ಕ್ರೀಡೆ

ಇಂದು ಎಲ್‌ಎಸ್‌ಜಿ-ಡೆಲ್ಲಿ ಕ್ಯಾಪಿಟಲ್ಸ್ ಹಣಾಹಣಿ; ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿ ಕೆಎಲ್ ರಾಹುಲ್ ಪಡೆ

ಮುಂಬೈ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರ ತನ್ನ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಟೀಮ್ ಇಂಡಿಯಾದ ಭವಿಷ್ಯದ ನಾಯಕರಾಗುವ ನಿಟ್ಟಿನಲ್ಲಿ ಪೈಪೋಟಿಯಲ್ಲಿರುವ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ನಡುವಿನ ಮುಖಾಮುಖಿಗೆ ಡಿವೈ ಪಾಟೀಲ್ ಸ್ಟೇಡಿಯಂ ವೇದಿಕೆಯಾಗಲಿದೆ. ರೋಹಿತ್ ಶರ್ಮ ಉತ್ತರಾಧಿಕಾರಿಯಾಗಿ ಬಿಂಬಿಸಿ ಕೊಂಡಿರುವ ಉಭಯ ಆಟಗಾರರ ಪಾಲಿಗೆ ಈ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆರಂಭಿಕ 3 ಪಂದ್ಯಗಳಿಗೆ ಅಲಭ್ಯರಾಗಿದ್ದ ಆಸೀಸ್ ಆಟಗಾರರ ಡೇವಿಸ್ ವಾರ್ನರ್ ಹಾಗೂ ಅನ್ರಿಚ್ ನೋಕಿಯ ಸೇರ್ಪಡೆಯಿಂದ ಡೆಲ್ಲಿ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇತ್ತ ಲಖನೌ ತಂಡವೂ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಸೇರ್ಪಡೆಯಿಂದ ಸಮತೋಲನ ಹೆಚ್ಚಿಸಿಕೊಳ್ಳುವ ಹಂಬಲದಲ್ಲಿದೆ.

*ಡೆಲ್ಲಿಗೆ ವಾರ್ನರ್, ನೋಕಿಯ ಬಲ

ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಆಘಾತಕಾರಿ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೊಂದು ಹೊಸ ತಂಡದ ಸವಾಲು ಎದುರಾಗಲಿದೆ. ಪೃಥ್ವಿ ಷಾ, ಮಂದೀಪ್ ಸಿಂಗ್, ಲಲಿತ್ ಯಾದವ್‌ರಂಥ ಎರಡನೇ ಸ್ತರದ ಆಟಗಾರರು ನಿರೀಕ್ಷಿತ ಮಟ್ಟದಲ್ಲಿ ನಿರ್ವಹಣೆ ತೋರುತ್ತಿಲ್ಲ. ಭರವಸೆಯ ಶಾರ್ದೂಲ್ ಠಾಕೂರ್ ಎರಡೂ ವಿಭಾಗಗಳಲ್ಲೂ ನಿರಾಸೆ ಮೂಡಿಸುತ್ತಿದ್ದರೆ, ಮುಸ್ತಾಫಿಜರ್, ಖಲೀಲ್ ಅಹ್ಮದ್, ಕುಲದೀಪ್ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಪಾಕ್ ಪ್ರವಾಸದ ಬಳಿಕ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತವರಿಗೆ ವಾಪಸಾಗಿದ್ದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ಹಾಗೂ ಗಾಯದಿಂದ ಚೇತರಿಸಿಕೊಂಡಿರುವ ದಕ್ಷಿಣ ಆಫ್ರಿಕಾ ವೇಗಿ ಅನ್ರಿಚ್ ನೋಕಿಯ ಈ ಪಂದ್ಯದಲ್ಲಿ ಆಡಲು ಲಭ್ಯರಾಗಿದ್ದಾರೆ.

