ಕೊಚ್ಚಿ: ಮುಂದಿನ ವರ್ಷದ ಐಪಿಎಲ್ 16ನೇ ಆವೃತ್ತಿಗೆ ಪೂರ್ವಭಾವಿಯಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಶುಕ್ರವಾರ ಕೇರಳದ ಕಡಲ ತೀರ ಕೊಚ್ಚಿಯಲ್ಲಿ ನಡೆಯಲಿದೆ. ಎಲ್ಲ 10 ಫ್ರಾಂಚೈಸಿಗಳ ಮಾಲೀಕರು ತಮ್ಮ ತಂಡಕ್ಕೆ ಹೆಚ್ಚಿನ ಸಮತೋಲನ ತರಬಲ್ಲ ಆಟಗಾರರ ಹುಡುಕಾಟದಲ್ಲಿದ್ದು, ವಿದೇಶಿ ಆಲ್ರೌಂಡರ್ಗಳಾದ ಬೆನ್ ಸ್ಟೋಕ್ಸ್, ಸ್ಯಾಮ್ ಕರನ್ ಮತ್ತು ಕ್ಯಾಮರಾನ್ ಗ್ರೀನ್ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ.
ಭಾರತೀಯರಲ್ಲಿ ಕನ್ನಡಿಗ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ಗೆ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇದೆ. ಇನ್ನು ದೇಶೀಯ ಆಟಗಾರರ ಪೈಕಿ, ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಶ್ವದಾಖಲೆಯ 277 ರನ್ ಸಿಡಿಸಿ ವಿಜೃಂಭಿಸಿರುವ ತಮಿಳುನಾಡಿನ ಜೆ. ಜಗದೀಶನ್ಗೆ ಉತ್ತಮ ಬೇಡಿಕೆ ಬರುವ ನಿರೀಕ್ಷೆ ಇದೆ.
273 ಭಾರತೀಯರು ಮತ್ತು 132 ವಿದೇಶಿಯರ ಸಹಿತ ಒಟ್ಟು 405 ಆಟಗಾರರು ಹರಾಜು ಕಣದಲ್ಲಿದ್ದು, ಈ ಪೈಕಿ 30 ವಿದೇಶೀಯರ ಸಹಿತ ಗರಿಷ್ಠ 87 ಆಟಗಾರರಷ್ಟೇ ಮಾರಾಟವಾಗಲಿದ್ದಾರೆ. 119 ಅಂತಾರಾಷ್ಟ್ರೀಯ ಮತ್ತು 286 ದೇಶೀಯ ಆಟಗಾರರು ಅದೃಷ್ಟ ಪರಿಶೀಲಿಸಲಿದ್ದಾರೆ.
ಗಾಯದಿಂದಾಗಿ ಕಳೆದ ಐಪಿಎಲ್ ಆವೃತ್ತಿ ತಪ್ಪಿಸಿಕೊಂಡಿದ್ದ ಇಂಗ್ಲೆಂಡ್ನ ಯುವ ಆಲ್ರೌಂಡರ್ ಸ್ಯಾಮ್ ಕರನ್ ಇತ್ತೀಚೆಗೆ ಟಿ20 ವಿಶ್ವಕಪ್ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ್ದರು. ಸಿಎಸ್ಕೆ ತಂಡ ಕರನ್ರನ್ನು ಮರಳಿ ಸೇರಿಸಿಕೊಳ್ಳಲು ಗರಿಷ್ಠ ಪ್ರಯತ್ನ ನಡೆಸುವ ನಿರೀಕ್ಷೆ ಇದೆ. ಇನ್ನು ಆಸೀಸ್ ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಕೂಡ ಇತ್ತೀಚೆಗೆ ಭರ್ಜರಿ ಫಾಮ್ರ್ನಲ್ಲಿದ್ದು, ಮೊದಲ ಬಾರಿಗೆ ಐಪಿಎಲ್ನಲ್ಲಿ ಆಡುವ ಹಂಬಲದಲ್ಲಿದ್ದಾರೆ. ಮಾನಸಿಕ ಆರೋಗ್ಯದ ಕಾರಣ ನೀಡಿ ಕಳೆದ ಐಪಿಎಲ್ ತಪ್ಪಿಸಿಕೊಂಡಿದ್ದ ಬೆನ್ ಸ್ಟೋಕ್ಸ್ ಈ ಬಾರಿ ಮರಳುತ್ತಿದ್ದಾರೆ. ಇತ್ತೀಚೆಗೆ ಪಾಕ್ ಪ್ರವಾಸದಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದ ಇಂಗ್ಲೆಂಡ್ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಖರೀದಿಗೂ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಸನ್ರೈಸರ್ಸ್ನಿಂದ ಹೊರಬಿದ್ದಿರುವ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 2 ಕೋಟಿ ರೂ. ಮೂಲಬೆಲೆಯೊಂದಿಗೆ ಹೊಸ ತಂಡದ ನಿರೀಕ್ಷೆಯಲ್ಲಿದ್ದಾರೆ.
