ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜಗತ್ತಿನ ಅತಿದೊಡ್ಡ ಕ್ರಿಕೆಟ್ ಟೂರ್ನಮೆಂಟ್ ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ ಅವರು ಬಣ್ಣಿಸಿದ್ದಾರೆ.
ಇನ್ನು ಐಪಿಎಲ್‌ನಿಂದ ಬರುವ ಹಣವನ್ನು ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರುಹೂಡಿಕೆ ಮಾಡಿತ್ತಿರುವ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಅಕ್ರಮ್ ಶ್ಲಾಘಿಸಿದರು. ಇದರಿಂದಲೇ ಒಳ್ಳೆಯ ದೇಶಿ ಪ್ರತಿಭೆಗಳು ಬೆಳಕಿಗೆ ಬರಲು ಸಹಾಯವಾಗುತ್ತಿದೆ ಎಂದರು.
ಜಸ್ಪ್ರಿತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ದೀಪಕ್ ಚಾಹರ್, ರಿಷಬ್ ಪಂಥ್ನಂತ ದೇಶಿ ಆಟಗಾರರು ಐಪಿಎಲ್ನಲ್ಲಿ ತಮ್ಮ ಕ್ರಿಕೆಟ್ ಪ್ರಯಾಣ ಆರಂಭಿಸಿ, ಇದೀಗ ರಾಷ್ಟ್ರೀಯ ತಂಡದಲ್ಲೂ ತಮ್ಮ ಛಾಪೂ ಮೂಡಿಸುತ್ತಿರುವುದನ್ನು ಗಮನಿಸಬಹುದಾಗಿದೆ ಎಂದು ತಿಳಿಸಿದರು. ಅಲ್ಲದೆ, ಮಾಜಿ ಕ್ರಿಕೆಟರ್ಗಳನ್ನು ಕೋಚ್ಗಳಾಗಿ ನೇಮಕ ಮಾಡಿಕೊಳ್ಳುತ್ತಿರುವುದು ಸಹ ಭಾರತಕ್ಕೆ ವರದಾನವಾಗಿದ್ದು, ಐಪಿಎಲ್ನಲ್ಲಿ ಒಳ್ಳೆಯ ಪ್ರತಿಭೆಗಳನ್ನು ಹುಟ್ಟುಹಾಕಲು ಸಹಾಯವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಂದಹಾಗೆ ಅಕ್ರಮ್ ಅವರು ಕೋಲ್ಕತ ನೈಟ್ ರೈಡರ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿರುವುದರಿಂದ ಐಪಿಎಲ್ ಮತ್ತು ಪಿಎಸ್ಎಲ್ ನಡುವಿನ ವ್ಯತ್ಯಾಸವನ್ನು ಗುರುತಿಸಿದ್ದಾರೆ. (ಏಜೆನ್ಸೀಸ್)