ನವದೆಹಲಿ: ಐಪಿಎಲ್ 15ನೇ ಆವೃತ್ತಿಗೆ ಬಿಸಿಸಿಐ ಕೆಲವು ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಈ ಮೂಲಕ ಈಗಾಗಲೆ 2 ಹೊಸ ತಂಡಗಳ ಏರಿಕೆಯಿಂದ ಹೊಸ ಸ್ವರೂಪವನ್ನೂ ಪಡೆದುಕೊಂಡಿರುವ ಟೂರ್ನಿಯಲ್ಲಿ ಮತ್ತಷ್ಟು ಬದಲಾವಣೆಗಳು ಕ್ರಿಕೆಟ್ ಪ್ರೇಮಿಗಳಿಗೆ ಹೆಚ್ಚಿನ ಮನರಂಜನೆಯನ್ನೂ ಒದಗಿಸಲಿದೆ. ಪ್ರತಿ ಇನಿಂಗ್ಸ್‌ನಲ್ಲಿ ನೀಡಲಾಗುವ ಡಿಆರ್‌ಎಸ್ ಅವಕಾಶವನ್ನು 1ರಿಂದ 2ಕ್ಕೇರಿಸುವ ಜತೆಗೆ, ಇತ್ತೀಚೆಗೆ ಕ್ರಿಕೆಟ್ ನಿಯಮಾವಳಿಯಲ್ಲಿ ಎಂಸಿಸಿ ಮಾಡಿರುವ ಕೆಲವು ತಿದ್ದುಪಡಿಗಳನ್ನು ಐಪಿಎಲ್‌ನಲ್ಲೂ ಅಳವಡಿಸಿಕೊಳ್ಳಲು ಬಿಸಿಸಿಐ ಸಿದ್ಧವಾಗಿದೆ. ಇದಲ್ಲದೆ ನಾಕೌಟ್ ಪಂದ್ಯಗಳು ಮತ್ತು ಕರೊನಾಗೆ ಸಂಬಂಧಿಸಿದಂತೆಯೂ ಕೆಲ ನಿಯಮ ಬದಲಾವಣೆ ಮಾಡಿಕೊಳ್ಳಲಾಗಿದೆ. ಮಾರ್ಚ್ 26ರಿಂದ ಮೇ 29ರವರೆಗೆ ನಡೆಯಲಿರುವ ಐಪಿಎಲ್‌ನಲ್ಲಿ ಈ ಬದಲಾವಣೆಗಳನ್ನು ಕಾಣಬಹುದಾಗಿದೆ.
ಡಿಆರ್‌ಎಸ್ ಏರಿಕೆ
ಐಪಿಎಲ್‌ನಲ್ಲಿ 2018ರಲ್ಲಿ ಅಂಪೈರ್ ತೀರ್ಪಿನ ಪರಾಮರ್ಶೆ ಪದ್ಧತಿಯನ್ನು (ಡಿಆರ್‌ಎಸ್) ಅಳವಡಿಸಿಕೊಳ್ಳಲಾಗಿತ್ತು ಮತ್ತು ಪ್ರತಿ ಇನಿಂಗ್ಸ್‌ನಲ್ಲಿ 1 ಮಾತ್ರ ವಿಫಲ ಮನವಿಗೆ ಅವಕಾಶವಿತ್ತು. ಆದರೆ ಈ ಬಾರಿ ಡಿಆರ್‌ಎಸ್ ಅವಕಾಶವನ್ನು 2ಕ್ಕೆ ಏರಿಸಲಾಗಿದೆ. ಡಿಆರ್‌ಎಸ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ತಂಡದ ಪರವಾಗಿ ಅಥವಾ ‘ಅಂಪೈರ್ಸ್ ಕಾಲ್’ ಬಂದರೆ ಅದು ನಷ್ಟವಾಗುವುದಿಲ್ಲ.
