ಕ್ರೀಡೆ

ಜಿಎಸ್​ಟಿ ಪರಿಷ್ಕರಣೆಯಿಂದ ಐಪಿಎಲ್​ ಪ್ರೇಮಿಗಳಿಗೆ ಶಾಕ್!

ನವದೆಹಲಿ: ಭಾರತದಲ್ಲಿ ನಡೆಯುವ ಇತರ ಕ್ರಿಕೆಟ್​ ಪಂದ್ಯಗಳಿಗೆ ಹೋಲಿಸಿದರೆ ಐಪಿಎಲ್​ ಟಿಕೆಟ್​ಗಳ ದರ ಯಾವಾಗಲೂ ದುಬಾರಿಯಾಗಿರುತ್ತವೆ. ಇದೀಗ ಕೇಂದ್ರ ಸರ್ಕಾರ ಜಿಎಸ್​ಟಿ ಸ್ಲ್ಯಾಬ್​ಗಳ ಪರಿಷ್ಕರಣೆ ಮಾಡಿರುವ ಬಳಿಕ ಐಪಿಎಲ್​ ಪಂದ್ಯಗಳ ಟಿಕೆಟ್​ ದರ ಇನ್ನಷ್ಟು ದುಬಾರಿಯಾಗಲಿವೆ. ಐಪಿಎಲ್​ ಟಿಕೆಟ್​ಗಳ ಮೇಲಿನ ತೆರಿಗೆಯನ್ನು ಗರಿಷ್ಠ ಶೇ. 28ರ ಸ್ಲ್ಯಾಬ್​ನಿಂದ ಐಷಾರಾಮಿಯ ಶೇ. 40ಕ್ಕೆ ಏರಿಸಿರುವುದು ಇದಕ್ಕೆ ಕಾರಣವಾಗಿದೆ. ಅಂದರೆ ಐಪಿಎಲ್​ ಟಿಕೆಟ್​ಗಳಿಗೆ ಇನ್ನು ಗರಿಷ್ಠ ಜಿಎಸ್​ಟಿ ಅನ್ವಯಿಸಲಿದೆ.

ಐಪಿಎಲ್​ ಟಿಕೆಟ್​ಗಳ ತೆರಿಗೆ ಸ್ನಾ$ಬ್​ಅನ್ನು ಈಗ ಕ್ಯಾಸಿನೋ, ರೇಸ್​ ಕ್ಲಬ್​ನಂಥ ಐಷಾರಾಮಿ ಮನೋರಂಜನೆ ಮತ್ತು ಪಾಪದ ಸರಕುಗಳ ಪಟ್ಟಿಗೆ ಸೇರಿಸಲಾಗಿದೆ. ಇದರಿಂದಾಗಿ ಮುಂದಿನ ಐಪಿಎಲ್​ ಆವೃತ್ತಿಯ ಒಂದು ಸಾವಿರ ಮುಖಬೆಲೆಯ ಟಿಕೆಟ್​ಗಳ ದರ 1,280ಕ್ಕೆ ಬದಲಾಗಿ 1,400 ರೂ. ಆಗಲಿವೆ. ಅಂದರೆ 120 ರೂ. ಬೆಲೆ ಏರಿಕೆಯಾಗಲಿದೆ. ಐಪಿಎಲ್​ ಪಂದ್ಯಗಳ 500 ರೂ. ಟಿಕೆಟ್​ ಬೆಲೆ ಶೇ. 40 ಜಿಎಸ್​ಟಿಯೊಂದಿಗೆ 640ರಿಂದ 700 ರೂ.ಗೆ ಏರಿಕೆಯಾಗಲಿದೆ. 2 ಸಾವಿರ ರೂ. ಮುಖಬೆಲೆಯ ಟಿಕೆಟ್​ ದರ 2,560ರಿಂದ 2,800 ರೂ.ಗೆ ಏರಿಕೆಯಾಗಲಿದೆ. ಐಪಿಎಲ್​ ಲೀಗ್​ ಪಂದ್ಯಗಳ ಟಿಕೆಟ್​ ದರವನ್ನು ಆತಿಥೇಯ ಫ್ರಾಂಚೈಸಿಗಳು ನಿರ್ಧರಿಸುತ್ತವೆ. ಇದರಲ್ಲಿ ಬಿಸಿಸಿಐಗೆ ಯಾವುದೇ ಪಾತ್ರ ಇರುವುದಿಲ್ಲ.

ಐಪಿಎಲ್​ ಹೆಸರನ್ನು ಕೇಂದ್ರ ಸರ್ಕಾರ ಜಿಎಸ್​ಟಿಯಲ್ಲಿ ರ್ನಿದಿಷ್ಟವಾಗಿ ಉಲ್ಲೇಖಿಸಿದೆ. ಆದರೆ ಈ ಶೇ. 40ರ ಸ್ನಾ$ಬ್​ ದೇಶದ ಇತರ ಪ್ರಮುಖ ಕ್ರೀಡಾ ಲೀಗ್​ಗಳಾದ ಪ್ರೊ ಕಬಡ್ಡಿ ಲೀಗ್​ ಮತ್ತು ಇಂಡಿಯನ್​ ಸೂಪರ್​ ಲೀಗ್​ (ಐಎಸ್​ಎಲ್​) ಫುಟ್​ಬಾಲ್​ ಟೂರ್ನಿಗಳಿಗೂ ಅನ್ವಯಿಸಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯದ ತೆರಿಗೆ ಬದಲಿಲ್ಲ

ಐಪಿಎಲ್​ ಟಿಕೆಟ್​ ಮೇಲಿನ ತೆರಿಗೆ ಏರಿಕೆ ನಡುವೆ, ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳ ಟಿಕೆಟ್​ ಮೇಲಿನ ಜಿಎಸ್​ಟಿ ಸ್ಲ್ಯಾಬ್​ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಟೀಮ್​ ಇಂಡಿಯಾದ ಪಂದ್ಯಗಳು ಮತ್ತು ಇತರ ಕ್ರೀಡಾಕೂಟಗಳ ಟಿಕೆಟ್​ಗಳಿಗೆ ಈ ಹಿಂದಿನಂತೆಯೇ ಶೇ. 18 ಜಿಎಸ್​ಟಿ ಮುಂದುವರಿಯಲಿದೆ. ಜತೆಗೆ 500 ರೂ.ಗಿಂತ ಕಡಿಮೆ ಮುಖಬೆಲೆಯ ಟಿಕೆಟ್​ಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ. ಹೊಸ ಜಿಎಸ್​ಟಿ ಸೆಪ್ಟೆಂಬರ್​ 22ರಿಂದ ಅನ್ವಯಿಸಲಿದ್ದು, ಸೆಪ್ಟೆಂಬರ್​ 30ರಿಂದ ಭಾರತದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್​ ಟೂರ್ನಿಯ ಟಿಕೆಟ್​ ಮೇಲೆ ಹಿಂದಿನಂತೆಯೇ ಶೇ.18 ಜಿಎಸ್​ಟಿ ಅನ್ವಯಿಸಲಿದೆ.