ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಯಣ ಲೀಗ್ ಹಂತದಲ್ಲೇ ಮುಕ್ತಾಯಗೊಂಡಿದೆ. ನಿನ್ನೆ ನಡೆದ ಕೆಕೆಆರ್ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್ಸಿಬಿ ಒಂದೇ ಒಂದು ರನ್ಗಳಿಂದ ರೋಚಕ ಸೋಲು ಅನುಭವಿಸಿತ್ತು. ಇದರೊಂದಿಗೆ ಆರ್ಸಿಬಿ ಕಪ್ ಗೆಲ್ಲುವ ಕನಸು ಮತ್ತೊಮ್ಮೆ ಕನಸಾಗೇ ಉಳಿದಿದೆ.
ಇದೀಗ ಲೀಗ್ ಹಂತದಲ್ಲೇ ಹೊರಬಿದ್ದ ಆಘಾತದಲ್ಲಿದ್ದ ಆರ್ಸಿಬಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಒಂದು ರನ್ ಸೋಲಿನ ನೋವಿನಲ್ಲಿರುವ ವಿರಾಟ್ ಕೊಹ್ಲಿಗೆ ಮತ್ತೊಂದು ಅಘಾತ ಎದುರಾಗಿದೆ. ಔಟ್ ಆದ ತೀರ್ಪಿಗೆ ಅಂಪೈರ್ ಜೊತೆ ವಾಗ್ವಾದ ನಡೆಸಿದ ಕೊಹ್ಲಿಗೆ ಪಂದ್ಯದ ಶೇ. 50ರಷ್ಟು ಮೊತ್ತ ದಂಡ ವಿಧಿಸಿದೆ.
ವಿರಾಟ್ ಕೊಹ್ಲಿ ಐಪಿಎಲ್ ನಿಯಮ ಆರ್ಟಿಕಲ್ 2.8 ರ ಅಡಿಯಲ್ಲಿ ಲೆವೆಲ್ 1ನ್ನು ಉಲ್ಲಂಘಿಸಿದ್ದಾರೆ. ವಿರಾಟ್ ತಮ್ಮ ಅಪರಾಧವನ್ನು ಮ್ಯಾಚ್ ರೆಫ್ರಿ ಬಳಿ ಒಪ್ಪಿಕೊಂಡಿದ್ದಾರೆ. ಐಪಿಎಲ್ ನಿಯಮದ ಹಂತ 1 ಉಲ್ಲಂಘಿಸಿದ್ದಕ್ಕಾಗಿ, ಇದೀಗ ಕೊಹ್ಲಿ ಪಂದ್ಯದ ಶೇಕಡಾ 50 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಲು ಸೂಚಿಸಿದೆ. ಹಾಗೂ ಪಂದ್ಯದ ರೆಫ್ರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿದೆ ಎಂದು ಎಂದು ಐಪಿಎಲ್ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ಗೂ ಬಿಸಿಸಿಐ ದಂಡ ವಿಧಿಸಿದೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಔಟ್ ಆದ ಬಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಹಲವು ಹಿರಿಯ ಕ್ರಿಕೆಟಿಗರು ಇದರ ಬಗ್ಗೆ ಕಾಮೆಂಟ್ ಮಾಡಿದ್ದರು.
ಏನಿದು ಘಟನೆ?:
ವೇಗದ ಬೌಲರ್ ಹರ್ಷಿತ್ ರಾಣಾ ಎಸೆದ ಸ್ಲೋ ಫುಲ್ ಟಾಸ್ ಎಸೆತದಲ್ಲಿ ಬೌಲರ್‌ಗೆ ಕ್ಯಾಚಿತ್ತ ವಿರಾಟ್ ಕೊಹ್ಲಿ ತಮ್ಮ ವಿಕೆಟ್ ಕೈಚೆಲ್ಲಿದ್ದರು. ಆದರೆ, ಫುಲ್ ಟಾಸ್ ಸೊಂಟದ ಮೇಲಿದೆ ಇದು ನೋ-ಬಾಲ್ ಔಟ್ ಅಲ್ಲ ಎಂಬುದು ವಿರಾಟ್ ಕೊಹ್ಲಿ ವಾದವಾಗಿತ್ತು. 3ನೇ ಅಂಪೈರ್ ಹಾಕ್-ಐನಲ್ಲಿ ವೀಕ್ಷಿಸಿದಾಗ ಕೊಹ್ಲಿ ಕ್ರೀಸ್ ಬಿಟ್ಟು ಆಚೆಯಿದ್ದರು. ಜೊತೆಗೆ ಚೆಂಡು ವಿಕೆಟ್‌ಗೆ ಬಡಿಯುವ ನೇರದಲ್ಲಿದ್ದ ಕಾರಣಕ್ಕೆ ಆನ್‌ಫೀಲ್ಡ್ ಅಂಪೈರ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದರು. ಇದು ಕೊಹ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಆನ್ ಫೀಲ್ಡ್ ಅಂಪೈರ್‌ಗಳ ಜೊತೆಗೆ ಮಾತಿನ ಚಕಮಕಿ ನಡೆಸಿ ಪೆವಿಲಿಯನ್ ಕಡೆಗೆ ಸೇರಿದ್ದರು.