ಕ್ರೀಡೆ

ಇಂದು ಆರ್‌ಸಿಬಿ-ಸನ್‌ರೈಸರ್ಸ್‌ ಎಲಿಮಿನೇಟರ್ ವಾರ್

ಅಬುಧಾಬಿ: ಸತತ 4 ಸೋಲಿನ ನಡುವೆಯೂ ಪ್ಲೇಆಫ್​ಗೇರಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸತತ 3 ಗೆಲುವಿನೊಂದಿಗೆ ಪ್ಲೇಆಫ್​ ಅವಕಾಶ ಒಲಿಸಿಕೊಂಡಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-13ರಲ್ಲಿ ಶುಕ್ರವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ‘ಸೆಮಿಫೈನಲ್’ ಮಾದರಿಯ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದ್ದರೆ, ಸೋತ ತಂಡ 4ನೇ ಸ್ಥಾನಕ್ಕೆ ತೃಪ್ತಿಪಡಲಿದೆ.

ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುವ ಮೂಲಕವೇ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದವು. ಅದರಲ್ಲಿ ವಿರಾಟ್ ಕೊಹ್ಲಿ ಪಡೆ ಗೆದ್ದು ಶುಭಾರಂಭ ಕಂಡಿದ್ದರೂ, ಲೀಗ್ ಹಂತದ ಮುಕ್ತಾಯದ ವೇಳೆಗೆ ಉಭಯ ತಂಡಗಳ ಪರಿಸ್ಥಿತಿ ತದ್ವಿರುದ್ಧವಾಗಿತ್ತು. ಮೊದಲ 10 ಪಂದ್ಯಗಳಲ್ಲಿ 7ರಲ್ಲಿ ಜಯಿಸಿದ್ದ ಆರ್‌ಸಿಬಿ ನಂತರದ ನಾಲ್ಕೂ ಪಂದ್ಯ ಸೋತಿದ್ದರೆ, ಮೊದಲ 9 ಪಂದ್ಯಗಳಲ್ಲಿ 6ರಲ್ಲಿ ಸೋತಿದ್ದ ಸನ್‌ರೈಸರ್ಸ್‌ ನಂತರದ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಪ್ಲೇಆ್ಗೇರಿದೆ. ಹೀಗಾಗಿ ಈ ಬಾರಿ ಮೇಲ್ನೋಟಕ್ಕೆ ಡೇವಿಡ್ ವಾರ್ನರ್ ಬಳಗವೇ ಫೇವರಿಟ್ ಎನಿಸಿದ್ದರೂ, ಆರ್‌ಸಿಬಿ ತಂಡ ತಿರುಗಿಬಿದ್ದರೆ ಕಪ್ ಗೆಲುವಿನ ಹೋರಾಟ ಮುಂದುವರಿಸಬಹುದಾಗಿದೆ.

ಪುಟಿದೇಳುವ ಹಂಬಲದಲ್ಲಿ ಆರ್‌ಸಿಬಿ

ಸತತ 4 ಸೋಲು ಕಂಡರೂ ಮುನ್ನಡೆದಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಇನ್ನು ಯಾವುದೇ ಎಡವಟ್ಟು ಮಾಡಿಕೊಳ್ಳಲು ಅವಕಾಶವಿಲ್ಲ. ಇನ್ನೊಂದು ಪಂದ್ಯದಲ್ಲಿ ಎಡವಿದರೂ ಕಪ್ ಗೆಲುವಿನ ಆಸೆ ಕೈಚೆಲ್ಲಬೇಕಾಗುತ್ತದೆ. ಪ್ಲೇಆಫ್​ ಹಂತದಲ್ಲಿ ಕಪ್ ಗೆಲುವಿನ ಅಸಲಿ ಆಟ ಶುರುವಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಆರ್‌ಸಿಬಿ ಪುಟಿದೇಳಬಹುದು. ತಂಡದ ಬ್ಯಾಟಿಂಗ್ ವಿಭಾಗ ಕೈಕೊಡುತ್ತಿರುವುದು ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಿದೆ. ಕನ್ನಡಿಗ ದೇವದತ್ ಪಡಿಕಲ್ 5 ಅರ್ಧಶತಕ ಸಿಡಿಸುವ ಮೂಲಕ ಸ್ಥಿರ ನಿರ್ವಹಣೆ ತೋರಿದ್ದಾರೆ. ಆದರೆ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಸಹಿತ ಇತರ ಬ್ಯಾಟ್ಸ್‌ಮನ್‌ಗಳಿಂದ ಇಂಥ ಆಟ ಬಂದಿಲ್ಲ. ಸ್ಲಾಗ್ ಓವರ್‌ಗಳಲ್ಲೂ ಆರ್‌ಸಿಬಿ ರನ್ ಕೊರತೆ ಎದುರಿಸಿದೆ. ಕ್ರಿಸ್ ಮಾರಿಸ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಸ್ಲಾಗ್ ಓವರ್‌ಗಳಲ್ಲಿ ಬಿರುಸಿನ ಆಟ ತೋರಲು ವಿಲರಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲೂ ಆರ್‌ಸಿಬಿ ಸ್ಥಿರ ನಿರ್ವಹಣೆಯ ಸಮಸ್ಯೆ ಎದುರಿಸಿದೆ. ಕ್ರಿಸ್ ಮಾರಿಸ್ ನಿರ್ವಹಣೆ ಪಂದ್ಯದಿಂದ ಪಂದ್ಯಕ್ಕೆ ಕುಸಿಯುತ್ತಿದ್ದರೆ, ಯಜುವೇಂದ್ರ ಚಾಹಲ್ (20 ವಿಕೆಟ್) ಮಾತ್ರ ಪರಿಣಾಮಕಾರಿ ಬೌಲಿಂಗ್ ಸಂಘಟಿಸುತ್ತ ಬಂದಿದ್ದಾರೆ.

