ಮುಂಬೈ: ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಕೋಲ್ಕತ ನೈಟ್‌ರೈಡರ್ಸ್ ಹಾಗೂ ಅಂಕಪಟ್ಟಿಯಲ್ಲಿ ಮೇಲೇರುವ ತವಕದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-15ರಲ್ಲಿ ಸೋಮವಾರ ಎದುರಾಗಲಿವೆ. ಹಿಂದಿನ ಪಂದ್ಯಗಳಲ್ಲಿ ಸೋಲನುಭವಿಸಿರುವ ಉಭಯ ತಂಡಗಳು ಗೆಲುವಿನ ಲಯಕ್ಕೆ ಮರಳಲು ಹೋರಾಡಲಿವೆ. ಲೀಗ್‌ನಲ್ಲಿ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ತಲಾ 3 ಗೆಲುವು, ಸೋಲು ಕಂಡಿರುವ ಕೆಕೆಆರ್ ತಂಡ ಹೆಚ್ಚು ಒತ್ತಡದಲ್ಲಿದೆ. ಮತ್ತೊಂದೆಡೆ, ಬ್ಯಾಟಿಂಗ್‌ನಲ್ಲಿ ಪ್ರಮುಖರೇ ಕೈಕೊಡುತ್ತಿರುವುದು ರಾಜಸ್ಥಾನ ತಂಡದ ಚಿಂತೆಗೆ ಕಾರಣವಾಗಿದೆ.
ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮತ್ತೊಮ್ಮೆ ಟಾಸ್ ಪ್ರಮುಖ ಪಾತ್ರವಹಿಸಲಿದೆ. ಸತತ 2 ಸೋಲುಗಳಿಂದ ಕಂಗೆಟ್ಟಿರುವ ಕೆಕೆಆರ್ ತಂಡದಿಂದ ಸಂಘಟಿತ ನಿರ್ವಹಣೆ ಬರಬೇಕಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವಿಲರಾಗುತ್ತಿದ್ದರೆ, ನಿತೀಶ್ ರಾಣಾ, ಆಂಡ್ರೆ ರಸೆಲ್ ಭರವಸೆ ಉಳಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಇದುವರೆಗೆ ದೊಡ್ಡ ಮೊತ್ತ ಪೇರಿಸಿಲ್ಲ. ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್ ಆರಂಭಿಕ ಮುನ್ನಡೆ ತಂದುಕೊಡುತ್ತಿದ್ದರೆ, ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ಪ್ಯಾಟ್ ಕಮ್ಮಿನ್ಸ್ ಏರಿಳಿತ ಮುಂದುವರಿದಿದೆ.
ಆಸೀಸ್ ಬ್ಯಾಟರ್ ಆರನ್ ಫಿಂಚ್ ಸಿಕ್ಕ ಮೊದಲ ಅವಕಾಶವನ್ನು ಕೈಚೆಲ್ಲಿದ್ದಾರೆ. ಮತ್ತೊಂದೆಡೆ, ರಾಜಸ್ಥಾನ ಪರ ಬ್ಯಾಟಿಂಗ್ ವಿಭಾಗದಲ್ಲಿ ಜೋಸ್ ಬಟ್ಲರ್ (272ರನ್) ಹಾಗೂ ಬೌಲಿಂಗ್‌ನಲ್ಲಿ ಯಜುವೇಂದ್ರ ಚಾಹಲ್ (12 ವಿಕೆಟ್) ಹೊರತುಪಡಿಸಿ ಇತರರಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ.
ಟೀಮ್ ನ್ಯೂಸ್:
* ಕೆಕೆಆರ್: ಆರನ್ ಫಿಂಚ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ.
* ರಾಜಸ್ಥಾನ ರಾಯಲ್ಸ್: ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 25, ಕೆಕೆಆರ್: 13, ರಾಜಸ್ಥಾನ ರಾಯಲ್ಸ್: 11, ರದ್ದು: 1