ಹೀಗೆ ನಡೆಯುತ್ತೆ ಹರಾಜು ಪ್ರಕ್ರಿಯೆ ಒಟ್ಟು 405 ಆಟಗಾರರ ಪೈಕಿ ಮೊದಲಿಗೆ 86 ಆಟಗಾರರನ್ನು ಬ್ಯಾಟರ್ಸ್, ಬೌಲರ್ಸ್, ಆಲ್ರೌಂಡರ್ಸ್ ಎಂಬಂತೆ ಒಟ್ಟು 13 ಸೆಟ್ಗಳಲ್ಲಿ ಪ್ರತ್ಯೇಕವಾಗಿ ಹರಾಜಿಗೆ ಇಡಲಾಗುತ್ತದೆ. ಬಳಿಕ ತಂಡಗಳ ಬೇಡಿಕೆ ತಕ್ಕಂತೆ ಇತರ ಆಟಗಾರರನ್ನು ಹರಾಜಿಗೆ ಇಡಲಾಗುತ್ತದೆ. ಅಗತ್ಯಬಿದ್ದರೆ, ಮೊದಲ ಸುತ್ತಿನಲ್ಲಿ ಮಾರಾಟವಾಗದ ಆಟಗಾರನನ್ನು 2ನೇ ಸಲವೂ ಹರಾಜಿಗೆ ಇಡಬಹುದು. ಬಿಡ್ಡಿಂಗ್ನಲ್ಲಿ 1 ಕೋಟಿ ರೂ.ವರೆಗೆ ತಲಾ 5 ಲಕ್ಷ ರೂ, ಬಳಿಕ 2 ಕೋಟಿ ರೂ.ವರೆಗೆ ತಲಾ 10 ಲಕ್ಷ ರೂ, 3 ಕೋಟಿ ರೂ.ವರೆಗೆ ತಲಾ 20 ಲಕ್ಷ ರೂ.ನಂತೆ ಏರಿಕೆಯಾಗಲಿದ್ದು, ಬಳಿಕ 25 ಲಕ್ಷ ರೂ.ನಂತೆ ಏರಿಕೆಯಾಗಲಿದೆ. ಹರಾಜಿನಲ್ಲಿ 2 ಕೋಟಿ ರೂ. ಗರಿಷ್ಠ ಮೂಲಬೆಲೆಯಾಗಿದೆ. 19 ವಿದೇಶಿ ಆಟಗಾರರು 2 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. 11 ಆಟಗಾರರು 1.5 ಕೋಟಿ ರೂ, 20 ಆಟಗಾರರು 1 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ.
ದುಬಾರಿ ಎನಿಸಬಲ್ಲ ಸ್ಟಾರ್ ಆಟಗಾರರು *ಬೆನ್ ಸ್ಟೋಕ್ಸ್ (ಇಂಗ್ಲೆಂಡ್) *ಸ್ಯಾಮ್ ಕರನ್ (ಇಂಗ್ಲೆಂಡ್) *ಕ್ಯಾಮರಾನ್ ಗ್ರೀನ್ (ಆಸ್ಟ್ರೆಲಿಯಾ) *ಮಯಾಂಕ್ ಅಗರ್ವಾಲ್ (ಭಾರತ) *ಹ್ಯಾರಿ ಬ್ರೂಕ್ (ಇಂಗ್ಲೆಂಡ್) *ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್) *ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್)
ದುಬಾರಿ ಆಗಬಲ್ಲ ದೇಶೀಯ ಆಟಗಾರರು
*ಜೆ. ಜಗದೀಶನ್
*ಶಿವಂ ಮಾವಿ
*ಯಶ್ ಠಾಕೂರ್
*ಮುಕೇಶ್ ಕುಮಾರ್
*ಪ್ರಮುಖಾಂಶ
ಹರಾಜಿಗಿರುವವರು: 405
ಭಾರತೀಯರು: 273
ವಿದೇಶೀಯರು: 132
ಅಂತಾರಾಷ್ಟ್ರೀಯ ಆಟಗಾರರು: 119
ದೇಶೀಯ ಆಟಗಾರರು: 286
ಮಾರಾಟಗೊಳ್ಳಬಹುದಾದ ಗರಿಷ್ಠ ಆಟಗಾರರು: 87 (30 ವಿದೇಶೀಯರು)
ಕರ್ನಾಟಕದ 16 ಆಟಗಾರರು
ಹರಾಜಿನಲ್ಲಿ ಕರ್ನಾಟಕದ 16 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಪೈಕಿ ಮಯಾಂಕ್ ಅಗರ್ವಾಲ್ ಮತ್ತು ಮನೀಷ್ ಪಾಂಡೆ ಗರಿಷ್ಠ ತಲಾ 1 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಕರುಣ್ ನಾಯರ್ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಉಳಿದಂತೆ ಶ್ರೇಯಸ್ ಗೋಪಾಲ್, ಜೆ. ಸುಚಿತ್, ಮನೋಜ್ ಭಾಂಡಗೆ, ಲವನೀತ್ ಸಿಸೋಡಿಯ, ಬಿಆರ್ ಶರತ್, ವೈಶಾಖ್ ವಿಜಯ್ಕುಮಾರ್, ವಿದ್ವತ್ ಕಾವೇರಪ್ಪ, ಎಂ. ವೆಂಕಟೇಶ್, ವಾಸುಕಿ ಕೌಶಿಕ್ ಮತ್ತು ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ಎಲ್.ಆರ್. ಚೇತನ್, ರೋಹನ್ ಪಾಟೀಲ್, ಶುಭಾಂಗ್ ಹೆಗ್ಡೆ, ಸಂಜಿತ್ ದೇವರಾಜ್ ತಲಾ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ.
ತಂಡವೊಂದು ಗರಿಷ್ಠ 25 (8 ವಿದೇಶಿ) ಆಟಗಾರರನ್ನು ಹೊಂದಲು ಅವಕಾಶವಿದ್ದು, ಬಜೆಟ್ ಮಿತಿ 95 ಕೋಟಿ ರೂ. ಆಗಿದೆ. ಡೆಲ್ಲಿಗೆ ಕನಿಷ್ಠ 5 ಮತ್ತು ಸನ್ರೈಸರ್ಸ್ಗೆ ಗರಿಷ್ಠ 13 ಆಟಗಾರರು ಬೇಕಾಗಿದ್ದಾರೆ.
ಹರಾಜಿನ ಮೊದಲ 5 ಸೆಟ್ಗಳು