ಕ್ರೀಡೆ

IPL 2024ರ ಬಳಿಕ ಮುಂಬೈ ಇಂಡಿಯನ್ಸ್‌ಗೆ ರೋಹಿತ್ ವಿದಾಯ! ಎಂಐ ಜೆರ್ಸಿಯಲ್ಲಿ ಇದೇ ಲಾಸ್ಟ್​​?

ಮುಂಬೈ: ಐಪಿಎಲ್​ 2024ರ ಆವೃತ್ತಿಗೆ ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಆಯಾ ತಂಡದ ಫ್ರಾಂಚೈಸಿಗಳು ಆಟಗಾರರನ್ನು ಆಯ್ದುಕೊಳ್ಳುವ ಪ್ರಕ್ರಿಯೆಯನ್ನು ಕೂಡ ಯಶಸ್ವಿಯಾಗಿ ಅಂತ್ಯಗೊಳಿಸಿದೆ. ಮುಂಬರುವ ದಿನಗಳನ್ನು ಎದುರುನೋಡುತ್ತಿರುವ ತಂಡಗಳು, ಈ ಬಾರಿಯ ಐಪಿಎಲ್​ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಳ್ಳಬೇಕು ಎಂಬ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. ಆದ್ರೆ, ಎಲ್ಲಾ ಟೀಮ್​ನ ಅಭಿಮಾನಿಗಳಿಗೆ ತಮ್ಮ ನಾಯಕರನ್ನು ನೋಡುವ ತವಕವಿದ್ದರೆ, ಇತ್ತ ಮುಂಬೈ ಇಂಡಿಯನ್ಸ್​ ಫ್ಯಾನ್ಸ್​ಗಳಿಗೆ ಮಾತ್ರ ಬೇಸರ ತಪ್ಪಿಲ್ಲ ಎಂಬಂತಾಗಿದೆ.

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಗುಜರಾತ್ ಟೈಟನ್ಸ್​ ನಾಯಕತ್ವವನ್ನು ತ್ಯಜಿಸಿ, ತಂಡದಿಂದ ಹೊರಬಂದ ಹಾರ್ದಿಕ್ ಪಾಂಡ್ಯ ದುಬಾರಿ ಮೊತ್ತದ ಬೇಡಿಕೆಯಿಟ್ಟು ಮುಂಬೈ ಇಂಡಿಯನ್ಸ್ ಟೀಮ್​ನ ಕ್ಯಾಪ್ಟನ್ ಆಗಿ ತಂಡಕ್ಕೆ ಮರಳಿದರು. ಈ ಸಂಗತಿ ಅಪಾರ ಸಂಖ್ಯೆಯ ರೋಹಿತ್ ಅಭಿಮಾನಿಗಳನ್ನು ಒಂದು ಕ್ಷಣ ಕುಸಿಯುವಂತೆ ಮಾಡಿತು.

ಐಪಿಎಲ್​ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ರೋಹಿತ್ ಶರ್ಮಾ 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿಲ್ಲ ಎಂಬ ಸುದ್ದಿ ಕೇಳಿದ ಅಭಿಮಾನಿಗಳು ಭಾರೀ ಆಘಾತಕ್ಕೆ ಒಳಗಾಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿತ್​ಗೆ ಬೆಂಬಲಿಸಿದ ಫ್ಯಾನ್ಸ್​, ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್​ ಅವರನ್ನು ವ್ಯಾಪಕವಾಗಿ ಟೀಕಿಸಿದ್ದರು.

ನಾಯಕತ್ವ ಇಲ್ಲ, ಇದೇ ಕೊನೆಯ ಐಪಿಎಲ್​? ತಮ್ಮ ತಂಡಕ್ಕೆ 6 ಬಾರಿ ಐಪಿಎಲ್​ ಟ್ರೋಫಿ ತಂದುಕೊಟ್ಟ ಸ್ಟಾರ್​ ಕ್ಯಾಪ್ಟನ್​ ರೋಹಿತ್ ಶರ್ಮಾ, ಎಂಐ ತಂಡದದೊಂದಿಗೆ ಇದೇ ಕೊನೆಯ ಬಾರಿಗೆ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಇತ್ತೀಚಿಗಿನ ಹಾರ್ದಿಕ್ ಪಾಂಡ್ಯ ನಾಯಕತ್ವ. ಗುಜರಾತ್​ ಟೈಟನ್ಸ್​ ಬಿಟ್ಟು ಮುಂಬೈಗೆ ಎಂಟ್ರಿ ಕೊಟ್ಟ ಪಾಂಡ್ಯ ಅವರನ್ನು ತಂಡದ ನೂತನ ಕ್ಯಾಪ್ಟನ್​ ಆಗಿ ಪ್ರಾಂಚೈಸಿ ಅಧಿಕೃತವಾಗಿ ಘೋಷಣೆ ಮಾಡಿತು.

ಈ ಮೂಲಕ ರೋಹಿತ್​ ಅವರ ಐತಿಹಾಸಕ ಕ್ಯಾಪ್ಟನ್ಸಿಗೆ ತೆರೆ ಎಳೆದಂತಾಗಿದೆ. ಆದ್ರೆ, ಈ ಬಗ್ಗೆ ಫ್ರಾಂಚೈಸಿಗಳು ಪ್ರಾಕ್ಟಿಸ್​ ಸೆಷನ್​ ಸೇರಿದಂತೆ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದೆ. ಆದ್ರೆ, ನಾಯಕತ್ವದಲ್ಲಿ ಉಂಟಾದ ಬದಲಾವಣೆಯು ರೋಹಿತ್​ಗೆ ಭಾರಿ ನೋವನ್ನು ತಂದೊಡ್ಡಿದ್ದು, ಹಾರ್ದಿಕ್​ ಅವರ ನೇತೃತ್ವದಲ್ಲಿ ಆಡುವುದು ಅವರಿಗೆ ಕಷ್ಟಕರವಾಗಬಹುದು ಎಂದು ಹೇಳಲಾಗಿದೆ.

ಈ ಎಲ್ಲಾ ಕಾರಣಗಳು ಮುಂಬೈ ಇಂಡಿಯನ್ಸ್​ ತಂಡದಿಂದ ರೋಹಿತ್ ಶರ್ಮಾ ಹೊರಗುಳಿಯಲು ಪ್ರಮುಖ ಕಾರಣ ಎಂದು ಹೇಳಲಾಗಿದೆ. ಆದ್ರೆ, ಈ ಬಗ್ಗೆ ಅಧಿಕತವಾಗಿ ರೋಹಿತ್ ಏನು ಹೇಳಲಿದ್ದಾರೆ? ಎಂಐ ತಂಡದಲ್ಲಿ ಇದೇ ಅವರ ಕೊನೆಯ ಸೀಸನ್ ಆಗಲಿದ್ಯಾ​? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).