ಕ್ರೀಡೆ

ಇಂದು ಈಡನ್‌ನಲ್ಲಿ ಮೊದಲ ಕ್ವಾಲಿಫೈಯರ್; ಫೈನಲ್‌ಗೇರಲು ಗುಜರಾತ್-ರಾಜಸ್ಥಾನ ಫೈಟ್

ಕೋಲ್ಕತ: ಸತತ 58 ದಿನಗಳಲ್ಲಿ 70 ಲೀಗ್ ಪಂದ್ಯಗಳ ನಾನ್-ಸ್ಟಾಪ್ ಕಾದಾಟಗಳನ್ನು ಕಂಡ ಐಪಿಎಲ್ 15ನೇ ಆವೃತ್ತಿ ಇದೀಗ ಪ್ರಶಸ್ತಿ ವಿಜೇತರನ್ನು ನಿರ್ಧರಿಸುವ ಪ್ಲೇಆಫ್​ ಸಮರಕ್ಕೆ ಸಜ್ಜಾಗಿದೆ. ಹೊಸ ತಂಡವಾಗಿದ್ದರೂ ಲೀಗ್ ಹಂತದಲ್ಲಿ ಭರ್ಜರಿ ನಿರ್ವಹಣೆ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಗುಜರಾತ್ ಟೈಟಾನ್ಸ್ ಮತ್ತು ಮೊದಲ ಆವೃತ್ತಿಯ ಬಳಿಕ ಮತ್ತೊಮ್ಮೆ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಮಂಗಳವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಗೆದ್ದ ತಂಡ ನೇರವಾಗಿ ಫೈನಲ್‌ಗೇರಿದರೆ, ಸೋತ ತಂಡ 2ನೇ ಕ್ವಾಲಿಫೈಯರ್‌ನಲ್ಲಿ ಆಡುವ ಇನ್ನೊಂದು ಅವಕಾಶ ಪಡೆಯಲಿದೆ.

ಉತ್ಸಾಹದಲ್ಲಿ ಗುಜರಾತ್
ಹೊಸದಾಗಿ ರಚಿಸಲ್ಪಟ್ಟ ತಂಡ, ನಾಯಕತ್ವದ ಅನುಭವವಿಲ್ಲದ ಹಾರ್ದಿಕ್ ಪಾಂಡ್ಯ ಸಾರಥ್ಯ, ಸ್ಟಾರ್ ಬ್ಯಾಟರ್‌ಗಳಿಲ್ಲದ ತಂಡವಾಗಿದ್ದರೂ ಗುಜರಾತ್ ಟೈಟಾನ್ಸ್ ಲೀಗ್ ಹಂತದಲ್ಲಿ ತೋರಿದ ಬಲಿಷ್ಠ ನಿರ್ವಹಣೆ ಎಲ್ಲರನ್ನೂ ಬೆರಗುಗೊಳಿಸಿದೆ. ಮಾರಕ ಬೌಲಿಂಗ್ ವಿಭಾಗ ಮತ್ತು ಕೊನೇ ಓವರ್‌ನಲ್ಲಿ 20-25 ರನ್ ಬೇಕಿದ್ದರೂ ಕಸಿಯುವ ಫಿನಿಷರ್‌ಗಳ ಬಲವೇ ಗುಜರಾತ್ ಯಶಸ್ಸಿನ ಪ್ರಮುಖ ಗುಟ್ಟಾಗಿದೆ. ಬ್ಯಾಟಿಂಗ್-ಬೌಲಿಂಗ್ ಎರಡಲ್ಲೂ ಮಿಂಚುತ್ತ ಬಂದಿರುವ ನಾಯಕ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ರಾಹುಲ್ ತೆವಾಟಿಯ ಕೂಡ ಟೈಟಾನ್ಸ್ ಯಶಸ್ಸಿನಲ್ಲಿ ಮಿಂಚಿದ್ದಾರೆ. 200-220 ರನ್ ಬೇಕಿದ್ದರೂ ಚೇಸಿಂಗ್ ಮಾಡಬಲ್ಲ ಸಾಮರ್ಥ್ಯದ ಟೈಟಾನ್ಸ್, ಮೊದಲು ಬ್ಯಾಟಿಂಗ್ ಮಾಡಿದಾಗ ಮಾತ್ರ ಮೊತ್ತ ರಕ್ಷಿಸಿಕೊಳ್ಳುವಲ್ಲಿ ಎಡವಿದೆ. ಟೈಟಾನ್ಸ್ ಟೂರ್ನಿಯಲ್ಲಿ ಸೋತಿರುವ 4 ಪಂದ್ಯಗಳಲ್ಲಿ 3ರಲ್ಲಿ ಮೊದಲು ಬ್ಯಾಟಿಂಗ್ ಮಾಡಿತ್ತು ಮತ್ತು 170ರ ಗಡಿ ದಾಟಿರಲಿಲ್ಲ. ಆರಂಭಿಕ ಶುಭಮಾನ್ ಗಿಲ್ ಅಸ್ಥಿರ ನಿರ್ವಹಣೆಯೂ ತಂಡಕ್ಕೆ ಹಿನ್ನಡೆಯಾಗಿದೆ.

