ಕ್ರೀಡೆ

ಇಂದು ಕೆಕೆಆರ್-ಪಂಜಾಬ್ ಕಿಂಗ್ಸ್ ಹಣಾಹಣಿ

ಮುಂಬೈ: ನಿರೀಕ್ಷೆಗೂ ಮೀರಿ ಭರ್ಜರಿ ಆರಂಭ ಕಂಡಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡಗಳು ಐಪಿಎಲ್-15ರ ಹಣಾಹಣಿಯಲ್ಲಿ ಶುಕ್ರವಾರ ಎದುರಾಗಲಿವೆ. ಬ್ಯಾಟರ್‌ಗಳ ಪಾಲಿಗೆ ಸ್ವರ್ಗದಂತಿರುವ ವಾಂಖೆಡೆ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಬ್ಯಾಟರ್‌ಗಳು ಅಬ್ಬರಿಸಲು ಸಜ್ಜಾಗಿದ್ದಾರೆ. ಮರೀನ್ ಡ್ರೈವ್ ತಟದಲ್ಲಿರುವ ಮೈದಾನದಲ್ಲಿ ಇಬ್ಬನಿ ಸಮಸ್ಯೆ ಮುಂದುವರಿಯಲಿದ್ದು, ಟಾಸ್ ಗೆದ್ದವರೇ ಬಾಸ್ ಆಗುವುದು ನಿಶ್ಚಿತವಾಗಲಿದೆ. ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದ ಪಂಜಾಬ್ ತಂಡ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಎದುರು ಭರ್ಜರಿ ಗೆಲುವು ದಾಖಲಿಸಿತ್ತು. ಮತ್ತೊಂದೆಡೆ, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಮಣಿಸಿದ್ದ ಕೆಕೆಆರ್, ಬುಧವಾರ ಆರ್‌ಸಿಬಿ ಎದುರು ಮುಗ್ಗರಿಸಿತ್ತು. ಇದೀಗ ಶ್ರೇಯಸ್ ಅಯ್ಯರ್ ಪಡೆ ಗೆಲುವಿನ ಹಳಿಗೇರುವ ತವಕದಲ್ಲಿದೆ.

  • ಪಂಜಾಬ್ ಕಿಂಗ್ಸ್‌ಗೆ ರಬಾಡ ಬಲ ಆರ್‌ಸಿಬಿ ನೀಡಿದ್ದ 200ಕ್ಕೂ ಹೆಚ್ಚಿನ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ್ದ ಪಂಜಾಬ್ ಕಿಂಗ್ಸ್ ತಂಡ ಗೆಲುವಿನ ಓಟ ಮುಂದುವರಿಸುವ ಕನಸಿನಲ್ಲಿದೆ. ಆರ್‌ಸಿಬಿ ಎದುರು ಬೌಲರ್‌ಗಳು ದುಬಾರಿಯಾಗಿದ್ದರೂ ಬ್ಯಾಟರ್ ಮಿಂಚಿದ್ದರು. ಟೂರ್ನಿಗೆ ತಡವಾಗಿ ಆಗಮಿಸಿದ್ದ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಕ್ವಾರಂಟೈನ್ ಅವಧಿಯನ್ನು ಮುಕ್ತಾಯಗೊಳಿಸಿದ್ದು, ಈ ಪಂದ್ಯ ಆಡಲು ಲಭ್ಯರಾಗಿದ್ದಾರೆ. ಇದರಿಂದ ತಂಡದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಲಿದೆ. ನಾಯಕ ಮಯಾಂಕ್ ಅಗರ್ವಾಲ್, ಅನುಭವಿ ಶಿಖರ್ ಧವನ್, ಭಾನುಕ ರಾಜಪಕ್ಷ ಅಗ್ರ ಕ್ರಮಾಂಕದ ಬಲವಾಗಿದ್ದರೆ, ಒಡೆನ್ ಸ್ಮಿತ್, ಶಾರುಖ್ ಖಾನ್ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. 19 ವಯೋಮಿತಿ ವಿಶ್ವಕಪ್ ಹೀರೋ ರಾಜ್ ಬಾವಾ ಸಿಕ್ಕ ಅವಕಾಶವನ್ನು ಕೈಚೆಲ್ಲಿದ್ದರು.
  • ಸುಧಾರಿಸಬೇಕಿದೆ ಕೆಕೆಆರ್ ಬ್ಯಾಟಿಂಗ್ ಬ್ಯಾಟರ್‌ಗಳ ನೀರಸ ನಿರ್ವಹಣೆಯಿಂದಲೇ ಕೆಕೆಆರ್ ತಂಡ ಆರ್‌ಸಿಬಿ ಎದುರು ಮುಗ್ಗರಿಸಿತ್ತು. ವೇಗಿಗಳಾದ ಉಮೇಶ್ ಯಾದವ್, ಟಿಮ್ ಸೌಥಿ ಹಾಗೂ ಸ್ಪಿನ್ನರ್ ವರುಣ್ ಚಕ್ರವರ್ತಿ ಉತ್ತಮ ಲಯದಲ್ಲಿದ್ದರೆ, ಬ್ಯಾಟರ್‌ಗಳಿಂದ ಬೌಲರ್‌ಗಳಿಗೆ ಅಗತ್ಯ ಸಾಥ್ ಸಿಗಬೇಕಿದೆ. ಆರಂಭಿಕರಾದ ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್ ಸ್ಫೋಟಿಸಬೇಕಿದೆ. ನಿತೀಶ್ ರಾಣಾ, ನಾಯಕ ಶ್ರೇಯಸ್ ಅಯ್ಯರ್, ಸ್ಯಾಮ್ ಬಿಲ್ಲಿಂಗ್ಸ್, ವಿಕೆಟ್ ಕೀಪರ್-ಬ್ಯಾಟರ್ ಶೆಲ್ಡನ್ ಜಾಕ್ಸನ್ ಹಾಗೂ ಆಲ್ರೌಂಡರ್ ಆಂಡ್ರೆ ರಸೆಲ್ ಜವಾಬ್ದಾರಿ ಅರಿತು ಬ್ಯಾಟ್ ಬೀಸಬೇಕಿದೆ.

ಟೀಮ್ ನ್ಯೂಸ್: ಪಂಜಾಬ್ ಕಿಂಗ್ಸ್: ಕಗಿಸೊ ರಬಾಡ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಕಳೆದ ಪಂದ್ಯದಲ್ಲಿ ಕೇವಲ 3 ವಿದೇಶಿ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ರಬಾಡ ಆಗಮನದಿಂದಾಗಿ ಸಂದೀಪ್ ಶರ್ಮ ಹೊರಗುಳಿಯಲಿದ್ದಾರೆ.

ಕೋಲ್ಕತ ನೈಟ್‌ರೈಡರ್ಸ್‌: ವಿದೇಶಿ ಆಟಗಾರರಾದ ಪ್ಯಾಟ್ ಕಮ್ಮಿನ್ಸ್, ಆರನ್ ಫಿಂಚ್ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಆರ್‌ಸಿಬಿ ಎದುರು ಬೌಂಡರಿ ಗೆರೆ ಬಳಿ ಬಿದ್ದು ಭುಜದ ನೋವು ಅನುಭವಿಸಿದ ಆಲ್ರೌಂಡರ್ ಆಂಡ್ರೆ ರಸೆಲ್ ಕೇವಲ 3 ಓವರ್‌ಗಳನ್ನಷ್ಟೇ ಎಸೆದಿದ್ದರು. ಒಂದು ವೇಳೆ ರಸೆಲ್ ಅಲಭ್ಯರಾದರೆ ಮೊಹಮದ್ ನಬಿ ಅಥವಾ ಚಮಿಕ ಕರುಣರತ್ನೆ ಹನ್ನೊಂದರ ಬಳಗಕ್ಕೆ ಸೇರ್ಪಡೆಯಾಗಲಿದ್ದಾರೆ.

ಮುಖಾಮುಖಿ: 29

ಕೆಕೆಆರ್: 19

ಪಂಜಾಬ್: 10

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್