ಎಂಸಿಸಿ ತಿದ್ದುಪಡಿ ಅಳವಡಿಕೆ
ಕ್ರಿಕೆಟ್ ನಿಯಮಾವಳಿಗಳ ಮಹಾಪೋಷಕನಾಗಿರುವ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಇತ್ತೀಚೆಗೆ ಕೆಲ ತಿದ್ದುಪಡಿಗಳನ್ನು ಮಾಡಿಕೊಂಡಿತ್ತು. ಇದರನ್ವಯ ಐಪಿಎಲ್‌ನಲ್ಲೂ ಬ್ಯಾಟರ್ ಕ್ಯಾಚ್ ನೀಡಿ ಔಟಾದಾಗ ನಂತರ ಬರುವ ಹೊಸ ಬ್ಯಾಟರ್‌ಗೆ ಸ್ಟ್ರೈಕ್ ಸಿಗಲಿದೆ. ಚೆಂಡು ಗಾಳಿಯಲ್ಲಿ ಹಾರಿದಾಗ ಬ್ಯಾಟರ್‌ಗಳು ಸ್ಟ್ರೈಕ್ ಬದಲಾವಣೆ (ಪರಸ್ಪರ ಕ್ರಾಸ್ ಆಗಿದ್ದರೆ) ಮಾಡಿಕೊಂಡಿದ್ದರೂ, (ಅದು ಓವರ್ ಮುಕ್ತಾಯ ಅಲ್ಲದಿದ್ದರೆ) ನಾನ್-ಸ್ಟ್ರೈಕರ್ ಬ್ಯಾಟರ್‌ಗೆ ಮುಂದಿನ ಎಸೆತ ಎದುರಿಸುವ ಅವಕಾಶ ಸಿಗುವುದಿಲ್ಲ. ಮಂಕಡಿಂಗ್ ಇನ್ನು ಐಪಿಎಲ್‌ನಲ್ಲೂ ರನೌಟ್ ಎಂದೇ ಪರಿಗಣಿಸಲ್ಪಡಲಿದೆ. ಇದರಿಂದ ಇನ್ನು ಐಪಿಎಲ್‌ನಲ್ಲೂ ಮಂಕಡಿಂಗ್ ಮಾಡಿದರೆ ಕ್ರೀಡಾಸ್ಫೂರ್ತಿಯ ವಿವಾದಕ್ಕೆ ಸಿಲುಕಿಕೊಳ್ಳುವ ಭೀತಿ ಇಲ್ಲ. ಚೆಂಡಿಗೆ ಎಂಜಲು ಹಚ್ಚುವ ಅವಕಾಶವೂ ಇರುವುದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ತಿದ್ದುಪಡಿಗಳು ಅಕ್ಟೋಬರ್‌ನಿಂದ ಜಾರಿಗೆ ಬರಲಿದ್ದರೂ, ಅದಕ್ಕೆ ಮೊದಲೇ ಐಪಿಎಲ್‌ನಲ್ಲಿ ಅಳವಡಿಕೆಯಾಗಲಿದೆ.
ಕರೊನಾ ಕಾಡಿದರೆ ಪಂದ್ಯ ಮರುನಿಗದಿ
ಕಳೆದ ವರ್ಷ ಕೆಲ ಆಟಗಾರರಿಗೆ ಕರೊನಾ ಕಾಡಿದಾಗ ಟೂರ್ನಿಯನ್ನೇ ಮೊಟಕುಗೊಳಿಸಲಾಗಿತ್ತು. ಆದರೆ ಈ ಬಾರಿ ತಂಡವೊಂದರಲ್ಲಿ 12 ಆಟಗಾರರು (ಕನಿಷ್ಠ 7 ಭಾರತೀಯರು) ಕರೊನಾ ಸೋಂಕಿತರಾಗದೆ ಆಡಲು ಲಭ್ಯರಿದ್ದರೂ ಪಂದ್ಯ ನಿಗದಿಯಂತೆಯೇ ನಡೆಯಲಿದೆ. ಒಂದು ವೇಳೆ 12ಕ್ಕಿಂತ ಕಡಿಮೆ ಆಟಗಾರರಷ್ಟೇ ಆಡಲು ಲಭ್ಯರಿದ್ದರೆ ಆ ತಂಡದ ಪಂದ್ಯವನ್ನು ಮುಂದೂಡಿ, ಮುಂದಿನ ದಿನಗಳಲ್ಲಿ ಮರುನಿಗದಿ ಪಡಿಸಲಾಗುವುದು. ಒಂದು ವೇಳೆ ಆ ಪಂದ್ಯದ ಮರುನಿಗದಿ ಸಾಧ್ಯವಾಗದಿದ್ದರೆ, ಟೂರ್ನಿಯ ತಾಂತ್ರಿಕ ಸಮಿತಿ ಆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಮತ್ತು ಅದುವೇ ಅಂತಿಮವಾಗಿರುತ್ತದೆ.
