ಕ್ರೀಡೆ

ಮುಂಬೈ ವಿರುದ್ಧ ಪಂಜಾಬ್​​ಗೆ ಭರ್ಜರಿ ಗೆಲುವು: ಹೊಸ ಇತಿಹಾಸ ಬರೆದ ಶ್ರೇಯಸ್ ಅಯ್ಯರ್! Shreyas Iyer

Shreyas Iyer : ಪ್ರಸ್ತುತ ಮುಕ್ತಾಯ ಹಂತದಲ್ಲಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ನಿನ್ನೆ (ಮೇ 26) ಜೈಪುರದ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಪಂಜಾಬ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡು ಪ್ಲೇಆಫ್​ನಲ್ಲಿ ಮೊದಲೆರೆಡು ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿತು. ಸೂರ್ಯಕುಮಾರ್ (57 ರನ್​, 39 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (26 ರನ್​, 15 ಎಸೆತ, 2 ಬೌಂಡರಿ, 2 ಸಿಕ್ಸರ್) ಉಪಯುಕ್ತ ಆಟವಾಡಿದರು. ಪಂಜಾಬ್​ ಪರ ಅರ್ಷದೀಪ್​ ಸಿಂಗ್​, ಜಾನ್ಸೆನ್ ಮತ್ತು ವೈಶಾಕ್ ತಲಾ 2 ವಿಕೆಟ್ ಪಡೆದರು.

ನಂತರ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಜಯ ಸಾಧಿಸಿತು. ಜೋಶ್ ಇಂಗ್ಲಿಸ್ (73 ರನ್​, 42 ಎಸೆತ 9 ಬೌಂಡರಿ, 3 ಸಿಕ್ಸರ್) ಮತ್ತು ಪ್ರಿಯಾಂಶ್ ಆರ್ಯ (62 ರನ್​, 35 ಎಸೆತ, 9 ಬೌಂಡರಿ, 2 ಸಿಕ್ಸರ್) ಅವರ ಸ್ಫೋಟಕ ಆಟದ ನೆರವಿನಿಂದ ಭರ್ಜರಿ ಜಯ ದಾಖಲಿಸಿದತು. ಮುಂಬೈ ಬೌಲರ್‌ಗಳಲ್ಲಿ ಮಿಚೆಲ್​ ಸ್ಯಾಂಟ್ನರ್ ಎರಡು ವಿಕೆಟ್ ಪಡೆದರೆ, ಬುಮ್ರಾ ಒಂದು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಖಾತೆಯಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.

ಇತಿಹಾಸ ಸೃಷ್ಟಿಸಿದ ಶ್ರೇಯಸ್

ಐಪಿಎಲ್ ಇತಿಹಾಸದಲ್ಲಿ ಮೂರು ವಿಭಿನ್ನ ತಂಡಗಳನ್ನು ಅರ್ಹತಾ ಸುತ್ತಿಗೆ ಕರೆದೊಯ್ದ ಏಕೈಕ ನಾಯಕ ಶ್ರೇಯಸ್​ ಅಯ್ಯರ್. 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಜೊತೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಶ್ರೇಯಸ್, 2020ರ ಋತುವಿನಲ್ಲಿ ದೆಹಲಿ ತಂಡವನ್ನು ನಾಯಕನಾಗಿ ಎರಡನೇ ಸ್ಥಾನಕ್ಕೆ ಕರೆದೊಯ್ದರು. ಎರಡನೇ ಕ್ವಾಲಿಫೈಯರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ದುರದೃಷ್ಟವಶಾತ್ ಕೊನೆಯ ಹಂತದಲ್ಲಿ ಎಡವಿತು. ಇದಾದ ನಂತರ, ಶ್ರೇಯಸ್ ನೇತೃತ್ವದ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್-2024ರಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ, ಫೈನಲ್‌ನಲ್ಲಿ ಎಸ್‌ಆರ್‌ಎಚ್ ತಂಡವನ್ನು ಸೋಲಿಸಿ ಕೆಕೆಆರ್​ ತನ್ನ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈಗ, ಪಂಜಾಬ್ ಅರ್ಹತಾ ಸುತ್ತಿಗೆ ಪ್ರವೇಶಿಸಿದ್ದು, ಐಪಿಎಲ್​ನಲ್ಲಿ ಮೂರು ವಿಭಿನ್ನ ತಂಡಗಳನ್ನು ಅರ್ಹತಾ ಸುತ್ತಿಗೆ ಕರೆದೊಯ್ದ ಏಕೈಕ ನಾಯಕನೆಂಬ ಇತಿಹಾಸವನ್ನು ಅಯ್ಯರ್​ ಬರೆದಿದ್ದಾರೆ. (ಏಜೆನ್ಸೀಸ್​)