ಕ್ರೀಡೆ

ಆರ್‌ಸಿಬಿ ಪ್ಲೇ ಆಫ್ ಹೋರಾಟ ಜೀವಂತ; ಗುಜರಾತ್ ಟೈಟಾನ್ಸ್ ಎದುರು 8 ವಿಕೆಟ್ ಜಯ

ಮುಂಬೈ: ಆರಂಭಿಕ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ (73ರನ್, 54 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಫಾಫ್ ಡು ಪ್ಲೆಸಿಸ್ (44ರನ್, 38 ಎಸೆತ, 5 ಬೌಂಡರಿ ಜೋಡಿ ಬಿರುಸಿನ ಬ್ಯಾಟಿಂಗ್ ಫಲವಾಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ತನ್ನ ಕಡೇ ಲೀಗ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಪ್ಲೇಆಫ್ ರೇಸ್‌ನಲ್ಲಿ ಉಳಿಯಿತು. ಅಂತಿಮ ನಾಲ್ಕರಘಟ್ಟಕ್ಕೇರಲು ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿದ್ದ ಬೆಂಗಳೂರು ತಂಡ ಮೊದಲ ಹಣಾಹಣಿಯಲ್ಲಿ ಗುಜರಾತ್ ಎದುರು ಅನುಭವಿಸಿದ ಸೋಲಿಗೂ ಸೇಡು ತೀರಿಸಿಕೊಂಡಿತು.

ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಗುಜರಾತ್ ತಂಡ, ಆರ್‌ಸಿಬಿ ಬಿಗಿ ಬೌಲಿಂಗ್ ದಾಳಿ ನಡುವೆಯೂ ನಾಯಕ ಹಾರ್ದಿಕ್ ಪಾಂಡ್ಯ (62*ರನ್, 47ಎಸೆತ, 4 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಡೇವಿಡ್ ಮಿಲ್ಲರ್ (34ರನ್, 25 ಎಸೆತ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 168 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ 18.4 ಓವರ್‌ಗಳಲ್ಲಿ 2 ವಿಕೆಟ್‌ಗೆ 170 ರನ್‌ಗಳಿಸಿ ಗೆಲುವಿನ ನಗೆ ಬೀರಿತು.