ನವದೆಹಲಿ: ಐಪಿಎಲ್ 18ನೇ ಆವೃತ್ತಿ (IPL 2025) ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಈಗಾಗಲೇ ಹಲವು ವಿಷಯಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಲು ಆರಂಭಿಸಿವೆ. ಮುಂಬರುವ ಸೀಸನ್ನಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ನಿರೀಕ್ಷೆಗಳೇ ಸದ್ಯ ಜೋರಾಗಿದ್ದು, ಐಪಿಎಲ್ ಮೆಗಾ ಹರಾಜು (IPL Auction 2025) ಪ್ರಕ್ರಿಯೆಯಲ್ಲಿ ಆಯಾ ಫ್ರಾಂಚೈಸಿಗಳ ಕ್ಯಾಪ್ಟನ್ಗಳು ಸೇರಿದಂತೆ ಸ್ಟಾರ್ ಆಟಗಾರರು ಈಗಿರುವ ತಮ್ಮ ತಂಡ ಬಿಟ್ಟು ಬೇರೆ ತಂಡಗಳಿಗೆ ಸೇರುತ್ತಾರೆ ಎಂಬ ಸುದ್ದಿಗಳು ಐಪಿಎಲ್ ಅಭಿಮಾನಿಗಳಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ. ಇನ್ನು ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಆಕ್ಷನ್ನತ್ತ ಎದುರುನೋಡುತ್ತಿರುವ ಒಂದು ಬಾರಿಯೂ ಐಪಿಎಲ್ನಲ್ಲಿ ಕಪ್ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ, ಇದೀಗ ಯಾರನ್ನು ಉಳಿಸಿಕೊಳ್ಳೋದು? ಯಾರನ್ನು ಕಳೆದುಕೊಳ್ಳೋದು ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ.
ಇದನ್ನೂ ಓದಿ: ಕೃಷಿಹೊಂಡಕ್ಕೆ ಬಿದ್ದು ಯುವಕ ಸಾವು
2025ರ ಐಪಿಎಲ್ ಆವೃತ್ತಿಗೂ ಮುನ್ನ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಯಾರನ್ನು ರಿಲೀಸ್ ಮಾಡಬೇಕು? ಯಾವ ತಂಡದ ಸ್ಪೆಷಲಿಸ್ಟ್ ಆಟಗಾರನನ್ನು ತಮ್ಮ ತಂಡಕ್ಕೆ ಕರೆದುಕೊಳ್ಳಬೇಕು ಎಂಬ ಲೆಕ್ಕಾಚಾರಗಳನ್ನು ಬಿರುಸಿನಿಂದ ನಡೆಸುತ್ತಿರುವ ಫ್ರಾಂಚೈಸಿ, ಆಸ್ಟ್ರೇಲಿಯಾದ ಮೂವರು ಸ್ಟಾರ್ ಆಟಗಾರರನ್ನು ಎದುರುನೋಡುತ್ತಿದೆ. ಪ್ರಸ್ತುತ ಆರ್ಸಿಬಿಯಲ್ಲಿರುವ ಕ್ಯಾಮಾರನ್ ಗ್ರೀನ್, ಗ್ಲೇನ್ ಮ್ಯಾಕ್ಸ್ವಲ್ ಕಳೆದ ಸೀಸನ್ನಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೆಲವು ಪಂದ್ಯಗಳಲ್ಲಿ ಗ್ರೀನ್ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿದರೆ, ಮ್ಯಾಕ್ಸ್ವೆಲ್ ಮಾತ್ರ ಅತ್ಯಂತ ಕಳಪೆ ಆಟವನ್ನು ತೋರಿದರು. ಸದ್ಯ ಇವರಿಬ್ಬರ ಪೈಕಿ ಯಾರನ್ನು ಉಳಿಸಿಕೊಳ್ಳಬೇಕು ಎಂಬುದೇ ಸದ್ಯ ಆರ್ಸಿಬಿಗೆ ದೊಡ್ಡ ಸವಾಲಾಗಿದೆ.
ಪ್ರಸ್ತುತ ಕೊಲ್ಕತ ನೈಟ್ ರೈಡರ್ಸ್ ಪರ ಆಡುತ್ತಿರುವ ಆಸ್ಟ್ರೇಲಿಯಾ ತಂಡ ಬಲಿಷ್ಠ ವೇಗಿ ಮಿಚೆಲ್ ಸ್ಟಾರ್ಕ್, ಈ ಹಿಂದೆ ಆರ್ಸಿಬಿ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಇಂದಿಗೂ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಂಡು ಬಂದಿರುವ ಸ್ಟಾರ್ಕ್ಗೆ ಬೇಡಿಕೆ ಹೆಚ್ಚಿದೆ. ಸದ್ಯ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಿಚೆಲ್ರನ್ನು ಕೈಬಿಡಲು ಚಿಂತಿಸಿರುವ ಕೆಕೆಆರ್, ಸ್ಟಾರ್ಕ್ರನ್ನು ಬಿಡುಗಡೆ ಮಾಡುವುದು ಖಚಿತ ಎಂದೇ ಹೇಳಲಾಗುತ್ತಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಎದುರುನೋಡುತ್ತಿರುವ ಆರ್ಸಿಬಿ, ಸ್ಟಾರ್ಕ್ರನ್ನು ಮತ್ತೊಮ್ಮೆ ತಮ್ಮ ಫ್ರಾಂಚೈಸಿಗೆ ಕರೆದುಕೊಳ್ಳುವ ಮುಖೇನ, ಬೌಲಿಂಗ್ ಯೂನಿಟ್ ಅನ್ನು ಮತ್ತಷ್ಟು ಬಲಪಡಿಸುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).