ಮುಂಬೈ: ಸತತ 5 ಸೋಲುಗಳಿಂದ ಕಂಗೆಟ್ಟಿರುವ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್-15ರ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು ಎದುರಿಸಲಿದೆ. ಲೀಗ್‌ನಲ್ಲಿ ಇದುವರೆಗೂ ಗೆಲುವಿನ ಖಾತೆ ತೆರೆಯಲು ವಿಫಲವಾಗಿರುವ ರೋಹಿತ್ ಶರ್ಮ ಬಳಗ ಗೆಲುವಿನ ಒತ್ತಡಕ್ಕೆ ಸಿಲುಕಿದೆ. 2014ರಲ್ಲೂ ಆರಂಭಿಕ ಐದು ಪಂದ್ಯಗಳನ್ನು ಸೋತರೂ ಪ್ಲೇ ಆಫ್ ಹಂತಕ್ಕೇರಿದ ಇತಿಹಾಸ ಹೊಂದಿರುವ ಮುಂಬೈ ಇಂಡಿಯನ್ಸ್ ಪುಟಿದೇಳಬೇಕಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಳಲ್ಲೂ ಮುಂಬೈ ತಂಡ ವಿಫಲವಾಗಿದೆ. ಮತ್ತೊಂದೆಡೆ, ರಾಜಸ್ಥಾನ ರಾಯಲ್ಸ್ ಎದುರು ಕಳೆದ ಪಂದ್ಯದಲ್ಲಿ ವೀರೋಚಿತ ಸೋಲು ಕಂಡಿರುವ ಲಖನೌ ತಂಡ ಕೂಡ ಜಯದ ಹಂಬಲದಲ್ಲಿದೆ.
ಟೀಮ್ ನ್ಯೂಸ್:
ಮುಂಬೈ: ತಂಡದಲ್ಲಿ ಕೆಲವೊಂದು ಬದಲಾವಣೆ ಪಕ್ಕಾ ಆಗಿದೆ. ಟಿಮ್ ಡೇವಿಡ್ ವಾಪಸಾಗಬಹುದು. ಜತೆಗೆ ಫ್ಯಾಬಿಯನ್ ಅಲೆನ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಟಿಮ್ ಡೇವಿಡ್ ಬಂದರೆ ಟೈಮಲ್ ಮಿಲ್ಸ್ ಹೊರಗುಳಿಯಬೇಕು. ಸತತವಾಗಿ ವಿಲರಾಗುತ್ತಿರುವ ಎಂ.ಅಶ್ವಿನ್ ಬದಲಿಗೆ ಮಯಾಂಕ್ ಮಾರ್ಕಂಡೆಗೆ ಅವಕಾಶ ನೀಡಬಹುದು. ಬಸಿಲ್ ಥಂಪಿ ಬದಲಿಗೆ ಫ್ಯಾಬಿಯನ್ ಅಲೆನ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಎಲ್‌ಎಸ್‌ಜಿ: ಹಿಂದಿನ ಪಂದ್ಯದಲ್ಲಿ ಸೋಲಿನಲ್ಲೂ ತಂಡದ ನಿರ್ವಹಣೆ ಗಮನಸೆಳೆದಿತ್ತು. ಹೀಗಾಗಿ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ.
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್