ರಾಯಲ್ಸ್‌ಗೆ ಅನುಭವಿ-ಯುವ ಬಲ
ಅನುಭವಿ ಮತ್ತು ಯುವ ಆಟಗಾರರ ಮಿಶ್ರಣ ರಾಜಸ್ಥಾನ ತಂಡಕ್ಕೆ ಸಮತೋಲನ ತಂದಿದೆ. ಅದರಿಂದಲೇ ತಂಡದ ಒಬ್ಬರಲ್ಲದಿದ್ದರೆ, ಇನ್ನೊಬ್ಬ ಆಟಗಾರ ಮಿಂಚುವ ಯಶಸ್ಸು ಕಾಣುತ್ತ ಬಂದಿದೆ. ರಾಜಸ್ಥಾನ ಮೊತ್ತ ರಕ್ಷಿಸಿಕೊಳ್ಳುವಲ್ಲಿ ಮಿಶ್ರ ಲ ಕಂಡಿದೆ. ಸೋತ 5 ಪಂದ್ಯಗಳಲ್ಲಿ 4ರಲ್ಲಿ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿತ್ತು. ಆದರೆ ಗೆದ್ದ 9ರಲ್ಲೂ 7ರಲ್ಲಿ ಮೊದಲು ಬ್ಯಾಟಿಂಗ್ ಮಾಡಿತ್ತು ಎಂಬುದು ಗಮನಾರ್ಹ. ಟೂರ್ನಿಯಲ್ಲಿ ಸದ್ಯ ಆರೆಂಜ್ (ಬಟ್ಲರ್) ಮತ್ತು ಪರ್ಪಲ್ (ಚಾಹಲ್) ಕ್ಯಾಪ್ ಹೊಂದಿರುವವರು ಸಂಜು ಸ್ಯಾಮ್ಸನ್ ಬಳಗದಲ್ಲೇ ತಂಡದಲ್ಲೇ ಇದ್ದಾರೆ. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಬ್ಯಾಟಿಂಗ್‌ನಲ್ಲೂ ಮಿಂಚುತ್ತಿರುವುದು ರಾಯಲ್ಸ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಚೊಚ್ಚಲ ಆವೃತ್ತಿಯ ಬಳಿಕ 2ನೇ ಬಾರಿಗೆ ಫೈನಲ್‌ಗೇರುವ ಅವಕಾಶವನ್ನು ರಾಜಸ್ಥಾನ ತಂಡ ಹೊಂದಿದೆ. 2008ರ ಪ್ರಶಸ್ತಿ ಗೆಲುವಿನ ಬಳಿಕ 2013ರಲ್ಲಿ 3ನೇ ಸ್ಥಾನ ಗಳಿಸಿದ್ದೇ ರಾಜಸ್ಥಾನ ತೋರಿರುವ ಅತ್ಯುತ್ತಮ ನಿರ್ವಹಣೆಯಾಗಿದೆ.

ಟೀಮ್ ನ್ಯೂಸ್:
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಾಹ ಗಾಯದಿಂದಾಗಿ ಆರ್‌ಸಿಬಿ ವಿರುದ್ಧದ ಕೊನೇ ಲೀಗ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡಿರಲಿಲ್ಲ. ಅವರು ಫಿಟ್ ಆಗದಿದ್ದರೆ ಮ್ಯಾಥ್ಯೂ ವೇಡ್ ಕೀಪಿಂಗ್ ಮಾಡಬಹುದು ಮತ್ತು ಇನಿಂಗ್ಸ್ ಆರಂಭಿಸಬಹುದು. ಲಾಕಿ ಫರ್ಗ್ಯುಸನ್ ಬದಲು ಅಲ್ಜಾರಿ ಜೋಸೆಫ್​ ಮತ್ತು ಯಶ್ ದಯಾಳ್ ಬದಲು ಕನ್ನಡಿಗ ಅಭಿನವ್ ಮನೋಹರ್ ಆಡಬಹುದು.
ರಾಜಸ್ಥಾನ ರಾಯಲ್ಸ್: ಕೊನೇ ಲೀಗ್ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ತಂಡ ಉತ್ತಮ ಲಯದಲ್ಲಿದೆ. ಹೀಗಾಗಿ ವಿನ್ನಿಂಗ್ ಕಾಂಬಿನೇಷನ್‌ನಲ್ಲಿ ಬದಲಾವಣೆ ಅನುಮಾನ. ಬ್ಯಾಟಿಂಗ್ ಕ್ರಮಾಂಕಗಳಷ್ಟೇ ಮತ್ತೆ ಏರುಪೇರಾಗಬಹುದು.

