ಕ್ರೀಡೆ

ರಾಹುಲ್ ಪಡೆಗೆ ಪ್ಲೇಆಫ್ ಹಂತಕ್ಕೇರುವ ತವಕ ; ಇಂದು ಎಲ್‌ಎಸ್‌ಜಿ-ಕೆಕೆಆರ್ ಮುಖಾಮುಖಿ

ಮುಂಬೈ: ಪ್ಲೇಆಫ್ ಹೊಸ್ತಿಲಿನಲ್ಲಿ ನಿಂತಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರ ಲೀಗ್ ಹಂತದ ತನ್ನ ಕಡೇ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು ಬುಧವಾರ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಎದುರಿಸಲಿದೆ. ಆರಂಭದಿಂದಲೂ ಸ್ಥಿರ ನಿರ್ವಹಣೆ ತೋರುತ್ತಾ ಬಂದಿದ್ದರೂ ಲಖನೌ ತಂಡ, ಕಡೇ 2 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಇದರಿಂದಾಗಿ ಲೀಗ್ ಹಂತದ ಕಡೇ ಪಂದ್ಯದವರೆಗೂ ಪ್ಲೇಆಫ್ ಖಾತ್ರಿಗೆ ಕಾಯುವಂತಾಗಿದೆ. ಮತ್ತೊಂದೆಡೆ, ಬಹುತೇಕ ಲೀಗ್‌ನಲ್ಲಿ ಹೋರಾಟ ಮುಕ್ತಾಯಗೊಳಿಸಿದರೂ ಲೆಕ್ಕಾಚಾರ ಹಾಗೂ ಅದೃಷ್ಟದ ಬಲದ ಮೇಲೆ ಕೆಕೆಆರ್ ತಂಡದ ಭವಿಷ್ಯ ಅಡಗಿದೆ.

* ಲಖನೌಗಿದೆ ಹೆಚ್ಚಿನ ಅವಕಾಶ

ಲಖನೌ ಸೂಪರ್‌ಜೈಂಟ್ಸ್ ಗೆಲುವು ದಾಖಲಿಸಿದರೆ ಅಂಕಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೇರಲಿದೆ. ಜತೆಗೆ ಪ್ಲೇಆಫ್ ಪ್ರವೇಶವೂ ಖಚಿತಗೊಳ್ಳಲಿದೆ. ರಾಜಸ್ಥಾನ ತಂಡ ತನ್ನ ಕಡೇ ಪಂದ್ಯದಲ್ಲಿ ಸೋತರೆ ರಾಹುಲ್ ಪಡೆ 2ನೇ ಸ್ಥಾನದೊಂದಿಗೆ ಮೊದಲ ಕ್ವಾಲಿಫೈಯರ್‌ಗೂ ಅರ್ಹತೆ ಗಳಿಸಲಿದೆ. ಹೀಗಾಗಿ 2ನೇ ಸ್ಥಾನಕ್ಕೇರುವ ದೃಷ್ಟಿಯಿಂದ ರಾಹುಲ್ ಪಡೆ ಪಾಲಿಗೆ ಈ ಪಂದ್ಯ ಮಹತ್ವದ್ದಾಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಸೋತಿರುವ ಲಖನೌ, ಹ್ಯಾಟ್ರಿಕ್ ಸೋಲಿನಿಂದ ಪಾರಾಗಿ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಇದುವರೆಗೆ ಆಡಿರುವ 13 ಪಂದ್ಯಗಳಿಂದ 7 ಸೋಲು, 6 ಗೆಲುವಿನೊಂದಿಗೆ 12 ಅಂಕ ಸಂಪಾದಿಸಿರುವ ಕೆಕೆಆರ್ ಭರ್ಜರಿ ಗೆಲುವು ಸಾಧಿಸಿದರಷ್ಟೇ, ಲೆಕ್ಕಾಚಾರದ ದೃಷ್ಟಿಯಿಂದಲಾದರೂ ಪ್ಲೇಆಫ್ ಆಸೆ ಜೀವಂತ ಉಳಿಸಿಕೊಳ್ಳಲಿದೆ.

ಟೀಮ್ ನ್ಯೂಸ್:

ಲಖನೌ: ದುಶ್ಮಾಂತ ಚಮೀರ ಮತ್ತು ಎವಿನ್ ಲೆವಿಸ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಬಹುದು

ಕಳೆದ ಪಂದ್ಯ: ರಾಜಸ್ಥಾನ ಎದುರು 24 ರನ್ ಸೋಲು

ಕೆಕೆಆರ್: ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಗಾಯದಿಂದಾಗಿ ಕಡೇ ಲೀಗ್ ಪಂದ್ಯಕ್ಕೆ ಅಲಭ್ಯತೆರಾಗಿದ್ದಾರೆ. ಅವರ ಸ್ಥಾನವನ್ನು ಪ್ರಥಮ್ ಸಿಂಗ್ ಅಥವಾ ಅಭಿಜಿತ್ ತೋಮರ್ ತುಂಬಬಹುದು.

ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು 54 ರನ್ ಜಯ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ಸ್‌ ಸ್ಪೋರ್ಟ್ಸ್

ಕಳೆದ ಮುಖಾಮುಖಿ: ಲಖನೌಗೆ 75 ರನ್ ಜಯ