ನವದೆಹಲಿ: ಕ್ರೀಡಾಭಿಮಾನಿಗಳ ಫೇವರಿಟ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮೇಲೂ ಕರೊನಾ ಕರಿನೆರಳು ಕವಿದಿದೆ. ಮಾರ್ಚ್ 29ರಿಂದ ಆರಂಭವಾಗುವ ಟೂರ್ನಿಗೆ ಸಾರ್ವಜನಿಕ ವೀಕ್ಷಣೆ ಅವಕಾಶ ನೀಡದೆ, ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚರ್ಚೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಮುಚ್ಚಿದ ಕ್ರೀಡಾಂಗಣದ ಒಳಗೆ ಐಪಿಎಲ್ ನಡೆಸುವ ಸಾಧ್ಯತೆ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ. ಹಾಗೇ ತಂಡಗಳಿಗೆ ನೀಡುವ ಪರಿಹಾರದ ಬಗ್ಗೆಯೂ ಶನಿವಾರ ಚರ್ಚೆ ನಡೆಸುತ್ತೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರೊನಾ ವೈರಸ್ ಜಗತ್ತಿನೆಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಜನ ಸೇರುವ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಕ್ರೀಡಾ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ. ಅಲ್ಲದೆ, ರಾಜತಾಂತ್ರಿಕ ಮತ್ತು ಉದ್ಯೋಗ ಹೊರತುಪಡಿಸಿ ಸದ್ಯ ಅಸ್ತಿತ್ವದಲ್ಲಿರುವ ಎಲ್ಲ ವೀಸಾಗಳನ್ನು ಏಪ್ರಿಲ್ 15ರವರೆಗೆ ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರ ಹೊಸದಾಗಿ ಸಲಹೆಯನ್ನು ನೀಡಿದೆ.
ಹೀಗಾಗಿ ಬಹುತೇಕ ಐಪಿಎಲ್ ಟೂರ್ನಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ವೀಸಾ ರದ್ದು ಮಾಡಿರುವುದರಿಂದ ವಿದೇಶಿ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮುಚ್ಚಿದ ಬಾಗಿಲ ಹಿಂದೆ ಟೂರ್ನಿ ನಡೆಸುವ ಬಿಸಿಸಿಐ ಮಾತುಕತೆ ಸಫಲವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ ಭಾರತದಲ್ಲಿ ಐಪಿಎಲ್ ಅನ್ನು ಕ್ರೀಡಾಭಿಮಾನಿಗಳ ಹಬ್ಬವೆಂದೇ ಪರಿಗಣಿಸಲಾಗಿದೆ.
ಬಿಸಿಸಿಐ ಸೇರಿದಂತೆ ರಾಷ್ಟ್ರೀಯ ಒಕ್ಕೂಟಗಳಿಗೆ ಆರೋಗ್ಯ ಸಚಿವಾಲಯದ ಸಲಹೆಗಳನ್ನು ಪಾಲಿಸುವಂತೆ ಕ್ರೀಡಾ ಸಚಿವಾಲಯ ಕೇಳಿದೆ. ಕರೊನಾ ವೈರಸ್ ಸೋಂಕು ಮನಸ್ಸಿನಲ್ಲಿಟ್ಟುಕೊಂಡು ಸಾರ್ವಜನಿಕರು ಒಂದೆಡೆ ಸೇರುವುದನ್ನು ತಡೆಗಟ್ಟಲು ಸರ್ಕಾರ ಕೈಗೊಳ್ಳುವ ಕ್ರಮವನ್ನು ಅನುಸರಿಸಬೇಕೆಂದು ಕ್ರೀಡಾ ಸಚಿವಾಲಯ ಕೇಳಿದೆ.
ಸದ್ಯ ಬಿಸಿಸಿಐನಲ್ಲಿ ಚರ್ಚೆಯಾಗುತ್ತಿರುವ ಮುಚ್ಚಿದ ಬಾಗಿಲ ಹಿಂದಿನ ಐಪಿಎಲ್ ಸಫಲವಾಗದೇ ಇದ್ದಲ್ಲಿ, ಐಪಿಎಲ್ ಟೂರ್ನಿಯನ್ನು ಮುಂದೂಡುವ ಸಾಧ್ಯತೆಯೂ ಇದೆ ಎಂದೂ ಹೇಳಲಾಗುತ್ತಿದೆ.
ಅಂದಹಾಗೆ ಐಪಿಎಲ್ ಆಡಳಿತ ಮಂಡಳಿ ಮಾರ್ಚ್ 14ರಂದು ಸಭೆ ಸೇರಲಿದ್ದು ಈ ಬಾರಿಯ ಐಪಿಎಲ್ ಹಣೆಬರಹವನ್ನು ನಿರ್ಧರಿಸಲಿದೆ. ಒಂದು ವೇಳೆ ಅಂದುಕೊಂಡಂತೆ ಟೂರ್ನಿ ಆರಂಭಿಸಲು ನಿರ್ಧಾರ ಕೈಗೊಂಡಲ್ಲಿ ಮಾರ್ಚ್ 29ರಿಂದ ಐಪಿಎಲ್ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. (ಏಜೆನ್ಸೀಸ್)