ಲಯದಲ್ಲಿದೆ ಸನ್‌ರೈಸರ್ಸ್‌

ಹ್ಯಾಟ್ರಿಕ್ ಗೆಲುವಿನೊಂದಿಗೆ ಲೀಗ್ ಹಂತ ಮುಕ್ತಾಯಗೊಳಿಸಿರುವ ಸನ್‌ರೈಸರ್ಸ್‌ ತಂಡ ಉತ್ತಮ ಲಯದಲ್ಲಿದೆ. ಅದರಲ್ಲೂ ಪ್ಲೇಆಫ್​ ಹಂತಕ್ಕೇರಿರುವ ಉಳಿದ 3 ತಂಡಗಳನ್ನೇ ಸನ್‌ರೈಸರ್ಸ್‌ ತನ್ನ ಕೊನೇ 3 ಲೀಗ್ ಪಂದ್ಯಗಳಲ್ಲಿ ಮಣಿಸಿದೆ ಎಂಬುದು ಗಮನಾರ್ಹ. ಈ ಮೂಲಕ ಪ್ರಶಸ್ತಿ ಗೆಲುವಿನ ಸಾಮರ್ಥ್ಯ ತನಗಿದೆ ಎಂಬುದನ್ನೂ ಸನ್‌ರೈಸರ್ಸ್‌ ನಿರೂಪಿಸಿದೆ. 2016ರಲ್ಲೂ ಸನ್‌ರೈಸರ್ಸ್‌ ಕೊನೇ 3 ಲೀಗ್ ಪಂದ್ಯ ಗೆದ್ದ ಪ್ಲೇಆಫ್​ಗೇರಿದಾಗ ಪ್ರಶಸ್ತಿ ಒಲಿಸಿಕೊಂಡಿತ್ತು. ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಆರಂಭಿಕರಾಗಿ ಕಣಕ್ಕಿಳಿದು ಸನ್‌ರೈಸರ್ಸ್‌ ಬಲ ಹಿಗ್ಗಿಸಿದ್ದಾರೆ. ನಾಯಕ ವಾರ್ನರ್ ಜತೆಗೆ ಮೊದಲ ವಿಕೆಟ್‌ಗೆ ಉತ್ತಮ ಜತೆಯಾಟವಾಡುತ್ತಿದ್ದಾರೆ. ಇದರಿಂದ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಓವರ್ ಆಡಲು ಸಿಗದ ಕಾರಣ ಈ ದೌರ್ಬಲ್ಯವನ್ನು ಮರೆಮಾಚಿದಂತಾಗಿದೆ. ತಂಡದ ಬೌಲಿಂಗ್ ವಿಭಾಗದಲ್ಲೂ ಈಗ ಉತ್ತಮ ಕಾಂಬಿನೇಷನ್ ಲಭಿಸಿದೆ. ಸ್ಪಿನ್ ವಿಭಾಗದಲ್ಲಿ ರಶೀದ್ ಖಾನ್‌ಗೆ ಶಾಬಾಜ್ ನದೀಂ ಉತ್ತಮ ಸಾಥ್ ನೀಡಿದ್ದರೆ, ವೇಗದ ಬೌಲಿಂಗ್‌ನಲ್ಲಿ ಟಿ. ನಟರಾಜನ್‌ಗೆ ಜೇಸನ್ ಹೋಲ್ಡರ್ ಮತ್ತು ಸಂದೀಪ್ ಶರ್ಮ ಬಲ ತುಂಬಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 16

ಆರ್‌ಸಿಬಿ: 7

ಸನ್‌ರೈಸರ್ಸ್‌: 9

ಲೀಗ್ ಮುಖಾಮುಖಿ:

1. ದುಬೈ: ಆರ್‌ಸಿಬಿಗೆ 10 ರನ್ ಗೆಲುವು.

