ಪುಣೆ: ಸನ್‌ರೈಸರ್ಸ್ ಹೈದರಾಬಾದ್ ಎದುರು ಹೀನಾಯ ಸೋಲಿಗೆ ಶರಣಾಗಿ ಅಭಿಮಾನಿಗಳ ಟೀಕೆಗೆ ಗುರಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಐಪಿಎಲ್-15ರಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸವಾಲು ಎದುರಾಗಲಿದೆ. ಸತತ ಎರಡು ಶತಕ ಸಿಡಿಸುವ ಮೂಲಕ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುತ್ತಿರುವ ಜೋಸ್ ಬಟ್ಲರ್‌ಗೆ ಕಡಿವಾಣ ಹೇರುವುದೇ ಆರ್‌ಸಿಬಿ ಮುಂದಿರುವ ದೊಡ್ಡ ಸವಾಲು. ಸನ್‌ರೈಸರ್ಸ್ ಎದುರು 9 ವಿಕೆಟ್‌ಗಳಿಂದ ಸೋಲು ಕಂಡ ಆರ್‌ಸಿಬಿಯ ರನ್‌ರೇಟ್ ಪಾತಾಳಕ್ಕೆ ಕುಸಿದಿದ್ದು, ಗೆಲುವಿನ ಜತೆಗೆ ರನ್‌ರೇಟ್ ಲೆಕ್ಕಾಚಾರವೂ ಆರ್‌ಸಿಬಿ ಮುಂದಿರುವ ಸವಾಲಾಗಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಸತತವಾಗಿ ವೈಫಲ್ಯ ಕಾಣುತ್ತಿರುವುದು ತಂಡ ಚಿಂತಕರ ಛಾವಡಿಯನ್ನು ಚಿಂತೆಗೀಡು ಮಾಡಿದೆ. ಮತ್ತೊಂದೆಡೆ, ಮೊದಲ ಹಣಾಹಣಿಯಲ್ಲಿ ಸೋಲನುಭವಿಸಿದ್ದ ರಾಜಸ್ಥಾನ ತಂಡ ಸೇಡಿನ ತವಕದಲ್ಲಿದೆ.
*ಪುಟಿದೇಳುವ ವಿಶ್ವಾಸದಲ್ಲಿ ಆರ್‌ಸಿಬಿ
ಸನ್‌ರೈಸರ್ಸ್ ತಂಡದ ಎಡಗೈ ಬೌಲರ್‌ಗಳ ಮಾರಕ ದಾಳಿ ಎದುರು ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆರ್‌ಸಿಬಿ ಆಘಾತ ಕಂಡಿತ್ತು. ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಶಾಬಾಜ್ ಅಹ್ಮದ್ ನೆಲಕಚ್ಚಿದ್ದರು. ತಂಡದಲ್ಲಿ ಉತ್ತಮ ಫಿನಿಷರ್ ಆಗಿ ಹೊರಹೊಮ್ಮುತ್ತಿರುವ ದಿನೇಶ್ ಕಾರ್ತಿಕ್ ಸನ್‌ರೈಸರ್ಸ್ ಎದುರು ಖಾತೆ ತೆರೆಯಲು ವಿಫಲರಾಗಿದ್ದರು. ಬೌಲರ್‌ಗಳ ಸಮರ್ಥ ನಿರ್ವಹಣೆ ತೋರಬೇಕಾದರೆ ಬ್ಯಾಟರ್‌ಗಳು ಉತ್ತಮ ಬೆಂಬಲ ಬರಬೇಕಿದೆ. ಡೆತ್ ಓವರ್‌ಗಳ ಎಕ್ಸ್‌ರ್ಟ್ ಹರ್ಷಲ್ ಪಟೇಲ್, ಜೋಶ್ ಹ್ಯಾಸಲ್‌ವುಡ್‌ಗೆ ಮೊಹಮದ್ ಸಿರಾಜ್ ಸಾಥ್ ನೀಡಬೇಕಿದೆ.
*ರಾಯಲ್ಸ್‌ಗೆ ಸೇಡಿನ ತವಕ
ಬ್ಯಾಟಿಂಗ್‌ನಲ್ಲಿ ಜೋಸ್ ಬಟ್ಲರ್, ಬೌಲಿಂಗ್‌ನಲ್ಲಿ ಯಜುವೇಂದ್ರ ಚಾಹಲ್ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ಮಿಂಚುತ್ತಿದ್ದಾರೆ. ಹಿಂದಿನ ಮುಖಾಮುಖಿಯಲ್ಲಿ ಮಾಜಿ ತಂಡದ ಎದುರು ಚಾಹಲ್ ಅದ್ಭುತ ನಿರ್ವಹಣೆ ತೋರಿದ್ದರೂ ತಂಡ ಗೆಲುವು ದಾಖಲಿಸಿತ್ತು. ಕಳೆದ ಪಂದ್ಯದ ಮೂಲಕ ಕರ್ನಾಟಕದ ದೇವದತ್ ಪಡಿಕಲ್ ಲಯಕ್ಕೆ ಮರಳಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ ಹಾಗೂ ರಿಯಾನ್ ಪರಾಗ್ ಜೋಡಿ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಬಟ್ಲರ್ ಆರಂಭಿಕ ಹಂತದಲ್ಲಿ ಸಿಡಿಯುತ್ತಿದ್ದರೆ, ಶಿಮ್ರೊನ್ ಹೆಟ್ಮೆಯರ್ ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿಯಾಗಿದ್ದಾರೆ.
ಟೀಮ್ ನ್ಯೂಸ್:
ರಾಜಸ್ಥಾನ: ಗೆಲುವಿನ ಲಯ ಕಂಡುಕೊಂಡಿರುವ ರಾಯಲ್ಸ್ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ.
ಆರ್‌ಸಿಬಿ: ಸತತವಾಗಿ ವೈಫಲ್ಯ ಕಾಣುತ್ತಿರುವ ಅನುಜ್ ರಾವತ್ ಬದಲಿಗೆ ರಜತ್ ಪಾಟಿದಾರ್ ಕಣಕ್ಕಿಳಿಬಹುದು.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 26, ಆರ್‌ಸಿಬಿ: 13, ರಾಜಸ್ಥಾನ: 10, ರದ್ದು: 3
ಹಿಂದಿನ ಹಣಾಹಣಿ: ಆರ್‌ಸಿಬಿಗೆ 4 ವಿಕೆಟ್ ಜಯ