ಮುಂಬೈ: ವೇಗದ ಬೌಲರ್ ಉಮೇಶ್ ಯಾದವ್ (23ಕ್ಕೆ 4) ಮಾರಕ ದಾಳಿ ಹಾಗೂ ಆಲ್ರೌಂಡರ್ ಆಂಡ್ರೆ ರಸೆಲ್ (70*ರನ್, 31 ಎಸೆತ, 2 ಬೌಂಡರಿ, 8 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಫಲವಾಗಿ ಕೋಲ್ಕತ ನೈಟ್ ರೈಡರ್ಸ್ ತಂಡ ಐಪಿಎಲ್-15ರ ತನ್ನ 3ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಕಳೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ನಿರಾಸೆ ಅನುಭವಿಸಿದ್ದ ಕೆಕೆಆರ್ ಗೆಲುವಿನ ಹಳಿಗೇರಿದರೆ, ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ತಂಡ ನಿರಾಸೆ ಅನುಭವಿಸಿತು.
ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಉಮೇಶ್ ಯಾದವ್ ಹಾಗೂ ಅನುಭವಿ ಟಿಮ್ ಸೌಥಿ (36ಕ್ಕೆ 2) ಜೋಡಿಯ ಮಾರಕ ದಾಳಿಗೆ ನಲುಗಿ 18.2 ಓವರ್‌ಗಳಲ್ಲಿ 137 ರನ್‌ಗಳಿಗೆ ಸರ್ವಪತನ ಕಂಡಿತು. ಭಾನುಕ ರಾಜಪಕ್ಷೆ (31ರನ್, 9 ಎಸೆತ, 3 ಬೌಂಡರಿ, 3 ಸಿಕ್ಸರ್) ಆರಂಭಿಕ ಹಂತದಲ್ಲಿ ಹಾಗೂ ಕಗಿಸೊ ರಬಾಡ (25ರನ್, 16 ಎಸೆತ, 4 ಬೌಂಡರಿ, 1 ಸಿಕ್ಸರ್) ಕೆಳಕ್ರಮಾಂಕದಲ್ಲಿ ಕೆಲಕಾಲ ಸ್ಫೋಟಿಸಿದ ಪರಿಣಾಮ ಪಂಜಾಬ್ ತಂಡ ಸಾಧಾರಣ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಬಳಿಕ ಈ ಸಾಧಾರಣ ಮೊತ್ತ ಬೆನ್ನಟ್ಟಿದ ಕೆಕೆಆರ್ ತಂಡ ಆರಂಭಿಕ ವೈಫಲ್ಯ ನಡುವೆಯೂ ರಸೆಲ್ ಹಾಗೂ ಸ್ಯಾಮ್ ಬಿಲ್ಲಿಂಗ್ಸ್ ಜೋಡಿ ಮುರಿಯದ 5ನೇ ವಿಕೆಟ್‌ಗೆ 90 ರನ್ ಜತೆಯಾಟವಾಡಿ 14.3 ಓವರ್‌ಗಳಲ್ಲಿ 4 ವಿಕೆಟ್‌ಗೆ 141 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ಪಂಜಾಬ್ ಕಿಂಗ್ಸ್: 18.2 ಓವರ್‌ಗಳಲ್ಲಿ 137 (ಭಾನುಕ ರಾಜಪಕ್ಷ 31, ಲಿಯಮ್ ಲಿವಿಂಗ್‌ಸ್ಟೋನ್ 19, ಹರ್‌ಪ್ರೀತ್ ಬ್ರಾರ್ 14, ಕಗಿಸೊ ರಬಾಡ 25, ಉಮೇಶ್ ಯಾದವ್ 23ಕ್ಕೆ 4, ಟಿಮ್ ಸೌಥಿ 36ಕ್ಕೆ 2), ಕೋಲ್ಕತ ನೈಟ್ ರೈಡರ್ಸ್: 14.3 ಓವರ್‌ಗಳಲ್ಲಿ 4 ವಿಕೆಟ್‌ಗೆ 141 (ಶ್ರೇಯಸ್ ಅಯ್ಯರ್ 26, ಸ್ಯಾಮ್ ಬಿಲ್ಲಿಂಗ್ಸ್ 24*, ಆಂಡ್ರೆ ರಸೆಲ್ 70*,ರಾಹುಲ್ ಚಹರ್ 13ಕ್ಕೆ 2)