2. ಶಾರ್ಜಾ: ಸನ್‌ರೈಸರ್ಸ್‌ಗೆ 5 ವಿಕೆಟ್ ಜಯ.

ಟೀಮ್ ನ್ಯೂಸ್:

ಸನ್‌ರೈಸರ್ಸ್‌ ಹೈದರಾಬಾದ್: ಗೆಲುವಿನ ಲಯದಲ್ಲಿರುವ ತಂಡದಲ್ಲಿ ಬದಲಾವಣೆಯ ನಿರೀಕ್ಷೆ ಕಡಿಮೆ ಇದೆ. ಕಳೆದ ಪಂದ್ಯದಲ್ಲಿ ಅಭಿಷೇಕ್ ಶರ್ಮ ಬದಲಿಗೆ ಅವಕಾಶ ಪಡೆದ ಪ್ರಿಯಂ ಗಾರ್ಗ್ ಸ್ಥಾನ ಉಳಿಸಿಕೊಳ್ಳಬಹುದು. ಕಳೆದ ಪಂದ್ಯದಲ್ಲಿ ಆರಂಭಿಕರೇ ಚೇಸಿಂಗ್ ಕೆಲಸ ಪೂರ್ಣಗೊಳಿಸಿದ ಕಾರಣ ಗಾರ್ಗ್‌ಗೆ ಬ್ಯಾಟಿಂಗ್ ಸಿಗಲಿಲ್ಲ. ಬೌಲರ್‌ಗಳು ಮಿಂಚುತ್ತಿರುವುದರಿಂದ, ಬ್ಯಾಟಿಂಗ್ ವಿಭಾಗ ಬಲ ಪಡಿಸಲು ಗಾರ್ಗ್ ಉಳಿಸಿಕೊಳ್ಳುವುದೇ ಉತ್ತಮವೆನಿಸಿದೆ.

ಆರ್‌ಸಿಬಿ: ಅನುಭವಿ ಆರನ್ ಫಿಂಚ್ ಬದಲಿಗೆ ಜೋಶ್ ಫಿಲಿಪ್‌ಗೆ ಅವಕಾಶ ಕಲ್ಪಿಸಿದ್ದರೂ, ಆರ್‌ಸಿಬಿಗೆ ಸ್ಫೋಟಕ ಆರಂಭ ದೊರೆತಿಲ್ಲ. ಹೀಗಾಗಿ ಫಿಂಚ್ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಗಾಯದಿಂದಾಗಿ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ವೇಗಿ ನವದೀಪ್ ಸೈನಿ ಮರಳಿ ಕಣಕ್ಕಿಳಿಯುವ ನಿರೀಕ್ಷೆ ಇದ್ದು, ಅವರಿಗೆ ಶಾಬಾಜ್ ಅಹ್ಮದ್ ಅಥವಾ ಮೊಹಮದ್ ಸಿರಾಜ್ ಸ್ಥಾನ ಬಿಟ್ಟುಕೊಡಬಹುದು.

28: ದೇವದತ್ ಪಡಿಕಲ್ (472) ಇನ್ನು 28 ರನ್ ಗಳಿಸಿದರೆ ಐಪಿಎಲ್ ಪದಾರ್ಪಣೆಯ ವರ್ಷವೇ 500 ರನ್ ಪೂರೈಸಿದ ಭಾರತದ ಮೊದಲ ದೇಶೀಯ (ರಾಷ್ಟ್ರೀಯ ತಂಡದ ಪರ ಆಡದ) ಆಟಗಾರ ಎನಿಸಲಿದ್ದಾರೆ.

5: ಸನ್‌ರೈಸರ್ಸ್‌ ತಂಡ ಸತತ 5ನೇ ವರ್ಷ ಪ್ಲೇಆಫ್​ನಲ್ಲಿ ಆಡುತ್ತಿದ್ದರೆ, ಆರ್‌ಸಿಬಿ 3 ವರ್ಷಗಳ ಬಳಿಕ ಪ್ಲೇಆಫ್​ ಹಂತಕ್ಕೇರಿದೆ.