ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 3 ವಾರಗಳ ಲಾಕ್ಡೌನ್ ಘೊಷಿಸಿದ ದಿನವೇ, 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಈ ವರ್ಷ ನಡೆಯುವುದು ಅನುಮಾನ ಎಂದು ಹೇಳಲಾಗಿತ್ತು. ಸದ್ಯ ಏಪ್ರಿಲ್ 15ರವರೆಗೆ ಮುಂದೂಡಿಕೆಯಾಗಿರುವ ಐಪಿಎಲ್ ಟೂರ್ನಿ, ನಂತರದ ದಿನಗಳಲ್ಲೂ ನಡೆಯುವ ಯಾವ ಸಾಧ್ಯತೆಗಳೂ ಕಾಣಿಸುತ್ತಿಲ್ಲ. ಐಪಿಎಲ್ ರದ್ದುಗೊಳಿಸುವ ತೀರ್ವನವನ್ನು ಬಿಸಿಸಿಐ ಅಧಿಕೃತವಾಗಿ ಘೊಷಿಸುವುದಷ್ಟೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಮುಂದಿನ ವರ್ಷ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಕೂಡ ನಡೆಯುವುದಿಲ್ಲ ಎನ್ನಲಾಗಿದೆ.
ವಿದೇಶಿ ಪ್ರವಾಸಿಗರಿಗೆ ಏಪ್ರಿಲ್ 15ರವರೆಗೆ ವೀಸಾ ನೀಡುವುದಿಲ್ಲ ಎಂದು ಭಾರತ ಸರ್ಕಾರ ಈಗಾಗಲೆ ಘೊಷಿಸಿದೆ. ಸರ್ಕಾರ ಇದನ್ನು ಇನ್ನಷ್ಟು ಸಮಯ ವಿಸ್ತರಿಸುವ ನಿರೀಕ್ಷೆಯೂ ಇದೆ. ಹೀಗಾಗಿ ಸರ್ಕಾರದಿಂದ ಈ ಬಗ್ಗೆ ಘೊಷಣೆ ಹೊರಬಿದ್ದ ಬಳಿಕ, ಐಪಿಎಲ್ ರದ್ದುಗೊಳಿಸುವ ಬಗ್ಗೆಯೂ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎನ್ನಲಾಗಿದೆ.
’ಈ ವರ್ಷ ಐಪಿಎಲ್ ನಡೆಯುವುದಿಲ್ಲ. ಇನ್ನು ಮುಂದಿನ ವರ್ಷವಷ್ಟೇ ಐಪಿಎಲ್ ಅಯೋಜಿಸಲು ಸಾಧ್ಯ. ದೇಶ ಈಗ ಯಾವ ಪರಿಸ್ಥಿತಿಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಂಥ ಸಮಯದಲ್ಲಿ ಯಾರೂ ಅಪಾಯವನ್ನು ಎದುರಿಸಲು ಸಿದ್ಧರಿಲ್ಲ. ಕ್ರೀಡಾಂಗಣಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದು. ಹೀಗಾಗಿ ಐಪಿಎಲ್ ಟೂರ್ನಿಯನ್ನು ಮುಂದಿನ ವರ್ಷವೇ ಆಡುವುದು ಉತ್ತಮ’ ಎಂದು ಐಪಿಎಲ್ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹರಾಜು ಇಲ್ಲ?: ಐಪಿಎಲ್ ಟೂರ್ನಿಯ ರೂಪುರೇಷೆಗಳ ಪ್ರಕಾರ, ಈ ವರ್ಷದ ಟೂರ್ನಿಯ ಬಳಿಕ ಮುಂದಿನ ಆವೃತ್ತಿಗೆ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಬೇಕು. ಇದರನ್ವಯ ತಂಡಗಳು ಕೆಲವೇ ಆಟಗಾರರನ್ನಷ್ಟೇ ರಿಟೇನ್ ಮಾಡಿಕೊಂಡು ಉಳಿದೆಲ್ಲ ಆಟಗಾರರನ್ನು ಹರಾಜಿಗೆ ಬಿಟ್ಟುಕೊಡಬೇಕು. ಆದರೆ ಈ ವರ್ಷ ಐಪಿಎಲ್ ಟೂರ್ನಿಯೇ ನಡೆಯದಿದ್ದರೆ ಇದು ಇನ್ನೊಂದು ವರ್ಷ ಮುಂದೂಡಲ್ಪಡಲಿದೆ.
