ಕ್ರೀಡೆ

ಆರ್‌ಸಿಬಿಗೆ ಹೀನಾಯ ಸೋಲು ; ಸನ್‌ರೈಸರ್ಸ್‌ ತಂಡಕ್ಕೆ ಸತತ 5ನೇ ಜಯ

ಮುಂಬೈ: ಅಗ್ರ ಕ್ರಮಾಂಕ ಬ್ಯಾಟರ್‌ಗಳ ವೈಲ್ಯಕ್ಕೆ ಬೆಲೆತೆತ್ತ ರಾಯಲ್ಸ್ ಚಾಲೆಂಜರ್ಸ್‌ ಬೆಂಗಳೂರು ತಂಡ ಹೀನಾಯ ಸೋಲಿಗೆ ಶರಣಾಯಿತು. ಪ್ರಸಕ್ತ ಐಪಿಎಲ್‌ನಲ್ಲಿ ಉತ್ತಮ ಲಯದಲ್ಲಿದ್ದ ಫಾಫ್ ಡು ಪ್ಲೆಸಿಸ್ ಪಡೆ ಅನಿರೀಕ್ಷಿತ ಕುಸಿತ ಕಂಡ ಪರಿಣಾಮ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ 9 ವಿಕೆಟ್‌ಗಳಿಂದ ಶರಣಾಯಿತು. ಹ್ಯಾಟ್ರಿಕ್ ಗೆಲುವಿನ ಕನಸಿನೊಂದಿಗೆ ಕಣಕ್ಕಿಳಿದ ಆರ್‌ಸಿಬಿ, ಮೂವರು ಎಡಗೈ ಬೌಲರ್‌ಗಳಾದ ಮಾರ್ಕೋ ಜಾನ್ಸೆನ್ (25ಕ್ಕೆ 3), ಟಿ. ನಟರಾಜನ್ (10ಕ್ಕೆ 3) ಹಾಗೂ ಸ್ಪಿನ್ನರ್ ಜೆ.ಸುಚಿತ್ (12ಕ್ಕೆ 2) ಮಾರಕ ದಾಳಿಗೆ ನಲುಗಿತು.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, 16.1 ಓವರ್‌ಗಳಲ್ಲಿ 68 ರನ್‌ಗಳಿಗೆ ಕುಸಿತ ಕಂಡಿತು. ಈ ಅಲ್ಪಮೊತ್ತ ಬೆನ್ನಟ್ಟಿದ ಸನ್‌ರೈಸರ್ಸ್‌ ತಂಡ ಅಭಿಷೇಕ್ ಶರ್ಮ (47ರನ್, 28 ಎಸೆತ, 8 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 8 ಓವರ್‌ಗಳಲ್ಲಿ 1 ವಿಕೆಟ್‌ಗೆ 72 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಅಭಿಷೇಕ್ ಅಬ್ಬರ: ಆರ್‌ಸಿಬಿ ನೀಡಿದ ಅಲ್ಪಮೊತ್ತದ ಸವಾಲು ಬೆನ್ನಟ್ಟಿದ ಸನ್‌ರೈಸರ್ಸ್‌ಗೆ ಎಡಗೈ ಆರಂಭಿಕ ಅಭಿಷೇಕ್ ಶರ್ಮ ಉತ್ತಮ ಆರಂಭ ನೀಡಿದರು. ಕೇನ್ ವಿಲಿಯಮ್ಸನ್ (16*) ಜತೆಗೂಡಿ ಅಬ್ಬರಿಸಿದ ಅಭಿಷೇಕ್ ಶರ್ಮ ಮೊದಲ ವಿಕೆಟ್‌ಗೆ ಬಿರುಸಿನ 64 ರನ್ ಕಲೆಹಾಕಿದರು. ಹರ್ಷಲ್ ಪಟೇಲ್ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿ ಲಾಂಗ್ ಆನ್‌ನಲ್ಲಿದ್ದ ಅನುಜ್ ರಾವತ್‌ಗೆ ಕ್ಯಾಚ್ ನೀಡಿದರು. ಬಳಿಕ ಕೇನ್ ವಿಲಿಯಮ್ಸನ್ ಹಾಗೂ ರಾಹುಲ್ ತ್ರಿಪಾಠಿ (7*) ಜೋಡಿ ಇನ್ನೂ 12 ಓವರ್‌ಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿತು.