ಕ್ರೀಡೆ

ಐಪಿಎಲ್ ಹರಾಜಿಗೆ 590 ಆಟಗಾರರು; ಸ್ಟಾರ್ ಕ್ರಿಕೆಟಿಗರ ಮೂಲಬೆಲೆ ಎಷ್ಟು ಗೊತ್ತೇ?

ಬೆಂಗಳೂರು: ಐಪಿಎಲ್ 15ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಭಾರತೀಯರಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್, ಆರ್. ಅಶ್ವಿನ್, ವಿದೇಶಿಯರಾದ ಡೇವಿಡ್ ವಾರ್ನರ್, ಟ್ರೆಂಟ್ ಬೌಲ್ಟ್, ಕಗಿಸೊ ರಬಾಡ ಸಹಿತ 48 ಕ್ರಿಕೆಟಿಗರು ಗರಿಷ್ಠ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13ರಂದು ನಡೆಯಲಿರುವ ಹರಾಜಿನಲ್ಲಿ ಒಟ್ಟು 590 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಈ ಪೈಕಿ 370 ಮಂದಿ ಭಾರತೀಯರಾಗಿದ್ದರೆ, 220 ಮಂದಿ ವಿದೇಶೀಯರು. 355 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದವರು ಮತ್ತು 228 ಮಂದಿ ದೇಶೀಯ ಕ್ರಿಕೆಟಿಗರಾಗಿದ್ದಾರೆ.

ಈ ಮುನ್ನ ಒಟ್ಟು 1,214 ಆಟಗಾರರು ಹರಾಜಿಗೆ ಹೆಸರು ನೋಂದಾಯಿಸಿದ್ದರೆ, ಇದೀಗ ಎಲ್ಲ 10 ಫ್ರಾಂಚೈಸಿಗಳ ಆಸಕ್ತಿಗೆ ಅನುಗುಣವಾಗಿ ಆಟಗಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಈ ಪೈಕಿ ಫ್ರಾಂಚೈಸಿಗಳ ಬೇಡಿಕೆಯ ಮೇರೆಗೆ ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ಸಹಿತ 44 ಆಟಗಾರರನ್ನು ಹರಾಜಿನ ಅಂತಿಮ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಆದರೂ ಆರ್ಚರ್ ಈ ವರ್ಷದ ಐಪಿಎಲ್‌ನಲ್ಲಿ ಆಡುವುದು ಅನುಮಾನವೆನಿಸಿದೆ. ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರನ್ನೂ ಸೇರಿಸಲು ಮನವಿಗಳು ಬಂದಿದ್ದರೂ, ಅವರು ಈ ವರ್ಷ ಐಪಿಎಲ್‌ನಲ್ಲಿ ಆಡಲು ಒಪ್ಪಿಲ್ಲ ಎನ್ನಲಾಗಿದೆ.

20 ಆಟಗಾರರು 1.5 ಕೊಟಿ ರೂ. ಮತ್ತು 34 ಆಟಗಾರರು 1 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಹಾಲಿ 19 ವಯೋಮಿತಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ತಂಡದ ನಾಯಕ ಯಶ್ ಧುಲ್, ಹರ್‌ನೂರ್ ಸಿಂಗ್, ವಿಕ್ಕಿ ಒಸ್ತ್‌ವಾಲ್ ಸಹಿತ ಕಿರಿಯ ಕ್ರಿಕೆಟಿಗರು 20 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಐಪಿಎಲ್ ಪ್ರವೇಶಕ್ಕೆ ಪ್ರಯತ್ನಿಸಲಿದ್ದಾರೆ. ಪಂಜಾಬ್ ಕಿಂಗ್ಸ್‌ಗೆ ಹರಾಜಿನಲ್ಲಿ ಗರಿಷ್ಠ 23 ಆಟಗಾರರನ್ನು ಖರೀದಿಸಲು ಅವಕಾಶವಿದ್ದರೆ, ಸಿಎಸ್‌ಕೆ, ಡೆಲ್ಲಿ, ಕೆಕೆಆರ್, ಮುಂಬೈಗೆ 21 ಆಟಗಾರರ ಅಗತ್ಯವಿದೆ. ಇತರ ತಂಡಗಳು ಗರಿಷ್ಠ 22 ಆಟಗಾರರನ್ನು ಖರೀದಿಸಬಹುದಾಗಿದೆ. ಆಟಗಾರರ ರಿಟೇನ್ ಬಳಿಕ ಪಂಜಾಬ್ ಕಿಂಗ್ಸ್ ಗರಿಷ್ಠ 72 ಕೋಟಿ ರೂ. ಮತ್ತು ಡೆಲ್ಲಿ ಕನಿಷ್ಠ 47.5 ಕೋಟಿ ರೂ. ಬಜೆಟ್ ಉಳಿಸಿಕೊಂಡಿವೆ. ವಿದೇಶಗಳ ಪೈಕಿ ಆಸ್ಟ್ರೇಲಿಯಾದಿಂದ ಗರಿಷ್ಠ 47 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇತ್ತೀಚೆಗೆ ಟೀಮ್ ಇಂಡಿಯಾಗೆ ಮರಳಿದ ಸ್ಪಿನ್ನರ್ ಕುಲದೀಪ್ ಯಾದವ್ 1 ಕೋಟಿ ಮತ್ತು ದೀಪಕ್ ಹೂಡಾ 40 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ತಮಿಳುನಾಡಿನ ಫಿನಿಷರ್ ಶಾರುಖ್ ಖಾನ್ 40 ಲಕ್ಷ ಮತ್ತು ವೇಗಿ ಆವೇಶ್ ಖಾನ್ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಕಿರಿಯರ ವಿಶ್ವಕಪ್‌ನಲ್ಲಿ ಮಿಂಚಿರುವ ದಕ್ಷಿಣ ಆಫ್ರಿಕಾದ 18 ವರ್ಷದ ಆಲ್ರೌಂಡರ್ ಡಿವಾಲ್ಡ್ ಬ್ರೆವಿಸ್ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ. ‘ಬೇಬಿ ಎಬಿ’ ಖ್ಯಾತಿಯ ಅವರು ಆರ್‌ಸಿಬಿಯಲ್ಲಿ ಎಬಿ ಡಿವಿಲಿಯರ್ಸ್‌ ಸ್ಥಾನ ತುಂಬುವ ನೆಚ್ಚಿನ ಆಟಗಾರ ಎಂದು ಈಗಾಗಲೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹರಾಜಿನಲ್ಲಿರುವ ಪ್ರಮುಖರು