ಐಪಿಎಲ್ ಮತ್ತು ಮೆಗಾ ಹರಾಜು ಮುಂದೂಡಿಕೆಯನ್ನು ಶೀಘ್ರದಲ್ಲೇ ಫ್ರಾಂಚೈಸಿ ಮಾಲೀಕರಿಗೆ ತಿಳಿಸಲಿದ್ದೇವೆ. ಇದಕ್ಕೆ ಮುನ್ನ ಸರ್ಕಾರದ ನಿರ್ಧಾರವನ್ನು ಕಾಯುತ್ತಿದ್ದೇವೆ ಎಂದು ಐಪಿಎಲ್ ಆಡಳಿತಾಧಿಕಾರಿ ತಿಳಿಸಿದ್ದಾರೆ.
ವಲಯವಾರು ಶಿಬಿರಗಳು ರದ್ದು?
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ವಲಯವಾರು ಶಿಬಿರಗಳನ್ನು ಬಿಸಿಸಿಐ ರದ್ದುಗೊಳಿಸಲಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಬೇಸಗೆ ಸಮಯದಲ್ಲಿ ಈ ಕ್ರಿಕೆಟ್ ತರಬೇತಿ ಶಿಬಿರಗಳು ನಡೆಯುತ್ತವೆ. ಜೂನಿಯರ್ ಆಯ್ಕೆ ಸಮಿತಿ ಈ ವಲಯವಾರು ಶಿಬಿರಗಳಿಗೆ ತಂಡಗಳನ್ನು ಆಯ್ಕೆ ಮಾಡುತ್ತವೆ. ಆದರೆ ಇನ್ನೂ ಆಯ್ಕೆ ಸಮಿತಿಯಿಂದ ಯಾವುದೇ ಸಭೆ ನಡೆದಿಲ್ಲ ಎನ್ನಲಾಗಿದೆ. ವೇಗದ ಬೌಲರ್ಗಳು, ಸ್ಪಿನ್ನರ್ಗಳು ಮತ್ತು ಬ್ಯಾಟ್ಸ್ಮನ್ಗಳಿಗಾಗಿ ಎನ್ಸಿಎ ಈ ಶಿಬಿರಗಳನ್ನು ನಡೆಸುತ್ತದೆ. ನೂರಾರು ಕೋಚ್ಗಳೂ ಈ ಶಿಬಿರದಲ್ಲಿ ಕಾರ್ಯನಿರ್ವಹಿಸುತ್ತಾರೆ.
ಆಟಗಾರರು, ಸಿಬ್ಬಂದಿ, ಅಭಿಮಾನಿಗಳು ಮತ್ತು ಅಧಿಕಾರಿಗಳ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡುವ ಬಿಸಿಸಿಐ ನಿಲುವನ್ನು ಫ್ರಾಂಚೈಸಿ ಮಾಲೀಕರೂ ಈಗಾಗಲೆ ಒಪ್ಪಿಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜತೆಗೆ ನಾವು ಸಂಪರ್ಕದಲ್ಲಿದ್ದು, ಅವರ ಸೂಚನೆಯಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. | ಜಯ್ ಷಾ ಬಿಸಿಸಿಐ ಕಾರ್ಯದರ್ಶಿ https://www.vijayavani.net/tokyo-olympics-to-start-on-2021-july-23/