ಬೆಂಗಳೂರು: ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಹತ್ವದ ಲೀಗ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಇದನ್ನೂ ಓದಿ: ಪ್ಲೇ ಆಫ್ಗೇರಿದ ಆರ್‌ಸಿಬಿ: ಸಿಎಸ್ಕೆ ಸೋಲುತ್ತಿದ್ದಂತೆ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಧೋನಿ ಶಿಷ್ಯ ಅಂಬಟಿ ರಾಯುಡು!
ಯಾವುದೇ ಫೈನಲ್ ಪಂದ್ಯಕ್ಕೂ ಕಡಿಮೆ ಇಲ್ಲದಂತೆ ನಡೆದ ಈ ಪಂದ್ಯದ ಫಲಿತಾಂಶದ ಬಳಿಕ ಆರ್‌ಸಿಬಿ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ.
ಆರ್‌ಸಿಬಿ ಗೆಲ್ಲುತ್ತಿದ್ದಂತೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಸಂಭ್ರಮಿಸಿದರು. ಕೆಲವೆಡೆ ಪಟಾಕಿಗಳ ಸಂಭ್ರಮ ಮನೆ ಮಾಡಿದರೆ, ಮತ್ತೆ ಕೆಲವೆಡೆ ಕೇಕ್ ಕಟ್ಟಿಂಗ್ ಮೂಲಕ ಆರ್‌ಸಿಬಿ ಅಭಿಮಾನಿಗಳು ಸಂತಸ ಹಂಚಿಕೊಂಡರು.
ಪಂದ್ಯ ಆರಂಭಕ್ಕೂ ಚಿನ್ನಸ್ವಾಮಿ ಸ್ಟೇಡಿಯಂಗೆ ಹೊರಟ ತಂಡದ ಬಸ್‌ನ ಹಿಂದೆ ಹಲವು ಕಿಲೋಮೀಟರ್‌ಗಳವರೆಗೆ ಅಭಿಮಾನಿಗಳ ಗುಂಪು ಇತ್ತು. ಬಿಗಿ ಭದ್ರತೆಯೊಂದಿಗೆ ಎರಡು ಬಸ್ಗಳಲ್ಲಿ ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಕಂಡ ಅಭಿಮಾನಿಯೊಬ್ಬರು ಬಸ್ಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಪೊಲೀಸರು ಯುವಕನ್ನು ಎಬ್ಬಿಸಿ ಬಸ್ಗೆ ದಾರಿ ಮಾಡಿಕೊಟ್ಟರು. ಆರ್‌ಸಿಬಿ ಫ್ಯಾನ್ಸ್ಗಳ ಅಭಿಮಾನ ಕಂಡು ವಿದೇಶಿ ಆಟಗಾರರು ದಂಗಾಗಿದ್ದಾರೆ ಎನ್ನಲಾಗಿದೆ.
ರೋಚಕ ಪಂದ್ಯ ಮುಗಿದ ನಂತರವೂ ಚಿನ್ನಸ್ವಾಮಿ ಸ್ಟೇಡಿಯ್ನಿಂದ ಹೊರಟ ತಂಡದ ಬಸ್‌ನ ಹಿಂದೆ ಹಲವು ಕಿಲೋಮೀಟರ್‌ಗಳವರೆಗೆ ಅಭಿಮಾನಿಗಳ ಗುಂಪು ಇತ್ತು. ಜನರು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೋಡಲು ಮಧ್ಯರಾತ್ರಿ 1:30 ವರೆಗೆ ಕಾದುಕುಳಿತಿದ್ದರು. ಆರ್‌ಸಿಬಿ ತನ್ನ ಎಕ್ಸ್ (ಹಿಂದೆ ಟ್ವಿಟ್ಟರ್) ಖಾತೆಯಲ್ಲಿ ಬಸ್‌ನ ಒಳಗಡೆಯಿಂದ ಮಾಡಿದ ವಿಡಿಯೋವನ್ನು ಹಂಚಿಕೊಂಡಿದೆ. ಬೀದಿಯಲ್ಲಿ ನೂರಾರು ಜನರು ತಮ್ಮದೇ ಆದ ರೀತಿಯಲ್ಲಿ ವಿಜಯವನ್ನು ಆಚರಿಸುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ವಿವಿಧ ನಗರಗಳಲ್ಲಿ ಸಂಭ್ರಮಾಚರಣೆ ಜೋರಾಗಿತ್ತು.