ಕ್ರೀಡೆ

ಕಪ್​ ಗೆಲ್ಲದ ತಂಡದತ್ತ ಹಾರ್ದಿಕ್ ಚಿತ್ತ? ಮುಂಬೈ ಕೈಬಿಡಲು ಸಜ್ಜಾದ ಕ್ಯಾಪ್ಟನ್ ಪಾಂಡ್ಯ! IPL 2025 Auction

ನವದೆಹಲಿ: ಐಪಿಎಲ್​ 18ನೇ ಆವೃತ್ತಿ (IPL 2025) ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಈಗಾಗಲೇ ಹಲವು ವಿಷಯಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿವೆ. ಮುಂಬರುವ​ ಸೀಸನ್​ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದ್ದು, ಐಪಿಎಲ್​ ಮೆಗಾ ಹರಾಜು (IPL Auction 2025) ಪ್ರಕ್ರಿಯೆಯಲ್ಲಿ ಆಯಾ ಫ್ರಾಂಚೈಸಿಗಳ ಕ್ಯಾಪ್ಟನ್​ಗಳು ಸೇರಿದಂತೆ ಸ್ಟಾರ್​ ಆಟಗಾರರು ಈಗಿರುವ ತಮ್ಮ ತಂಡ ಬಿಟ್ಟು ಬೇರೆ ತಂಡಗಳಿಗೆ ಸೇರುತ್ತಾರೆ ಎಂಬ ಸುದ್ದಿಗಳು ಐಪಿಎಲ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಇನ್ನು ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಕ್ಷನ್​ನತ್ತ ಎದುರುನೋಡುತ್ತಿರುವ ಫ್ರಾಂಚೈಸಿಗಳು, ಸ್ಟಾರ್​ ಆಟಗಾರರನ್ನು ನಮ್ಮ ತಂಡಕ್ಕೆ ಕರೆದುಕೊಳ್ಳಲು ದೊಡ್ಡ ಲೆಕ್ಕಾಚಾರಗಳನ್ನೇ ಹಾಕಿಕೊಂಡಿರುವುದು ಇದೀಗ ಕ್ರಿಕೆಟ್ ಪ್ರೇಮಿಗಳಲ್ಲಿ ಕೌತುಕ ಹೆಚ್ಚಿಸಿದೆ.

ಐಪಿಎಲ್ ಹರಾಜು ಪ್ರಕ್ರಿಯೆ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ತಮ್ಮ ನೆಚ್ಚಿನ ಫ್ರಾಂಚೈಸಿ ಹಾಗೂ ಸ್ಟಾರ್​ ಕ್ರಿಕೆಟರ್​ಗಳನ್ನು ಕಳೆದುಕೊಳ್ಳದಂತೆ ಆಯಾ ತಂಡದ ಮ್ಯಾನೇಜ್​ಮೆಂಟ್​ಗೆ ಜಾಲತಾಣಗಳ ಮೂಲಕ ಮನವಿ ಮಾಡಿರುವ ಫ್ಯಾನ್ಸ್​, ಒಂದಷ್ಟು ಫ್ರಾಂಚೈಸಿಗಳಿಂದ ತಮ್ಮ ತಂಡಕ್ಕೆ ಅತ್ಯುತ್ತಮ ಹಾಗೂ ಜನಪ್ರಿಯ ಆಟಗಾರನನ್ನು ಬಿಡ್​ ಮಾಡಿ, ಕರೆದುಕೊಳ್ಳಿ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಸದ್ಯ ಈ ಸಾಲಿನಲ್ಲಿ ಆರ್​ಸಿಬಿ ಅಭಿಮಾನಿಗಳು ಮುಂದಿದ್ದು, ಆಕ್ಷನ್​ನಲ್ಲಿ ಲಖನೌ ಸೂಪರ್ ಜೈಂಟ್ಸ್​ ತಂಡದಿಂದ ಕ್ಯಾಪ್ಟನ್, ಕನ್ನಡಿಗ ಕೆ.ಎಲ್. ರಾಹುಲ್​ರನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಡೆಗೆ ಖರೀದಿ ಮಾಡಿಕೊಳ್ಳಿ. ಇದರಿಂದ ಆರ್​ಸಿಬಿಗೆ ಆನೆಬಲ ಬರಲಿದೆ ಎಂದು ಫ್ಯಾನ್ಸ್​ ಫ್ರಾಂಚೈಸಿಗೆ ಒತ್ತಾಯಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ. ಆದ್ರೆ, ಈ ಮಧ್ಯೆ ಪ್ರಸ್ತುತ ಮುಂಬೈ ಇಂಡಿಯನ್ಸ್ ನಾಯಕನಾಗಿರುವ ಹಾರ್ದಿಕ್​ ಪಾಂಡ್ಯ ಕೂಡ ಬೆಂಗಳೂರು ತಂಡ ಸೇರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಇದೀಗ ಕ್ರಿಕೆಟ್ ಪ್ರಿಯರನ್ನು ಭಾರೀ ಅಚ್ಚರಿಗೆ ದೂಡಿದೆ.

