ಕ್ರೀಡೆ

ಪಂಜಾಬ್ ಎದುರು ಮುಗ್ಗರಿಸಿದ ಆರ್‌ಸಿಬಿ; ಕಗ್ಗಂಟಾದ ಪ್ಲೇಆಫ್ ಕನಸು

ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಬಲಿಷ್ಠ ನಿರ್ವಹಣೆ ಎದುರು ಸಂಪೂರ್ಣ ಮಂಕಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ತನ್ನ ಮಹತ್ವದ ಪಂದ್ಯದಲ್ಲಿ 54 ರನ್‌ಗಳಿಂದ ಸೋಲನುಭವಿಸಿತು. ಇದರೊಂದಿಗೆ ಲೀಗ್‌ನಲ್ಲಿ 6ನೇ ಸೋಲು ಕಂಡ ಬೆಂಗಳೂರು ತಂಡದ ಪ್ಲೇಆಫ್ ಹಾದಿ ತೂಗುಯ್ಯಲೆಯಲ್ಲಿ ಸಿಲುಕಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಪಡೆಯ ನಾಲ್ಕರ ಘಟ್ಟದ ಹೋರಾಟ ಮುಂದುವರಿಯಿತು.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಆರಂಭಿಕ ಹಂತದಲ್ಲಿ ಜಾನಿ ಬೇರ್‌ಸ್ಟೋ (66 ರನ್, 29 ಎಸೆತ, 4ಬೌಂಡರಿ, 7ಸಿಕ್ಸರ್) ಹಾಗೂ ಮಧ್ಯಮ-ಸ್ಲಾಗ್ ಓವರ್‌ಗಳಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ (70ರನ್, 42ಎಸೆತ, 5ಬೌಂಡರಿ, 4 ಸಿಕ್ಸರ್) ತೋರಿದ ಸ್ಫೋಟಕ ಬ್ಯಾಟಿಂಗ್ ಫಲವಾಗಿ 9 ವಿಕೆಟ್‌ಗೆ 209 ರನ್ ಪೇರಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಆರ್‌ಸಿಬಿ 9 ವಿಕೆಟ್‌ಗೆ 155 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆರ್‌ಸಿಬಿ ಪ್ರಸಕ್ತ ಲೀಗ್‌ನಲ್ಲಿ ಎರಡೂ ಮುಖಾಮುಖಿಯಲ್ಲೂ ಪಂಜಾಬ್‌ಗೆ ಶರಣಾಯಿತು.