ಕ್ರೀಡೆ

ವಿರಾಟ್​ ಕೊಹ್ಲಿ ಮತ್ತೆ ನಾಯಕನಾದ್ರೆ RCBಗೆ ಈ ಆಟಗಾರನ ಎಂಟ್ರಿ ಫಿಕ್ಸ್​! ಮಾಜಿ ಕ್ರಿಕೆಟಿಗನ ಅಚ್ಚರಿ ಹೇಳಿಕೆ | Virat Kohli

Virat Kohli : ಐಪಿಎಲ್​-2025 ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ರಾಯಲ್​ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ ಹರಾಜಿಗೂ ಮುನ್ನ ಕೇವಲ ಮೂರು ಆಟಗಾರರನ್ನು ಉಳಿಸಿಕೊಂಡಿದೆ. ಅದರಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ( 21 ಕೋಟಿ ರೂ. ) ಅವರನ್ನು ಟಾಪ್ ರೀಟೆನ್ಶನ್ ಆಗಿ ತೆಗೆದುಕೊಂಡಿದೆ. ಉಳಿದಂತೆ ಬ್ಯಾಟರ್​ ರಜತ್ ಪಾಟಿದಾರ್ ( 11 ಕೋಟಿ ರೂ. ) ಮತ್ತು ವೇಗಿ ಯಶ್ ದಯಾಳ್ ( 5 ಕೋಟಿ ರೂ. ) ಅವರನ್ನೂ ಉಳಿಸಿಕೊಳ್ಳಲಾಗಿದೆ.

ಇನ್ನು ಸ್ಟಾರ್ ಆಟಗಾರರಾದ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಹರಾಜಿನಿಂದ ಕೈಬಿಡಲಾಗಿದೆ. ಪರ್ಸ್​ನಲ್ಲಿ ಉಳಿದಿರುವ 83 ಕೋಟಿ ರೂ. ಹಣದೊಂದಿಗೆ ಉತ್ತಮ ಆಟಗಾರರನ್ನು ಖರೀದಿಸಲು ಮುಂಬುರುವ ಮೆಗಾ ಹರಾಜಿಗಾಗಿ ಆರ್‌ಸಿಬಿ ಸಿದ್ಧವಾಗಿದೆ.

ಕೆಲ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಅವರು ಸ್ಟಾರ್ ಸ್ಪೋರ್ಟ್ಸ್ ಶೋ 'ಗೇಮ್ ಪ್ಲಾನ್'ನಲ್ಲಿ ಬೆಂಗಳೂರು ಹರಾಜಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೊಹ್ಲಿ ಏನಾದರೂ ಆರ್‌ಸಿಬಿ ನಾಯಕತ್ವ ವಹಿಸಿಕೊಂಡರೆ, ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಾಹಲ್​ ಅವರನ್ನು ತಮ್ಮ ತಂಡಕ್ಕೆ ತೆಗೆದುಕೊಳ್ಳಲು ಖಂಡಿತ ಪ್ರಯತ್ನಿಸುತ್ತಾರೆ. ಆದರೆ, ಆರ್‌ಸಿಬಿ ತಂಡ ಚಾಹಲ್‌ ಅವರನ್ನು ಪಡೆಯುವುದು ತುಂಬಾನೇ ಕಷ್ಟವೆಂದು ನಾನು ಭಾವಿಸುತ್ತೇನೆ. ಏಕೆಂದರೆ, ರಾಜಸ್ಥಾನ ರಾಯಲ್ಸ್ ತಂಡ ಆರ್. ಅಶ್ವಿನ್ ಮತ್ತು ಚಾಹಲ್ ಅವರನ್ನು ಜೊತೆಯಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ಮಂಜ್ರೇಕರ್​ ಹೇಳಿದರು.

ಒಂದು ವೇಳೆ ವಿರಾಟ್ ಕೊಹ್ಲಿ ನಾಯಕನಾದರೆ, ಅವರ ಹಳೆಯ ಟ್ರಂಪ್ ಕಾರ್ಡ್ ಚಾಹಲ್ ಅವರನ್ನು ತಂಡಕ್ಕೆ ಮರಳಿ ಪಡೆಯಲು ಪ್ರಯತ್ನಿಸುತ್ತಾರೆ. ಅಲ್ಲದೆ, ಕೊಹ್ಲಿ ಆರ್‌ಸಿಬಿ ನಾಯಕನಾಗಿ ಬಂದರೆ ತಂಡದಲ್ಲಿ ಹಲವು ಬದಲಾವಣೆಗಳಾಗಲಿವೆ ಎಂದು ಸಂಜಯ್ ಹೇಳಿದ್ದಾರೆ.

ಅಂದಹಾಗೆ ಚಾಹಲ್, ಐಪಿಎಲ್ 2024ರಲ್ಲಿ ರಾಜಸ್ಥಾನ ರಾಯಲ್ಸ್ ಪರ 9.41 ಎಕಾನಮಿ ದರದಲ್ಲಿ 15 ಇನ್ನಿಂಗ್ಸ್‌ಗಳಲ್ಲಿ 18 ವಿಕೆಟ್‌ಗಳನ್ನು ಪಡೆದರು. ಇದುವರೆಗೂ ಒಟ್ಟು 160 ಐಪಿಎಲ್ ಪಂದ್ಯಗಳನ್ನಾಡಿರುವ ಚಾಹಲ್​, 205 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಆರ್​ಸಿಬಿ ಪರ 7.58 ರ ಎಕನಾಮಿಯಲ್ಲಿ 112 ಇನ್ನಿಂಗ್ಸ್‌ಗಳಲ್ಲಿ 139 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಲೆಗ್ ಸ್ಪಿನ್ನರ್ ಈಗಲೂ ಆರ್​ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಚಾಹಲ್ ಈ ಹಿಂದೆ ಹಲವು ಪಂದ್ಯಗಳಲ್ಲಿ ಆರ್‌ಸಿಬಿಗೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಐಪಿಎಲ್ 2025ರ ಹರಾಜಿನಲ್ಲಿ ಚಾಹಲ್ ಭಾರಿ ಬೆಲೆ ಪಡೆಯುವ ಸಾಧ್ಯತೆ ಇದೆ. ಅವರನ್ನು ಯಾವ ತಂಡ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)