ಕ್ರೀಡೆ

ಇಂದು ಗೆದ್ದವರ ಹಣಾಹಣಿ ; ಆರ್‌ಸಿಬಿಗೆ ಕೆಎಲ್ ರಾಹುಲ್ ಪಡೆ ಸವಾಲು

ಮುಂಬೈ: ಹಿಂದಿನ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ ವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಐಪಿಎಲ್-15ರ ಪಂದ್ಯದಲ್ಲಿ ಮಂಗಳವಾರ ಎದುರಾಗಲಿವೆ. ಫಾಫ್ ಡು ಪ್ಲೆಸಿಸ್ ಪಡೆ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದರೆ, ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಎಲ್‌ಎಸ್‌ಜಿ ತಂಡ ಮುಂಬೈ ಇಂಡಿಯನ್ಸ್ ಎದುರು ಗೆಲುವು ದಾಖಲಿಸಿತ್ತು. ಅಂಕಪಟ್ಟಿಯಲ್ಲಿ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿರುವ ಎಲ್‌ಎಸ್‌ಜಿ ಹಾಗೂ ಆರ್‌ಸಿಬಿ ತಂಡಗಳ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ. ತಂಡ ಉತ್ತಮ ಲಯದಲ್ಲಿದ್ದರೂ ನಾಯಕ ಡು ಪ್ಲೆಸಿಸ್ ಫಾರ್ಮ್​ ಕಂಡುಕೊಳ್ಳಬೇಕಿದೆ. ಗೆಲುವಿನ ಲಯದಲ್ಲಿರುವ ಉಭಯ ತಂಡಗಳ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ.

*ಆರ್‌ಸಿಬಿಗೆ ಡಿಕೆ, ಮ್ಯಾಕ್ಸಿ ಪವರ್

ಆರ್‌ಸಿಬಿ ತಂಡ ಉತ್ತಮ ಆರಂಭ ದಕ್ಕಿಸಿಕೊಳ್ಳಲು ವಿಫಲವಾಗುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದಿನೇಶ್ ಕಾರ್ತಿಕ್ ಆಸರೆಯಾಗುತ್ತಿದ್ದಾರೆ. ಅನುಜ್ ರಾವತ್ ಹಾಗೂ ನಾಯಕ ಪ್ಲೆಸಿಸ್ ಜೋಡಿಯ ನಿಸ್ತೇಜ ನಿರ್ವಹಣೆ ಮುಂದುವರಿದರೆ, ವಿರಾಟ್ ಕೊಹ್ಲಿ ಇದುವರೆಗೆ ದೊಡ್ಡ ಮೊತ್ತ ಪೇರಿಸಿಲ್ಲ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅಬ್ಬರಿಸುವ ಮೂಲಕ ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆಲ್ರೌಂಡರ್ ಶಾಬಾಜ್ ಅಹ್ಮದ್ ಬ್ಯಾಟಿಂಗ್‌ನಲ್ಲಿ ಗಮನಸೆಳೆಯತ್ತಿದ್ದರೆ, ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಸಲ್‌ವುಡ್, ಶ್ರೀಲಂಕಾದ ವನಿಂದು ಹಸರಂಗ, ಸ್ಲಾಗ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್ ಎಲ್‌ಎಸ್‌ಜಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ.

*ಎಲ್‌ಎಸ್‌ಜಿಗಿದೆ ರಾಹುಲ್ ಬಲ

ಕಳೆದ ಪಂದ್ಯದಲ್ಲಿ ಶತಕ ಸಿಡಿಸುವ ಭರ್ಜರಿ ಫಾರ್ಮ್ ಕಂಡುಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ ಎಲ್‌ಎಸ್‌ಜಿ ತಂಡದ ಟ್ರಂಪ್ ಕಾರ್ಡ್ ಆಗಿ ಹೊರಹೊಮ್ಮಿದ್ದಾರೆ. ಆರಂಭಿಕ ಕ್ವಿಂಟನ್ ಡಿಕಾಕ್ ನಿರ್ವಹಣೆಯಲ್ಲಿ ಏರಿಳಿತ ಕಂಡರೆ, ಕರ್ನಾಟಕದ ಅನುಭವಿ ಮನೀಷ್ ಪಾಂಡೆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಯುವ ಬ್ಯಾಟರ್ ಆಯುಷ್ ಬಡೋನಿ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಜೇಸನ್ ಹೋಲ್ಡರ್, ಮಾರ್ಕಸ್ ಸ್ಟೋಯಿನಿಸ್ ಆಲ್ರೌಂಡ್ ನಿರ್ವಹಣೆಗೆ ಸೈ ಎನಿಸಿಕೊಂಡರೆ, ಆವೇಶ್ ಖಾನ್ ಹಾಗೂ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ತಕ್ಕ ಮಟ್ಟಿ ಯಶ ಸಾಧಿಸುತ್ತಿದ್ದಾರೆ.

ಟೀಮ್ ನ್ಯೂಸ್

ಆರ್‌ಸಿಬಿ: ಗೆಲುವಿನ ಲಯಕ್ಕೆ ಮರಳಿರುವ ಪ್ಲೆಸಿಸ್ ಬಳಗದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಎಲ್‌ಎಸ್‌ಜಿ: ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಲಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್