₹2 ಕೋಟಿ ಮೂಲಬೆಲೆ: ಶಿಖರ್ ಧವನ್, ಮೊಹಮದ್ ಶಮಿ, ಭುವನೇಶ್ವರ್, ಆರ್. ಅಶ್ವಿನ್, ಇಶಾಂತ್ ಶರ್ಮ, ಇಶಾನ್ ಕಿಶನ್, ದೇವದತ್ ಪಡಿಕಲ್, ದೀಪಕ್ ಚಹರ್, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್, ಶಾರ್ದೂಲ್ ಠಾಕೂರ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಕೃನಾಲ್ ಪಾಂಡ್ಯ, ದಿನೇಶ್ ಕಾರ್ತಿಕ್, ಟ್ರೆಂಟ್ ಬೌಲ್ಟ್, ಡ್ವೇನ್ ಬ್ರಾವೊ, ಕಗಿಸೊ ರಬಾಡ, ಪ್ಯಾಟ್ ಕಮ್ಮಿನ್ಸ್, ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಕೀಬ್ ಅಲ್ ಹಸನ್, ಫಾಫ್​ ಡು ಪ್ಲೆಸಿಸ್, ಕ್ವಿಂಟನ್ ಡಿಕಾಕ್.

₹1.5 ಕೋಟಿ ಮೂಲಬೆಲೆ: ಜಾನಿ ಬೇರ್‌ಸ್ಟೋ, ಶಿಮ್ರೋನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮ, ನಿಕೋಲಸ್ ಪೂರನ್, ಆರನ್ ಫಿಂಚ್, ಡೇವಿಡ್ ಮಲಾನ್, ಇವೊಯಿನ್ ಮಾರ್ಗನ್, ಜೇಮ್ಸ್ ನೀಶಾಮ್.

₹1 ಕೋಟಿ ಮೂಲಬೆಲೆ: ಮನೀಷ್ ಪಾಂಡೆ, ವೃದ್ಧಿಮಾನ್ ಸಾಹ, ವಾನಿಂದು ಹಸರಂಗ, ಡೇವಿಡ್ ಮಿಲ್ಲರ್, ಅಜಿಂಕ್ಯ ರಹಾನೆ, ಡೆವೊನ್ ಕಾನ್‌ವೇ, ಜೇಮ್ಸ್ ಫೌಲ್ಕ್​ನರ್.

