ಕ್ರೀಡೆ

ಇಂದು ಆರ್‌ಸಿಬಿ-ಸಿಎಸ್‌ಕೆ ಮುಖಾಮುಖಿ; ಗೆದ್ದವರಿಗೆ ಸೋತವರ ಸವಾಲು!

raghukittur

ಮುಂಬೈ: ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ತನ್ನ 5ನೇ ಪಂದ್ಯದಲ್ಲಿ, ಸತತ 4 ಸೋಲುಗಳಿಂದ ಕಂಗೆಟ್ಟಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಎದುರಿಸಲಿದೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರವೀಂದ್ರ ಜಡೇಜಾ ಸಾರಥ್ಯದ ಸಿಎಸ್‌ಕೆ ಪಾಲಿಗೆ ಮಹತ್ವ ಪಡೆದಿದೆ. ಅನುಭವಿ ಆಟಗಾರರನ್ನೇ ಹೊಂದಿರುವ ಸಿಎಸ್‌ಕೆ ಇದುವರೆಗೆ ಗೆಲುವಿನ ಖಾತೆ ತೆರೆಯಲು ವಿಫಲವಾಗಿದ್ದು, ಆರ್‌ಸಿಬಿ ಎದುರು ಗೆದ್ದರಷ್ಟೇ ಮುಂದಿನ ಪಂದ್ಯಗಳಲ್ಲಿ ಒತ್ತಡ ರಹಿತವಾಗಿ ಆಡಲು ಸಾಧ್ಯವಾಗಲಿದೆ. 2010ರಲ್ಲೂ ಆರಂಭಿಕ 4 ಪಂದ್ಯಗಳಲ್ಲಿ ಸೋತರೂ ಟ್ರೋಫಿ ಗೆದ್ದ ಇತಿಹಾಸ ಸಿಎಸ್‌ಕೆ ತಂಡಕ್ಕಿದೆ. 12 ವರ್ಷಗಳ ಹಿಂದಿನ ಸಾಧನೆಯೇ ತಂಡಕ್ಕೆ ಸ್ಫೂರ್ತಿಯಾಗಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಸೋತ ಬಳಿಕ ಸತತ 3 ಪಂದ್ಯ ಗೆದ್ದಿರುವ ಫಾಫ್ ಡು ಪ್ಲೆಸಿಸ್ ಪಡೆ ಗೆಲುವಿನ ನಾಗಾಲೋಟ ಮುಂದುವರಿಸುವ ವಿಶ್ವಾಸದಲ್ಲಿದೆ.

ಕೆಜಿಎಫ್ ವರ್ಸಸ್ ಆರ್‌ಆರ್‌ಆರ್!

ಪಂದ್ಯದಲ್ಲಿ ‘ಕೆಜಿಎಫ್’ ಮತ್ತು ‘ಆರ್‌ಆರ್‌ಆರ್’ ಬ್ಯಾಟಿಂಗ್ ನಿರ್ವಹಣೆ ನಿರ್ಣಾಯಕ ಪಾತ್ರವಹಿಸಲಿದೆ! ಆರ್‌ಸಿಬಿ ತಂಡದಲ್ಲಿ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪ್ಲೆಸಿಸ್ ‘ಕೆಜಿಎಫ್’ ಎಂದೇ ಗುರುತಿಸಲ್ಪಟ್ಟಿದ್ದರೆ, ಸಿಎಸ್‌ಕೆ ತಂಡದಲ್ಲಿ ರಾಬಿನ್ ಉತ್ಪಪ್ಪ, ಋತುರಾಜ್ ಗಾಯಕ್ವಾಡ್ ಮತ್ತು ರಾಯುಡು ‘ಆರ್‌ಆರ್‌ಆರ್’ ಎಂದೇ ಬಣ್ಣಿಸಲ್ಪಟ್ಟಿದ್ದಾರೆ. ಪ್ಲೆಸಿಸ್ ತಮ್ಮ ಮಾಜಿ ತಂಡದ ವಿರುದ್ಧ ಆರ್‌ಸಿಬಿ ನಾಯಕರಾಗಿ ಕಣಕ್ಕಿಳಿಯುತ್ತಿರುವುದು ಕೂಡ ಪಂದ್ಯದ ಕುತೂಹಲ ಹೆಚ್ಚಿಸಿದೆ.