*ಎಲ್‌ಎಸ್‌ಜಿಗೆ ಸ್ಟೋಯಿನಿಸ್ ಶಕ್ತಿ?

ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಸೋತ ಬಳಿಕ ಆಡಿದ ಎರಡೂ ಪಂದ್ಯಗಳಲ್ಲೂ ಜಯ ದಾಖಲಿಸಿದ ಎಲ್‌ಎಸ್‌ಜಿ ಆತ್ಮವಿಶ್ವಾಸದಲ್ಲಿದೆ. ಪಾಕಿಸ್ತಾನ ಪ್ರವಾಸ ಮುಕ್ತಾಯಗೊಂಡ ಬೆನ್ನಲ್ಲೇ ಮಾರ್ಕಸ್ ಸ್ಟೋಯಿನಿಸ್ ಲಖನೌ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆಡಲು ಅವರು ಲಭ್ಯರಿರುವರೇ ಎಂಬುದು ಖಚಿತಗೊಂಡಿಲ್ಲ. ಕರ್ನಾಟಕದ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಇದುವರೆಗೆ ಸ್ಫೋಟಿಸದಿರುವುದು ಲಖನೌಗೆ ಹಿನ್ನಡೆ ತಂದಿದೆ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ ಹಾಗೂ ಆಯುಷ್ ಬಡೋನಿ ಆಸರೆಯಾಗುತ್ತಿದ್ದಾರೆ. ಆಲ್ರೌಂಡರ್ ಜೇಸನ್ ಹೋಲ್ಡರ್ ಈಗಾಗಲೆ ತಂಡದ ಬಲ ಹೆಚ್ಚಿಸಿದ್ದಾರೆ.

ಟೀಮ್ ನ್ಯೂಸ್:

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಅನ್ರಿಚ್ ನೋಕಿಯ ಆಗಮನದಿಂದಾಗಿ 11ರ ಬಳಗದಲ್ಲಿ ಕನಿಷ್ಠ 2 ಬದಲಾವಣೆ ನಿರೀಕ್ಷಿಸಲಾಗಿದೆ. ವಾರ್ನರ್ ಆಗಮನದಿಂದ ಟಿಮ್ ಸೀಫರ್ಟ್ ಹೊರಗುಳಿದರೆ, ನೋಕಿಯಗೆ ರೊವ್ಮನ್ ಪೊವೆಲ್ ಅಥವಾ ಖಲೀಲ್ ಅಹ್ಮದ್ ಹೊರಗುಳಿಯಬಹುದು. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಮಂದೀಪ್ ಸಿಂಗ್ ಬದಲಿಗೆ ಕೆಎಸ್ ಭರತ್ ಅಥವಾ ಯಶ್ ಧುಲ್ ಆಡುವ ಸಾಧ್ಯತೆಗಳಿವೆ.

ಲಖನೌ ಸೂಪರ್‌ಜೈಂಟ್ಸ್: ಬಬಲ್ ಟು ಬಬಲ್ ವರ್ಗಾವಣೆಯಿಂದ ಮಾರ್ಕಸ್ ಸ್ಟೋಯಿನಿಸ್ ಕ್ವಾರಂಟೈನ್ ತಾಪತ್ರಯ ಇಲ್ಲದೆ ಈ ಪಂದ್ಯದಲ್ಲೇ ಆಡಲು ಲಭ್ಯರಾದರೆ, ಆಂಡ್ರೋ ಟೈ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಮನೀಷ್ ಪಾಂಡೆಯನ್ನು ಹೊರಗಿಟ್ಟರೆ, ಮನನ್ ವೋಹ್ರಾಗೆ ಅವಕಾಶ ನೀಡಬಹುದು ಅಥವಾ ಬೌಲಿಂಗ್ ವಿಭಾಗ ಬಲಪಡಿಸಲು ಅಂಕಿತ್ ರಜಪೂತ್‌ಗೆ ಅವಕಾಶ ಕಲ್ಪಿಸಬಹುದು.

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್