MIಗೆ ಕ್ಯಾಪ್ಟನ್ಸಿಗೆ ಗುಡ್​ಬೈ?

ಕಳೆದ ಆವೃತ್ತಿಯಲ್ಲಿ ಮಾಜಿ ನಾಯಕ ರೋಹಿತ್ ಶರ್ಮರಿಂದ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್ಸಿಯನ್ನು ಕಸಿದ ಹಾರ್ದಿಕ್​, ​ದಿಢೀರ್​ ಎಂಬಂತೆ ಎಂಐ ತಂಡದ ನಾಯಕನಾಗಿ ಕಣಕ್ಕಿಳಿದರು. ಇದು ಅಭಿಮಾನಿಗಳಿಗೆ ಕಿಂಚಿತ್ತು ಹಿಡಿಸಲಿಲ್ಲ. ಹೀಗಾಗಿಯೇ ಪ್ರತಿ ಪಂದ್ಯದ ವೇಳೆ ಹಾರ್ದಿಕ್​ ಮೈದಾನಕ್ಕೆ ಬರುತ್ತಿದ್ದಂತೆ ವ್ಯಾಪಕವಾಗಿ ಟೀಕಿಸಿ, ಛೀಮಾರಿ ಹಾಕುತ್ತಿದ್ದರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪಾಂಡ್ಯ, ಎಲ್ಲಿಯೂ ನೆಗೆಟಿವ್ ಆಗದೆ ತಮ್ಮ ಆಟವನ್ನು ಆಡಿದ್ದೇ ಆದರೂ ತಂಡವನ್ನು ಅತ್ಯಂತ ಕಳಪೆ ಪ್ರದರ್ಶನದ ಮೂಲಕ ತಳಮಟ್ಟಕ್ಕೆ ತಂದಿಟ್ಟರು. ಹಾರ್ದಿಕ್ ನಾಯಕತ್ವದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು ಕಂಡ ಎಂಐ, ಬಹಳ ವೇಗವಾಗಿ ಲೀಗ್​ನಿಂದ ಹೊರಗುಳಿಯಿತು.

ನಿರ್ಗಮನದ ಮುನ್ಸೂಚನೆ?

ಐಪಿಎಲ್ 2025ಕ್ಕೆ ಹಾರ್ದಿಕ್​ರನ್ನು ಮುಂಬೈ ಫ್ರಾಂಚೈಸಿ ಉಳಿಸಿಕೊಳ್ಳದಿರಬಹುದು ಎಂಬ ಗುಸುಗುಸು, ಪಿಸುಮಾತುಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಸದ್ಯ ಈ ಎಲ್ಲಾ ಬೆಳವಣಿಗೆಯ ಮಧ್ಯೆ ಪಾಂಡ್ಯ ತಮ್ಮ ಕ್ಯಾಪ್ಟನ್ಸಿ ತೊರೆದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಲಿದ್ದಾರೆ ಎಂಬ ವದಂತಿಗಳು ಸದ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹಾರ್ದಿಕ್​ ಪಾಂಡ್ಯ ಆರ್​ಸಿಬಿಗೆ ಬಂದ್ರೆ ಖಂಡಿತ ಅತ್ಯುತ್ತಮ ಆಲ್​ರೌಂಡ್​ ಪ್ರದರ್ಶನ ನೋಡಬಹುದು ಎಂದು ಕ್ರಿಕೆಟ್ ಪ್ರೇಮಿಗಳು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಒಂದೆಡೆ ಮುಂಬೈ ಪರ ಹಾರ್ದಿಕ್​ ಉಳಿಯಲಿ ಎಂದು ಕೆಲವರು ಹೇಳಿದರೆ, ಮತ್ತೊಂದೆಡೆ ಪಾಂಡ್ಯ ಬೆಂಗಳೂರು ಪಾಲಾದರೆ ಆಟ ಚೆನ್ನಾಗಿರಲಿದೆ ಎಂದು ಅಭಿಪ್ರಾಯಿಸಿದ್ದಾರೆ. ಅಸಲಿಗೆ ಇದೆಷ್ಟು ನಿಜ? ಎಷ್ಟು ಸುಳ್ಳು? ಎಂಬುದನ್ನು ಹುಡುಕಿದಾಗ ಸದ್ಯಕ್ಕೆ ಇದು ವದಂತಿಯಾಗಿಯೇ ಉಳಿದಿದೆ ಎಂದು ಮೂಲಗಳು ತಿಳಿಸಿರುವುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).