* ಆತ್ಮವಿಶ್ವಾಸದಲ್ಲಿ ಆರ್‌ಸಿಬಿ

ಆರಂಭಿಕ ಬ್ಯಾಟರ್ ಅನುಜ್ ರಾವತ್, ಕಳೆದ ಪಂದ್ಯದಲ್ಲಿ ಮುಂಬೈ ಎದುರು ಅರ್ಧಶತಕ ಸಿಡಿಸುವ ಮೂಲಕ ಲಯಕ್ಕೆ ಮರಳಿದ್ದರೆ, ನಾಯಕ ಪ್ಲೆಸಿಸ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ರನ್‌ಗಳಿಸುತ್ತಿದ್ದಾರೆ. ಅಗ್ರ ಮೂವರು ಉತ್ತಮ ಫಾರ್ಮ್‌ನಲ್ಲಿದ್ದರೆ, ಅನುಭವಿಗಳಾದ ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹಮದ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ಮೊಹಮದ್ ಸಿರಾಜ್, ಡೇವಿಡ್ ವಿಲ್ಲಿ, ವನಿಂದು ಹಸರಂಗ ಬೌಲಿಂಗ್‌ನಲ್ಲಿ ಗಮನಸೆಳೆಯುತ್ತಿದ್ದರೆ, ಸಹೋದರಿ ನಿಧನದಿಂದಾಗಿ ಹರ್ಷಲ್ ಪಟೇಲ್ ಸೇವೆ ಈ ಪಂದ್ಯಕ್ಕೆ ಸಿಗುತ್ತಿಲ್ಲ. ಹರ್ಷಲ್ ಅಲಭ್ಯತೆ ಬೌಲಿಂಗ್ ವಿಭಾಗಕ್ಕೆ ಕೊಂಚ ಹಿನ್ನಡೆವುಂಟಾಗಿದೆ.

* ಪುಟಿದೇಳುವ ವಿಶ್ವಾಸದಲ್ಲಿ ಸಿಎಸ್‌ಕೆ

ಆರಂಭಿಕ ನಾಲ್ಕು ಪಂದ್ಯ ಸೋತರೂ ಟ್ರೋಫಿ ಗೆದ್ದಿರುವ ಇತಿಹಾಸ ಹೊಂದಿರುವ ಸಿಎಸ್‌ಕೆ ತಂಡಕ್ಕೆ ಉತ್ತಮ ಆರಂಭ ದಕ್ಕುತ್ತಿಲ್ಲ. ಋತುರಾಜ್ ಗಾಯಕ್ವಾಡ್ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದರೆ, ಅನುಭವಿ ರಾಬಿನ್ ಉತ್ತಪ್ಪ ಆರಂಭಿಕರಾಗಿ ಬಡ್ತಿ ಪಡೆದರೂ ದೊಡ್ಡ ಮೊತ್ತ ಗಳಿಸುತ್ತಿಲ್ಲ. ಅನುಭವಿಗಳಾದ ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆಯಿಂದ ಉತ್ತಮ ನಿರ್ವಹಣೆ ಬರಬೇಕಿದೆ. ವೇಗಿ ದೀಪಕ್ ಚಹರ್ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಗುತ್ತಿದೆ.

ಟೀಮ್ ನ್ಯೂಸ್:

ಆರ್‌ಸಿಬಿ: ಸಹೋದರಿ ಸಾವಿನಿಂದ ತಂಡ ತೊರೆದಿರುವ ಹರ್ಷಲ್ ಪಟೇಲ್ ಬದಲಿಗೆ ಸಿದ್ದಾರ್ಥ್ ಕೌಲ್ ಆಡುವ ಸಾಧ್ಯತೆಗಳಿವೆ. ಹರ್ಷಲ್ ಬಯೋಬಬಲ್‌ಗೆ ವಾಪಸಾದರೂ 3 ದಿನ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರಬೇಕಿದೆ. ಜೋಸ್ ಹ್ಯಾಸಲ್‌ವುಡ್ ಕೂಡ ತಂಡ ಸೇರಿದ್ದು, ಡೇವಿಡ್ ವಿಲ್ಲಿ ಬದಲು ಆಡಬಹುದು.

ಸಿಎಸ್‌ಕೆ: ದುಬಾರಿಯಾಗುತ್ತಿರುವ ಮುಕೇಶ್ ಚೌಧರಿ ಬದಲಿಗೆ ತುಷಾರ್ ದೇಶಪಾಂಡೆ ತಂಡಕ್ಕೆ ವಾಪಸಾಗಬಹುದು.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 28, ಆರ್‌ಸಿಬಿ: 9, ಸಿಎಸ್‌ಕೆ: 18, ರದ್ದು: 1.