ಕ್ರೀಡೆ

ಇಂದು ಸನ್‌ರೈಸರ್ಸ್‌-ಪಂಜಾಬ್ ಕಿಂಗ್ಸ್ ಹೋರಾಟ ; ಆತ್ಮವಿಶ್ವಾಸದಲ್ಲಿ ಕನ್ನಡಿಗ ಮಯಾಂಕ್ ಬಳಗ

ಮುಂಬೈ: ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-15ರ ಪಂದ್ಯದಲ್ಲಿ ಭಾನುವಾರ ಎದುರಾಗಲಿವೆ. ಉಭಯ ತಂಡಗಳು ಇದುವರೆಗೆ ಆಡಿರುವ ತಲಾ 5 ಪಂದ್ಯಗಳಲ್ಲಿ 3 ಜಯ, 2 ಸೋಲು ಕಾಣುವ ಮೂಲಕ ಸಮಬಲದ ಸಾಧನೆ ಹೊಂದಿವೆ. ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಸತತ ಮೂರು ಜಯ ಕಂಡಿರುವ ಕೇನ್ ವಿಲಿಯಮ್ಸನ್ ಬಳಗ ಉತ್ತಮ ಲಯದಲ್ಲಿದ್ದರೆ, ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಭರ್ಜರಿ ಗೆಲುವು ಕಂಡಿರುವ ಪಂಜಾಬ್ ಕೂಡ ಆತ್ಮವಿಶ್ವಾಸದಲ್ಲಿದೆ.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನಾಯಕ ಮಯಾಂಕ್ ಅಗರ್ವಾಲ್ ಫಾರ್ಮ್‌ಗೆ ಮರಳಿರುವುದು ಪಂಜಾಬ್ ತಂಡದ ಸ್ಥೈರ್ಯ ಹೆಚ್ಚಿಸಿದ್ದರೆ, ಅನುಭವಿ ಶಿಖರ್ ಧವನ್ ಆರಂಭಿಕ ಹಂತದಲ್ಲಿ ರನ್‌ಗಳಿಸುತ್ತಿದ್ದಾರೆ. ಆಲ್ರೌಂಡರ್ ಲಿವಿಂಗ್‌ಸ್ಟೋನ್ ಉತ್ತಮ ನಿರ್ವಹಣೆ ತೋರುತ್ತಿದ್ದಾರೆ. ಮತ್ತೊಂದೆಡೆ, ಬಲಿಷ್ಠ ಬೌಲಿಂಗ್ ದಾಳಿ ಹೊಂದಿರುವ ಸನ್‌ರೈಸರ್ಸ್‌ ತಂಡ ಸತತ 4ನೇ ಗೆಲುವಿನ ಕನಸಿನಲ್ಲಿದೆ.

ಟೀಮ್ ನ್ಯೂಸ್:

ಸನ್‌ರೈಸರ್ಸ್‌: ಗೆಲುವಿನ ಲಯದಲ್ಲಿರುವ ತಂಡವನ್ನೇ ಉಳಿಸಿಕೊಳ್ಳಬಹುದು. ವಾಷಿಂಗ್ಟನ್ ಸುಂದರ್ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡಿರುವ ಜೆ.ಸುಚಿತ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಪಂಜಾಬ್ ಕಿಂಗ್ಸ್: ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಆಡಿದ ತಂಡವೇ ಕಣಕ್ಕಿಳಿಯಬಹುದು.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 17, ಸನ್‌ರೈಸರ್ಸ್‌: 12, ಪಂಜಾಬ್ ಕಿಂಗ್ಸ್: 5