ಕ್ರೀಡೆ

ಗುಜರಾತ್ ತಂಡವನ್ನು ಮಣಿಸಿದ ಪಂಜಾಬ್ ಕಿಂಗ್ಸ್; ಮಯಾಂಕ್ ಪಡೆಯ ಪ್ಲೇಆಫ್ ಆಸೆ ಜೀವಂತ

ಮುಂಬೈ: ಸತತ 5 ಜಯದೊಂದಿಗೆ ಬೀಗುತ್ತಿದ್ದ ಗುಜರಾತ್ ಟೈಟಾನ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡದ ಸರ್ವಾಂಗೀಣ ನಿರ್ವಹಣೆ ಎದುರು 8 ವಿಕೆಟ್‌ಗಳಿಂದ ಶರಣಾಯಿತು. ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ (33ಕ್ಕೆ 4) ಮಾರಕ ದಾಳಿ ಹಾಗೂ ಅನುಭವಿ ಬ್ಯಾಟರ್ ಶಿಖರ್ ಧವನ್ (62*ರನ್, 53 ಎಸೆತ, 8 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್‌ನಿಂದ ಮಯಾಂಕ್ ಅಗರ್ವಾಲ್ ಬಳಗ ಪ್ಲೇಆಫ್ ರೇಸ್‌ನಲ್ಲಿ ಉಳಿಯುವಲ್ಲಿ ಯಶಸ್ವಿಯಾಯಿತು. ಹಾರ್ದಿಕ್ ಪಾಂಡ್ಯ ಬಳಗ ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ, ಪಂಜಾಬ್ ಕಿಂಗ್ಸ್ 5ನೇ ಜಯದೊಂದಿಗೆ 5ನೇ ಸ್ಥಾನಕ್ಕೇರಿತು.

ಡಿವೈ ಪಾಟೀಲ್ ಸ್ಟೇಡಿಯಂ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್, ಸಾಯಿ ಸುದರ್ಶನ್ (65*ರನ್, 50 ಎಸೆತ, 5 ಬೌಂಡರಿ, 1 ಸಿಕ್ಸರ್) ಏಕಾಂಗಿ ನಿರ್ವಹಣೆ ಫಲವಾಗಿ 8 ವಿಕೆಟ್‌ಗೆ 143 ರನ್ ಕಲೆಹಾಕಿತು. ಪ್ರತಿಯಾಗಿ ಧವನ್ ಹಾಗೂ ಭಾನುಕ ರಾಜಪಕ್ಷ (40 ರನ್, 28 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಪಂಜಾಬ್, 16 ಓವರ್‌ಗಳಲ್ಲಿ 2 ವಿಕೆಟ್‌ಗೆ 145 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಗುಜರಾತ್ ಟೈಟಾನ್ಸ್: 8 ವಿಕೆಟ್‌ಗೆ 143 (ವೃದ್ಧಿಮಾನ್ ಸಾಹ 21, ಸಾಯಿ ಸುದರ್ಶನ್ 65*, ಡೇವಿಡ್ ಮಿಲ್ಲರ್ 11, ರಾಹುಲ್ ತೆವಾಟಿಯಾ 11, ಕಗಿಸೊ ರಬಾಡ 33ಕ್ಕೆ 4, ಅರ್ಷ್‌ದೀಪ್ ಸಿಂಗ್ 36ಕ್ಕೆ 1, ರಿಷಿ ಧವನ್ 26ಕ್ಕೆ 1, ಲಿಯಾಮ್ ಲಿವಿಂಗ್‌ಸ್ಟೋನ್ 15ಕ್ಕೆ 1), ಪಂಜಾಬ್ ಕಿಂಗ್ಸ್: 2 ವಿಕೆಟ್‌ಗೆ 145 (ಶಿಖರ್ ಧವನ್ 62*, ಭಾನುಕ ರಾಜಪಕ್ಷೆ 40, ಲಿಯಾಮ್ ವಿಲಿಂಗ್‌ಸ್ಟೋನ್ 30*, ಮೊಹಮದ್ ಶಮಿ 43ಕ್ಕೆ 1, ಲಾಕಿ ಫರ್ಗ್ಯುಸನ್ 29ಕ್ಕೆ 1)