ಕ್ರೀಡೆ

IPL-2025: ಐಪಿಎಲ್​ ಪದಾರ್ಪಣೆ ಪಂದ್ಯದಲ್ಲೇ ವಿಘ್ನೇಶ್​ ಪುಥುರ್​ ವಿಖ್ಯಾತಿ!

ಚೆನ್ನೈ: ರಾಜ್ಯ ಕ್ರಿಕೆಟ್​ ತಂಡದ ಪರ ಒಂದೂ ಪಂದ್ಯ ಆಡುವ ಅವಕಾಶ ಪಡೆಯದ ನಡುವೆಯೂ ಐಪಿಎಲ್​ನಲ್ಲಿ ಅವಕಾಶ ಪಡೆದ 24 ವರ್ಷದ ಎಡಗೈ ರಿಸ್ಟ್​ ಸ್ಪಿನ್ನರ್​ ವಿಘ್ನೇಶ್​ ಪುಥುರ್​, ಮುಂಬೈ ಇಂಡಿಯನ್ಸ್​ ಪರ ಮೊದಲ ಪಂದ್ಯದಲ್ಲೇ 3 ವಿಕೆಟ್​ ಕಬಳಿಸುವ ಮೂಲಕ ವಿಖ್ಯಾತಿ ಗಳಿಸಿದ್ದಾರೆ. 156 ರನ್​ ಗುರಿಯನ್ನು ಸುಲಭವಾಗಿ ತಲುಪುವ ನಿರೀಕ್ಷೆಯಲ್ಲಿದ್ದ ಸಿಎಸ್​ಕೆ ಹಾದಿಗೆ ವಿಘ್ನ ತರುವ ಭೀತಿಯನ್ನು ಅವರು ಹುಟ್ಟಿಸಿದ್ದರು. ಅಲ್ಲದೆ ಪಂದ್ಯದ ಬಳಿಕ ದಿಗ್ಗಜ ಎಂಎಸ್​ ಧೋನಿ ಪ್ರಶಂಸಿಸಿದ ಚಿತ್ರ-ವಿಡಿಯೋ ವೈರಲ್​ ಆಗುವುದರೊಂದಿಗೆ ವಿಘ್ನೇಶ್​ ಕ್ರಿಕೆಟ್​ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.

ಕೇರಳದ ಮಲಪು$್ಪರಂನ ಆಟೋ ಚಾಲಕ ಸುನೀಲ್​ ಕುಮಾರ್​ ಮತ್ತು ಗೃಹಿಣಿ ಬಿಂದು ದಂಪತಿಯ ಪುತ್ರನಾಗಿರುವ ವಿಘ್ನೇಶ್​, ಕ್ಯಾಲಿಕಟ್​ ವಿಶ್ವವಿದ್ಯಾಲಯದ ಎಂಎ (ಇಂಗ್ಲಿಷ್​ ಸಾಹಿತ್ಯ) ವಿದ್ಯಾರ್ಥಿಯಾಗಿದ್ದಾರೆ. ಪ್ರಥಮ ದರ್ಜೆ ಪಂದ್ಯವನ್ನು ಆಡಿರದ ವಿಘ್ನೇಶ್​, ಕೇರಳ ಕ್ರಿಕೆಟ್​ ಲೀಗ್​ ಮತ್ತು ತಮಿಳುನಾಡು ಪ್ರೀಮಿಯರ್​ ಲೀಗ್​ನಂಥ ರಾಜ್ಯಮಟ್ಟದ ಟಿ20 ಟೂರ್ನಿಗಳಲ್ಲಿ ಆಡಿದ ಅನುಭವವನ್ನಷ್ಟೇ ಹೊಂದಿದ್ದರು.

ಕಳೆದ ಮೆಗಾ ಹರಾಜಿನಲ್ಲಿ ಮುಂಬೈ ತಂಡ ಮೂಲಬೆಲೆ 30 ಲಕ್ಷ ರೂ.ಗೆ ವಿಘ್ನೇಶ್​ರನ್ನು ಖರೀದಿಸಿದ ಬಳಿಕ ದ. ಆಫ್ರಿಕಾದ ಎಸ್​ಎ20 ಲೀಗ್​ ವೇಳೆ ಎಂಐ ಕೇಪ್​ಟೌನ್​ ನಾಯಕ ಹಾಗೂ ಸ್ಪಿನ್​ ಮಾಂತ್ರಿಕ ರಶೀದ್​ ಖಾನ್​ ಜತೆ ನೆಟ್ಸ್​ನಲ್ಲಿ ಬೌಲಿಂಗ್​ ಮಾಡುವ ಮತ್ತು ಟಿಪ್ಸ್​ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ನೆಟ್ಸ್​ನಲ್ಲಿ ರೋಹಿತ್​, ಸೂರ್ಯಕುಮಾರ್​, ತಿಲಕ್​ ವರ್ಮರಂಥ ಬ್ಯಾಟರ್​ಗಳು ವಿಘ್ನೇಶ್​ ಎಸೆತಗಳನ್ನು ಎದುರಿಸಲು ಕಷ್ಟಪಟ್ಟಿದ್ದರಿಂದ ಮುಂಬೈ ಮೊದಲ ಪಂದ್ಯದಲ್ಲೇ ಆಡಿಸುವ ಸಾಹಸಕ್ಕೆ ಕೈಹಾಕಿ ಐಪಿಎಲ್​ಗೆ ಹೊಸ ಪ್ರತಿಭೆಯೊಂದನ್ನು ಪರಿಚಯಿಸಿದೆ.