ನವದೆಹಲಿ: ಇದೇ ಮೊದಲ ಬಾರಿಗೆ ದೂರದ ದುಬೈ ನಗರ ಐಪಿಎಲ್ ಹರಾಜಿಗೆ ವೇದಿಕೆಯಾಗಿದೆ. 17ನೇ ಆವೃತ್ತಿಗಾಗಿ ನಡೆಯುತ್ತಿರುವ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬೌರಲ್ ಮಿಚೆಲ್ ಸ್ಟಾರ್ಕ್ ದಾಖಲೆಯ ಮೊತ್ತಕ್ಕೆ ಸೇಲಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಹೊಸ ಇತಿಹಾಸವನ್ನು ಬರೆದಿದ್ದಾರೆ.
ಮಿಚೆಲ್ ಸ್ಟಾರ್ಕ್ಗಾಗಿ ಕೊಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಗುಜರಾತ್ ಟೈಟಾನ್ಸ್ ನಡುವೆ ಹರಾಜಿನಲ್ಲಿ ಭಾರಿ ಪೈಪೋಟಿ ನಡೆಯಿತು. ಅಂತಿಮವಾಗಿ 24.75 ಕೋಟಿ ರೂಪಾಯಿಗೆ ಸ್ಟಾರ್ಕ್ ಕೆಕೆಆರ್ ಪಾಲಾಗಿದ್ದಾರೆ. ಇಡೀ ಐಪಿಎಲ್ ಟೂರ್ನಿಯ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಬಿಕರಿಯಾದ ಆಟಗಾರನೆಂಬ ಹೆಗ್ಗಳಿಕೆಯನ್ನು ಸ್ಟಾರ್ಕ್ ಹೊಂದಿದ್ದಾರೆ.
ಅಂದಹಾಗೆ ಮಿಚೆಲ್ ಸ್ಟಾರ್ಕ್ ಅವರು ದೀರ್ಘ ಸಮಯದ ಬಳಿಕ ಐಪಿಎಲ್ ಹರಾಜಿಗೆ ಮರಳಿದ್ದು, ದಾಖಲೆಯ ಮೊತ್ತಕ್ಕೆ ಸೇಲಾಗಿದ್ದಾರೆ. 2015ರಲ್ಲಿ ಕೊನೆಯದಾಗಿ ಐಪಿಎಲ್ ಆಡಿದರು. ಆಗ ಆರ್ಸಿಬಿ ತಂಡದ ಭಾಗವಾಗಿದ್ದರು. ಏಳೆಂಟು ವರ್ಷಗಳ ಬಳಿಕ ಸ್ಟಾರ್ಕ್ ಮತ್ತೆ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದು, 24.75 ಕೋಟಿ ರೂ.ಗೆ ಸೇಲಾಗುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ಇತ್ತಿಚೆಗಷ್ಟೇ ಆಸ್ಟ್ರೇಲಿಯಾ, ಭಾರತ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯನ್ನು ಪ್ಯಾಟ್ ಕಮ್ಮಿನ್ಸ್ ನಾಯಕತ್ವದಲ್ಲಿ ಜಯಿಸಿತು. ಇದರ ಪರಿಣಾಮ ಪ್ಯಾಟ್ ಕಮ್ಮಿನ್ಸ್ ಕೂಡ ಐಪಿಎಲ್ನಲ್ಲಿ ದುಬಾರಿ ಮೊತ್ತಕ್ಕೆ ಸೇಲಾಗಿದ್ದಾರೆ. ಬರೋಬ್ಬರಿ 20.50 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಅರೆ.
ಉಳಿದಂತೆ ಡರೈಲ್ ಮಿಚೆಲ್ 14 ಕೋಟಿ ರೂ.ಗೆ ಸಿಎಸ್‌ಕೆ ಪಾಲಾದರೆ, ಹರ್ಷಲ್ ಪಟೇಲ್ 11.7 ಕೋಟಿ ರೂ. ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಪಾಲಾದರು.
ಶಾರ್ದೂಲ್ ಠಾಕೂರ್ (ರೂ. 4 ಕೋಟಿ) ಮತ್ತು ರಚಿನ್ ರವೀಂದ್ರ (ರೂ. 1.80 ಕೋಟಿ) ಅವರನ್ನು ಸಿಎಸ್‌ಕೆ ಖರೀದಿ ಮಾಡಿತು. ರೋವ್‌ಮನ್ ಪೊವೆಲ್ (ರಾಜಸ್ಥಾನ ರಾಯಲ್ಸ್ 7.40 ಕೋಟಿ ರೂ.), ಟ್ರಾವಿಸ್ ಹೆಡ್ (ಎಸ್‌ಆರ್‌ಹೆಚ್, 6.80 ಕೋಟಿ ರೂ.) ಹಾಗೂ ಹ್ಯಾರಿ ಬ್ರೂಕ್ (ಡೆಲ್ಲಿ ಕ್ಯಾಪಿಟಲ್ 4 ಕೋಟಿ ರೂ.) ಉತ್ತಮ ಮೊತ್ತಕ್ಕೆ ಬಿಕರಿಯಾಗಿದ್ದಾರೆ. (ಏಜೆನ್ಸೀಸ್)