ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಹಸಿರು ಜರ್ಸಿ ದುರಾದೃಷ್ಟಕರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆರ್ಸಿಬಿ ಪ್ರತಿ ವರ್ಷ ಐಪಿಎಲ್ ಟೂರ್ನಿಯಲ್ಲಿ ಭೂಮಿಯ ಹಸಿರು ಕಾಳಜಿಯ ಬಗ್ಗೆ ಅರಿವು ಮೂಡಿಸಲು ಒಂದೆರೆಡು ಪಂದ್ಯಗಳಲ್ಲಿ ಹಸಿರು ಜರ್ಸಿಯಲ್ಲಿ ಆಡುತ್ತದೆ. ಅದೇ ರೀತಿ ನಿನ್ನೆ (ಏಪ್ರಿಲ್ 23) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲೂ ಆರ್ಸಿಬಿ ಹಸಿರು ಜರ್ಸಿಯಲ್ಲಿ ಮೈದಾನಕ್ಕಿಳಿಯಿತು ಮತ್ತು ಪಂದ್ಯವನ್ನು ಗೆದ್ದುಕೊಂಡಿತು. ಆದರೆ, ಕೊಹ್ಲಿ ಅಭಿಮಾನಿಗಳಿಗೆ ನಿನ್ನೆ ನಿರಾಸೆಯಾಯಿತು.
ನಿನ್ನೆ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಮೊದಲ ಎಸೆತದಲ್ಲೇ ಆರ್ಆರ್ ತಂಡದ ಟ್ರೆಂಟ್ ಬೋಲ್ಟ್ಗೆ ವಿಕೆಟ್ ಒಪ್ಪಿಸಿದರು. ಎಲ್ಬಿಡಬ್ಲ್ಯು ಬಲೆಗೆ ಬಿದ್ದ ಕೊಹ್ಲಿ ಯಾವುದೇ ರನ್ ಖಾತೆ ತೆರೆಯದೇ ಪೆವಲಿಯನ್ಗೆ ತೆರಳಿದರು. ಕೊಹ್ಲಿ ಪಾಲಿಗೆ ಹಸಿರು ಜರ್ಸಿ ದುರಾದೃಷ್ಟ ಎಂಬಂತೆ ಕಾಣುತ್ತದೆ. ಅದಕ್ಕೆ ಅಂಕಿ-ಅಂಶವು ಕೂಡ ಪುಷ್ಠಿ ನೀಡುತ್ತದೆ. 2022ರಲ್ಲಿ ಹಸಿರು ಜರ್ಸಿಯೊಂದಿಗೆ ಸನ್ ರೈಸರ್ಸ್ ಹೈದರಬಾದ್ ತಂಡದ ವಿರುದ್ಧ ಕಣಕ್ಕಿಳಿದಿದ್ದ ಕೊಹ್ಲಿ, ಜಗದೀಶ ಸುಚಿತ್ ಬೌಲಿಂಗ್ನಲ್ಲಿ ಮೊದಲ ಎಸೆತದಲ್ಲೇ ನಿರ್ಗಮಿಸಿದ್ದರು. ಇದೀಗ ನಿನ್ನೆ ನಡೆದ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಕೊಹ್ಲಿ ಔಟಾದರು.
ಕ್ರಮವಾಗಿ ಎರಡು ವರ್ಷ ಹಸಿರು ಜರ್ಸಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲೂ ಕೊಹ್ಲಿ ಖಾತೆ ತೆರಯದೇ ಪೆವಲಿಯನ್ಗೆ ನಿರ್ಗಮಿಸಿದರು. ಇದನ್ನು ನೋಡಿದರೆ ಕೊಹ್ಲಿಗೆ ಹಸಿರು ಜರ್ಸಿ ಹೊಂದುವುದಿಲ್ಲ ಎಂದು ಕಾಣುತ್ತದೆ. ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲೂ ನಡೆಯುತ್ತಿದೆ.
ಇದನ್ನು ಬಿಟ್ಟರೆ ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ರೋಚಯ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಾಯಕ ಫಾಪ್ ಡುಪ್ಲಿಸಿಸ್ (62) ಮತ್ತು ಗ್ಲೇನ್ ಮ್ಯಾಕ್ಸ್ವೆಲ್ (77) ಅಬ್ಬರದ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ರಾಯಲ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಅಂತಿಮವಾಗಿ ಆರ್ಸಿಬಿ 7 ರನ್ಗಳಿಂದ ರೋಚಕ ಜಯ ದಾಖಲಿಸಿತು. (ಏಜೆನ್ಸೀಸ್)