ಸೂಪರ್ ಓವರ್ ನಡೆಯದಿದ್ದರೆ ಅಂಕಪಟ್ಟಿಯೇ ಮಾನದಂಡ!
ಫೈನಲ್ ಸಹಿತ ಟೂರ್ನಿಯ ನಾಕೌಟ್ ಅಥವಾ ಪ್ಲೇಆಫ್ ಪಂದ್ಯಗಳು ಟೈಗೊಂಡಾಗ ಅನಂತರ ಸೂಪರ್ ಓವರ್ ಅಥವಾ ಪುನರಾವರ್ತಿತ ಸೂಪರ್ ಓವರ್ (ಮೊದಲ ಸೂಪರ್ ಓವರ್ ಕೂಡ ಟೈಗೊಂಡಾಗ) ಆಯೋಜಿಸಲು ವಾತಾವರಣ ಅಥವಾ ಸಮಯ ಅವಕಾಶ ಕಲ್ಪಿಸದಿದ್ದರೆ ಆಗ ವಿಜೇತರನ್ನು ನಿರ್ಧರಿಸಲು ಲೀಗ್ ಹಂತದ ಅಂಕಪಟ್ಟಿಯೇ ಮಾನದಂಡವಾಗಿರುತ್ತದೆ. ಲೀಗ್ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದ್ದ ತಂಡವೇ ಆ ಪಂದ್ಯದ ವಿಜೇತ ತಂಡವಾಗಲಿದೆ.
ಬಬಲ್ ಉಲ್ಲಂಫಿಸಿದರೆ ದಂಡ, ನಿಷೇಧ
ಐಪಿಎಲ್ ವೇಳೆ ತಂಡವೊಂದು ಬಯೋ-ಬಬಲ್ ಉಲ್ಲಂಘಿಸಿ ಹೊರಗಿನ ವ್ಯಕ್ತಿಗಳನ್ನು ಭೇಟಿಯಾದರೆ ಭಾರಿ ದಂಡ ಶಿಕ್ಷೆ ಎದುರಾಗಲಿದೆ. ಮೊದಲ ಬಾರಿ ಈ ತಪ್ಪೆಸಗಿದ ತಂಡಕ್ಕೆ 1 ಕೋಟಿ ರೂ. ದಂಡ ಶಿಕ್ಷೆಯಾಗಲಿದೆ. 2ನೇ ಬಾರಿ ಈ ತಪ್ಪೆಸಗಿದರೆ ಆ ತಂಡದ ಒಂದು ಅಂಕ ಕಡಿತವಾಗಲಿದೆ. 3ನೇ ಬಾರಿ 2 ಅಂಕ ಕಡಿತವಾಗಲಿದೆ. ಇನ್ನು ಬಬಲ್ ಉಲ್ಲಂಘಿಸುವ ಆಟಗಾರ 7 ದಿನ ಕ್ವಾರಂಟೈನ್‌ಗೆ ಒಳಗಾಗಬೇಕು ಮತ್ತು ಈ ವೇಳೆ ತಪ್ಪಿಸಿಕೊಳ್ಳುವ ಪಂದ್ಯಗಳ ಸಂಭಾವನೆಯನ್ನೂ ನೀಡಲಾಗುವುದಿಲ್ಲ. 2ನೇ ಬಾರಿ ಬಬಲ್ ಉಲ್ಲಂಘಿಸಿದರೆ ಕ್ವಾರಂಟೈನ್ ಜತೆಗೆ 1 ಪಂದ್ಯ ನಿಷೇಧ ಶಿಕ್ಷೆಯೂ ಎದುರಾಗಲಿದೆ. 3ನೇ ಬಾರಿ ಬಬಲ್ ಉಲ್ಲಂಘಿಸಿದರೆ ಆ ಆಟಗಾರ ಟೂರ್ನಿಯಿಂದಲೇ ಹೊರಬೀಳಲಿದ್ದಾನೆ ಮತ್ತು ಆತನ ಬದಲಿಗೆ ಬೇರೆ ಆಟಗಾರನನ್ನು ಸೇರಿಸುವ ಅವಕಾಶವನ್ನೂ ನೀಡಲಾಗುವುದಿಲ್ಲ.