ಕಾಡುತ್ತಿದೆ ಮಳೆ ಭೀತಿ
ಟೂರ್ನಿಯ ಲೀಗ್ ಪಂದ್ಯಗಳೆಲ್ಲ ನಿರ್ವಿಘ್ನವಾಗಿ ಮಹಾರಾಷ್ಟ್ರದಲ್ಲಿ (ಮುಂಬೈ-ಪುಣೆ) ನಡೆದಿದ್ದರೆ, ಪ್ಲೇಆಫ್​ ಹಂತದ ಮೊದಲೆರಡು ಪಂದ್ಯಗಳಲ್ಲಿ ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ನಿಗದಿಯಾಗಿವೆ. ಆದರೆ ಕೋಲ್ಕತದಲ್ಲಿ ಸದ್ಯ ಭಾರಿ ಮಳೆಯಾಗುತ್ತಿದ್ದು, ಐಪಿಎಲ್ ಪಂದ್ಯಗಳಿಗೂ ಅಡಚಣೆ ತರುವ ಭೀತಿ ಇದೆ.

ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೀಗ್ ಮುಖಾಮುಖಿ: ಗುಜರಾತ್‌ಗೆ 37 ರನ್ ಗೆಲುವು.

ಮಳೆ ಅಡ್ಡಿ ಪಡಿಸಿದರೆ...
*ಫೈನಲ್‌ಗೆ ಮಾತ್ರ ಮೀಸಲು ದಿನವಿದೆ. ಉಳಿದ 3 ಪ್ಲೇಆಫ್​ ಪಂದ್ಯಗಳಿಗೆ ಇಲ್ಲ.
*ಕನಿಷ್ಠ 5 ಓವರ್‌ಗಳ ಪಂದ್ಯ (ಸ್ಟ್ರಾಟಜಿಕ್ ಟೈಮ್‌ಔಟ್ ಇರಲ್ಲ) ಆಡಲು ಮೊದಲ ಆದ್ಯತೆ.
*2ನೇ ಇನಿಂಗ್ಸ್‌ನಲ್ಲಿ ಕನಿಷ್ಠ 5 ಓವರ್ ಆಟ ಬಳಿಕ ಮಳೆ ಕಾಡಿದರೆ ಡಕ್ವರ್ತ್-ಲೂಯಿಸ್ ನಿಯಮದನ್ವಯ ಫಲಿತಾಂಶ ನಿರ್ಧಾರ.
*ರಾತ್ರಿ 9.40ರವರೆಗೆ ಪಂದ್ಯ ಆರಂಭ ವಿಳಂಬಗೊಂಡರೂ, ಪೂರ್ಣ 20 ಓವರ್‌ಗಳ ಪಂದ್ಯವೇ ನಡೆಯಲಿದೆ.
*ತಲಾ 5 ಓವರ್‌ಗಳ ಪಂದ್ಯ ಆಯೋಜಿಸಲು ರಾತ್ರಿ 11.56ರವರೆಗೂ ಅವಕಾಶವಿದೆ.
*ಪಂದ್ಯ ನಡೆಯದಿದ್ದರೆ ಫಲಿತಾಂಶ ನಿರ್ಧಾರಕ್ಕೆ ಸೂಪರ್ ಓವರ್.
*ಸೂಪರ್ ಓವರ್ ಆರಂಭಿಸಲು ರಾತ್ರಿ 12.50ರವರೆಗೂ ಸಮಯಾವಕಾಶವಿದೆ.
*ಸೂಪರ್ ಓವರ್ ಕೂಡ ನಡೆಯದಿದ್ದರೆ, ಲೀಗ್ ಅಂಕಪಟ್ಟಿಯಲ್ಲಿ ಮೇಲಿದ್ದ ತಂಡಕ್ಕೆ ಮುನ್ನಡೆ.
*ಇದರನ್ವಯ ಮೊದಲ ಕ್ವಾಲಿಫೈಯರ್ ರದ್ದಾದರೆ ಅಗ್ರಸ್ಥಾನಿ ಗುಜರಾತ್ ಫೈನಲ್‌ಗೇರಲಿದೆ, ರಾಜಸ್ಥಾನ 2ನೇ ಕ್ವಾಲಿಫೈಯರ್ ಆಡಲಿದೆ. ಎಲಿಮಿನೇಟರ್ ರದ್ದಾದರೆ, ಲಖನೌ 2ನೇ ಕ್ವಾಲಿಫೈಯರ್‌ಗೇರಲಿದೆ ಮತ್ತು ಆರ್‌ಸಿಬಿ 4ನೇ ಸ್ಥಾನಕ್ಕೆ ತೃಪ್ತಿಪಡಲಿದೆ. 2ನೇ ಕ್ವಾಲಿಫೈಯರ್ ಕೂಡ ನಡೆಯದಿದ್ದರೆ ರಾಜಸ್ಥಾನ ಫೈನಲ್‌ಗೇರಲಿದೆ.