿ ಲಭಿಸುವ ವಿಶ್ವಾಸದಲ್ಲಿದ್ದೇವೆ' ಎಂದು ಕೆಎಸ್​ಸಿಎ ಸಿಇಒ ಶುಬೇಂದು ಘೋಷ್​ ತಿಳಿಸಿದ್ದಾರೆ.