ಕ್ರೀಡೆ

ಪಂಜಾಬ್ ಬ್ಯಾಟರ್‌ಗಳ ಅಬ್ಬರಕ್ಕೆ ಮಂಕಾದ ಆರ್‌ಸಿಬಿ, ಪ್ಲೆಸಿಸ್ ಪಡೆಗೆ 5 ವಿಕೆಟ್ ಸೋಲು

ಮುಂಬೈ: ಪಂಜಾಬ್ ಕಿಂಗ್ಸ್ ಬ್ಯಾಟರ್‌ಗಳ ಸಂಘಟಿತ ನಿರ್ವಹಣೆ ಎದುರು ಮಂಕಾದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ತನ್ನ ಮೊದಲ ಪಂದ್ಯದಲ್ಲೇ ಮುಗ್ಗರಿಸಿತು. ಇಬ್ಬನಿ ಸಮಸ್ಯೆ ಜತೆಗೆ ನಿರ್ಣಾಯಕ ಹಂತದಲ್ಲಿ ಕೈಗೆ ಬಂದ ಕ್ಯಾಚ್ ಕೈಚೆಲ್ಲಿದ ಆರ್‌ಸಿಬಿ ತಂಡ 5 ವಿಕೆಟ್‌ಗಳಿಂದ ಸೋಲನುಭವಿಸಿತು. ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಶುಭಾರಂಭ ಕಂಡರೆ, ಫಾಫ್ ಡು ಪ್ಲೆಸಿಸ್ ನಿರಾಸೆ ಕಂಡರು.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರ್‌ಸಿಬಿ, ನೂತನ ನಾಯಕ  ಪ್ಲೆಸಿಸ್ (88 ರನ್, 57 ಎಸೆತ, 3 ಬೌಂಡರಿ, 7 ಸಿಕ್ಸರ್) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ (41*ರನ್, 29 ಎಸೆತ, 1 ಬೌಂಡರಿ, 2 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 2 ವಿಕೆಟ್‌ಗೆ 205 ರನ್ ಕಲೆಹಾಕಿತು. ಪ್ರತಿಯಾಗಿ ಪಂಜಾಬ್ ಕಿಂಗ್ಸ್ , ಶಿಖರ್ ಧವನ್ (43ರನ್, 29 ಎಸೆತ, 5 ಬೌಂಡರಿ, 1 ಸಿಕ್ಸರ್), ಭಾನುಕ ರಾಜಪಕ್ಷೆ (43ರನ್, 22 ಎಸೆತ, 2 ಬೌಂಡರಿ, 4 ಸಿಕ್ಸರ್), ಒಡೆನ್ ಸ್ಮಿತ್ (25*ರನ್, 8 ಎಸೆತ, 1 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 19 ಓವರ್‌ಗಳಲ್ಲಿ 5 ವಿಕೆಟ್‌ಗೆ 208 ಗೆಲುವಿನ ನಗೆ ಬೀರಿತು.

ಆರ್‌ಸಿಬಿ: 2 ವಿಕೆಟ್‌ಗೆ 205 (ಪ್ಲೆಸಿಸ್ 88, ಅನುಜ್ ರಾವತ್ 21, ವಿರಾಟ್ ಕೊಹ್ಲಿ 41*, ದಿನೇಶ್ ಕಾರ್ತಿಕ್ 32*, ಅರ್ಷ್‌ದೀಪ್ ಸಿಂಗ್ 31ಕ್ಕೆ 1, ರಾಹುಲ್ ಚಹರ್ 22ಕ್ಕೆ 1), ಪಂಜಾಬ್ ಕಿಂಗ್ಸ್: 19 ಓವರ್‌ಗಳಲ್ಲಿ 5 ವಿಕೆಟ್‌ಗೆ 208 (ಶಿಖರ್ ಧವನ್ 43, ಭಾನುಕ ರಾಜಪಕ್ಷೆ 43, ಮಯಾಂಕ್ ಅಗರ್ವಾಲ್ 32, ಶಾರುಖ್ ಖಾನ್ 24*, ಒಡೆನ್ ಸ್ಮಿತ್ 25*, ಮೊಹದಮ್ ಸಿರಾಜ್ 59ಕ್ಕೆ 2, ಅಕ್ಷ್ ದೀಪ್ 38ಕ್ಕೆ 1, ವನಿಂದು ಹಸರಂಗ ಡಿ ಸಿಲ್ವಾ 40ಕ್ಕೆ 1, ಹರ್ಷಲ್ ಪಟೇಲ್ 26ಕ್ಕೆ 1).