ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ 27 ರನ್ ಅಂತರದಿಂದ ಗೆಲುವು ದಾಖಲಿಸಿತು. ಈ ಮೂಲಕ 4ನೇ ತಂಡವಾಗಿ ಪ್ಲೇ ಆಫ್ಗೆ ಅಧಿಕೃತ ಎಂಟ್ರಿ ಕೊಟ್ಟಿದೆ.
ಪ್ಲೇ ಆಫ್ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್ಕೆ ವಿರುದ್ಧ 27 ರನ್ ಗಳ ಗೆಲುವು ಸಾಧಿಸುವ ಮೂಲಕ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್ ಬಾರಿಸುತ್ತಿದ್ದರೂ ಆರ್‌ಸಿಬಿ ಪ್ಲೇ ಆಫ್ನಿಂದ ಹೊರ ಬೀಳುತ್ತಿತ್ತು.
‘ಟಾಸ್ ಗೆದ್ದ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು ನಿಗದಿತ 20 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 218 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಆರ್‌ಸಿಬಿ ನೀಡಿದ 219 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರಂಭದಿಂದಲೇ ಬೆಂಗಳೂರು ತಂಡದ ಬೌಲಿಂಗ್ ಎದುರು ತೆಣಕಾಡಲು ಆರಂಭಿಸಿತು. ಇದರ ಪರಿಣಾಮವಾಗಿ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಚೆನ್ನೈ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ಔಟ್ ಆಗುವ ಮೂಲಕ ಆರಂಭದಲ್ಲಿಯೇ ಆಘಾತಕ್ಕೆ ಎದುರಾಯಿತು.