ವಿದೇಶಿ ಆಟಗಾರರು

ದೇಶ ಕ್ರಿಕೆಟಿಗರು

ಆಸ್ಟ್ರೇಲಿಯಾ 47

ವೆಸ್ಟ್ ಇಂಡೀಸ್ 34

ದಕ್ಷಿಣ ಆಫ್ರಿಕಾ 33

ಇಂಗ್ಲೆಂಡ್ 24

ನ್ಯೂಜಿಲೆಂಡ್ 24

ಶ್ರೀಲಂಕಾ 23

ಅಫ್ಘಾನಿಸ್ತಾನ 17

ಬಾಂಗ್ಲಾದೇಶ 5

ಐರ್ಲೆಂಡ್ 5

ನಮೀಬಿಯಾ 3

ಸ್ಕಾಟ್ಲೆಂಡ್ 2

ಜಿಂಬಾಬ್ವೆ 1

ನೇಪಾಳ 1

ಅಮೆರಿಕ 1

*ಒಟ್ಟು ₹90 ಕೋಟಿ ಬಜೆಟ್‌ನಲ್ಲಿ ಉಳಿಕೆ: ಚೆನ್ನೈ ಸೂಪರ್‌ಕಿಂಗ್ಸ್: ₹48 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್: ₹47.5 ಕೋಟಿ, ಕೆಕೆಆರ್: ₹48 ಕೋಟಿ, ಲಖನೌ ಸೂಪರ್‌ಜೈಂಟ್ಸ್: ₹59 ಕೋಟಿ, ಮುಂಬೈ ಇಂಡಿಯನ್ಸ್: ₹48 ಕೋಟಿ, ಪಂಜಾಬ್ ಕಿಂಗ್ಸ್: ₹72 ಕೋಟಿ, ರಾಜಸ್ಥಾನ ರಾಯಲ್ಸ್: ₹62 ಕೋಟಿ, ಆರ್‌ಸಿಬಿ: ₹57 ಕೋಟಿ, ಸನ್‌ರೈಸರ್ಸ್‌: ₹68 ಕೋಟಿ, ಅಹಮದಾಬಾದ್: ₹52 ಕೋಟಿ.

ಹರಾಜಿನಲ್ಲಿ 28 ಕನ್ನಡಿಗರು

ಮೂಲಬೆಲೆ ₹2 ಕೋಟಿ: ದೇವದತ್ ಪಡಿಕಲ್, ರಾಬಿನ್ ಉತ್ತಪ್ಪ, ಮೂಲಬೆಲೆ ₹1 ಕೋಟಿ: ಮನೀಷ್ ಪಾಂಡೆ, ಪ್ರಸಿದ್ಧಕೃಷ್ಣ, ಮೂಲಬೆಲೆ ₹50 ಲಕ್ಷ: ಕೆ. ಗೌತಮ್, ಕರುಣ್ ನಾಯರ್, ಮೂಲಬೆಲೆ ₹20 ಲಕ್ಷ: ಅಭಿನವ್ ಮನೋಹರ್, ಕೆಸಿ ಕಾರ್ಯಪ್ಪ, ಶ್ರೇಯಸ್ ಗೋಪಾಲ್, ಜೆ. ಸುಚಿತ್, ರೋಹನ್ ಕದಂ, ಪ್ರವೀಣ್ ದುಬೆ, ಲವ್ನಿತ್ ಸಿಸೋಡಿಯಾ, ವೈಶಾಖ್ ವಿಜಯ್ ಕುಮಾರ್, ಅನೀಶ್ವರ್ ಗೌತಮ್, ಬಿಆರ್ ಶರತ್, ಕೆಎಲ್ ಶ್ರೀಜಿತ್, ಕುಶಾಲ್ ವಾಧ್ವಾನಿ, ಆರ್. ಸಮರ್ಥ್, ಶುಭಾಂಗ್ ಹೆಗ್ಡೆ, ರೋನಿತ್ ಮೋರೆ, ವಿದ್ಯಾಧರ್ ಪಾಟೀಲ್, ವಿ. ಕೌಶಿಕ್, ಎಂ. ವೆಂಕಟೇಶ್, ಅನಿರುದ್ಧ ಜೋಶಿ, ಎಂಬಿ ದರ್ಶನ್, ಮನೋಜ್ ಭಾಂಡಗೆ, ದಿಕ್ಷಾಂಶು ನೇಗಿ.

ವಿಶೇಷ ತಾರೆಯರು

ಟೆಸ್ಟ್ ತಜ್ಞ ಬ್ಯಾಟರ್ ಚೇತೇಶ್ವರ ಪೂಜಾರ ಮತ್ತು 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ನಿಷೇಧ ಶಿಕ್ಷೆ ಮುಗಿಸಿರುವ ವೇಗಿ ಎಸ್. ಶ್ರೀಶಾಂತ್ ತಲಾ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಪಾಲ್ಗೊಳ್ಳಲಿದ್ದಾರೆ. ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಬ್ಯಾಟ್ಸ್‌ಮನ್ ಮನೋಜ್ ತಿವಾರಿ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಕಣದಲ್ಲಿದ್ದಾರೆ.

ಹಿರಿಯ-ಕಿರಿಯ ಆಟಗಾರ

ದಕ್ಷಿಣ ಆಫ್ರಿಕಾದ ಸ್ಪಿನ್ನರ್ 42 ವರ್ಷದ ಇಮ್ರಾನ್ ತಾಹಿರ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಅತ್ಯಂತ ಹಿರಿಯ ಆಟಗಾರ. ಅಫ್ಘಾನಿಸ್ತಾನದ 17 ವರ್ಷದ ನೂರ್ ಅಹ್ಮದ್ ಹರಾಜಿನಲ್ಲಿ ಪಾಲ್ಗೊಳ್ಳುವ ಅತ್ಯಂತ ಕಿರಿಯ ಕ್ರಿಕೆಟಿಗರೆನಿಸಿದ್ದಾರೆ.